ಹಫ್ತಾ ವಸೂಲಿಯಲ್ಲಿ ನಕ್ಸಲರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ನ. 28-
ಕಳೆದೊಂದು ದಶಕದಿಂದ ಮಲೆನಾಡಿನಲ್ಲಿ ಬೇರೂರಿರುವ ನಕ್ಸಲರು ಈಗ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೇಗಾದರೂ ಸಂಘಟನೆ ಬಲಗೊಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಹಫ್ತಾ ವಸೂಲಿಗೆ ಮುಂದಾಗಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ (ಕುರಾಉ)ದಿಂದ ಹೊರ ಹೋಗಲು ಇಚ್ಛಿಸಿ ಸರ್ಕಾರಕ್ಕೆ ಪರಿಹಾರ ಕೇಳಿರುವ ಜನರನ್ನು ನಕ್ಸಲರು ಸಂಪರ್ಕಿಸುತ್ತಿದ್ದಾರೆ. ಅವರಿಂದ ಪರಿಹಾರದ ಮೊತ್ತದಲ್ಲಿ ಶೇ.5ರಿಂದ ಶೇ.10ರವರೆಗೆ ಪರಿಹಾರವನ್ನು ತಮ್ಮ ಸಂಘಟನೆಗೆ ನೀಡಬೇಕೆಂದು ನಕ್ಸಲರು ತಾಕೀತು ಮಾಡುತ್ತಿದ್ದಾರೆ.
ತಾವು ಮಲೆನಾಡಿನಲ್ಲಿ ಬಂದು ನೆಲೆಸಿದ್ದರಿಂದಲೇ ಸರ್ಕಾರ ವಿಶೇಷ ಪ್ಯಾಕೇಜ್ನಡಿ ಪರಿಹಾರ ನೀಡುತ್ತಿದೆ. ಆದುದರಿಂದ ಹಣ ಕೊಡಲೇಬೇಕೆಂದು ತಾಕಿತ್ತು ಮಾಡಿದ್ದಾರೆಂದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುವವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕುರಾಉ ವ್ಯಾಪ್ತಿಯ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಉದ್ಯಾನವನದಿಂದ ಹೂರ ಹೋಗಲು ಈವರೆಗೆ 587 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ರಾಜ್ಯ ಸರ್ಕಾರ 70 ಕುಟುಂಬಗಳಿಗೆ 10.39 ಕೋಟಿ ಪರಿಹಾರ ನೀಡಿದೆ. ಪರಿಹಾರಕ್ಕಾಗಿ ಕಾಯುತ್ತಿರುವವರನ್ನು ಕೆಂಪು ಉಗ್ರರು ಸಂಪರ್ಕಿಸಿದ್ದಾರೆ. ನಕ್ಸಲರ ಈ ನಡವಳಿಕೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ.
ಹೊಸ ತಂತ್ರ: 2001ರಲ್ಲಿ ಕುರಾಉ ಘೋಷಣೆಯಾಯಿತು. ನಂತರ ಸರ್ಕಾರ ಜನರನ್ನು ಆ ಜಾಗದಿಂದ ಬಲವಂತವಾಗಿ ಹೊರ ಹಾಕಲಿದೆ. ಇದರಿಂದ ಅಲ್ಲಿನ ಮೂಲ ನಿವಾಸಿಗಳಿಗೆ ತುಂಬಾ ತೊಂದರೆಯಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಸಕ್ರಿಯವಾಯಿತು.
ತಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಸ್ಥಳೀಯರೂ ನಕ್ಸಲರನ್ನು ಬೆಂಬಲಿಸಿದರು. ಆಗ ನಕ್ಸಲರಿಗೆ ನೆಲೆ ಕಾಣುವುದು ಮುಖ್ಯವಾಗಿತ್ತು. ಸ್ಥಳೀಯರಿಂದ ದಿನ ಉಪಯೋಗಿ ವಸ್ತುಗಳನ್ನು ಮಾತ್ರ ನಿರೀಕ್ಷಿಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಬೇರೆಡೆ ಇರುವ ತಮ್ಮ ಸಂಘಟನೆಗಳಿಂದ ತರಿಸಿಕೊಳ್ಳುತ್ತಿದ್ದರು.
ಆದರೆ, ಉದ್ಯಾನವನ ವ್ಯಾಪ್ತಿಯಿಂದ ಯಾರನ್ನೂ ಬಲವಂತಾಗಿ ಹೊರ ಹಾಕುವುದಿಲ್ಲ ಎಂದಿತು ಸರ್ಕಾರ. ಆ ಪ್ರದೇಶದಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿತು. ರಸ್ತೆ, ಸೇತುವೆ ನಿರ್ಮಾಣ, ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸೌಲಭ್ಯ ಹೀಗೆ ಇತರೆ ಮೂಲ ಸೌಕರ್ಯಗಳನ್ನು ನೀಡಿದ ಸರ್ಕಾರದ ಮೇಲೆ ಸ್ಥಳೀಯರ ವಿಶ್ವಾಸ ಹೆಚ್ಚಾಯಿತು. ಕ್ರಮೇಣ ನಕ್ಸಲರಿಗೆ ನೀಡುತ್ತಿದ್ದ ಸಹಕಾರವನ್ನು ನಿಲ್ಲಿಸಿದರು.
ಈಗೀಗ ನಕ್ಸಲರು ಹಣದ ಕೊರತೆ ಎದುರಿಸುತ್ತಿದ್ದಾರೆ. ಸಂಘಟನೆ ಬಲಗೊಳಿಸಲು ಉದ್ಯಾನವನದಿಂದ ಹೊರ ಹೋಗುವವರನ್ನು ಗುರಿಯನ್ನಾಗಿಸಿಕೊಂಡು ಹಣ ವಸೂಲಿಗೆ ಮಾಡುತ್ತಿದ್ದಾರೆ.
ಮನೆಗಳು ನೆಲ ಸಮ: ಮುಖ್ಯವಾಹಿನಿಗೆ ಬರಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಉದ್ದೇಶದಿಂದ ಇಲ್ಲಿನ ನಿವಾಸಿಗರು ಸರ್ಕಾರಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಅರ್ಜಿಯಲ್ಲಿಯೂ ನಕ್ಸಲರ ಉಪಾಟಳದಿಂದ ಹೊರಗೆ ಹೋಗಬೇಕೆಂದು ಹೇಳಿಕೊಂಡಿಲ್ಲ. ಅರ್ಜಿಯಲ್ಲಿ ನಕ್ಸಲರ ಕಿರುಕುಳದ ಬಗ್ಗೆ ತಿಳಿಸಿದರೆ ಮುಂದೆ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕಷ್ಟವಾಗುತ್ತದೆ ಎಂಬ ಉದ್ದೇಶ ಅರ್ಜಿದಾರದ್ದಾಗಿರಬಹುದು.
ಕೆಲವರು ಪರಿಹಾರ ಸಿಗುವ ಮೊದಲೇ ತಮ್ಮ ಮನೆಗಳನ್ನು ಬಿಟ್ಟು ಹೋಗಿದ್ದಾರೆ. ಪರಿಹಾರ ಪಡೆದು ಈಗಾಗಲೇ ಹೊರ ಹೋಗಿರುವವರ ಮನೆಗಳಲ್ಲಿ ನಕ್ಸಲರು ಆಶ್ರಯ ಪಡೆಯುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅವುಗಳನ್ನು ಕೆಡುವುತ್ತಿವೆ.
ಅರ್ಜಿ ಸಲ್ಲಿಸಿರುವ ಎಲ್ಲ 587 ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ, ಅವರ ಮನೆಗಳನ್ನು ಕೆಡವಿದರೆ, ನಕ್ಸಲರಿಗೆ ಅಗತ್ಯ ಆಹಾರ ಧಾನ್ಯ ಮತ್ತು ಇತರೆ ವಸ್ತುಗಳೂ ಸಿಗಲಾರದು. ಆಗ ಆ ಭಾಗದಲ್ಲಿ ನೆಲೆ ಕಳೆದುಕೊಳ್ಳುವುದು ಗ್ಯಾರಂಟಿ. ಅದಕ್ಕೆ ಪೂರ್ವಭಾವಿಯಾಗಿ ನಕ್ಸಲರು ಹಫ್ತಾ ವಸೂಲಿಗೆ ಮುಂದಾಗುತ್ತಿದ್ದಾರೆ.
- ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

