ಪ್ರಧಾನ ಸುದ್ದಿ

ಆಲಮಟ್ಟಿ ಡ್ಯಾಂ ಎತ್ತರಿಸಿಕೊಳ್ಳಲು ಕೃಷ್ಣಾ ನ್ಯಾಯಾಧಿಕರಣ ಅನುಮತಿ, ರಾಜ್ಯಕ್ಕೆ ಹೆಚ್ಚುವರಿ 100 ಟಿಎಂಸಿ ನೀರು ಲಭ್ಯ

ಆಲಮಟ್ಟಿ ಡ್ಯಾಂ ಎತ್ತರಿಸಿಕೊಳ್ಳಲು ಕೃಷ್ಣಾ ನ್ಯಾಯಾಧಿಕರಣ ಅನುಮತಿ, ರಾಜ್ಯಕ್ಕೆ ಹೆಚ್ಚುವರಿ 100 ಟಿಎಂಸಿ ನೀರು ಲಭ್ಯ
Published On :

ನವದೆಹಲಿ: ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸಲು ಆಂಧ್ರಪ್ರದೇಶ ಎತ್ತಿದ್ದ ತಕರಾರನ್ನು ತಳ್ಳಿ ಹಾಕಿರುವ ಕೃಷ್ಣಾ ಜಲ ನ್ಯಾಯಾಧಿಕರಣ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ವರೆಗೆ ಎತ್ತರಿಸಿಕೊಳ್ಳಲು ಕರ್ನಾಟಕಕ್ಕೆ ಮುಕ್ತ ಸ್ವಾತಂತ್ರ್ಯ ನೀಡಿದೆ.
ಹಾಲಿ ಅಣೆಕಟ್ಟೆ ಎತ್ತರ 519 ಮೀಟರ್ ಇದೆ. ಸುಮಾರು ಐದೂವರೆ ಮೀಟರ್ ಎತ್ತರಿಸುವ ಕರ್ನಾಟಕದ ಪ್ರಸ್ತಾಪಕ್ಕೆ ಆಂಧ್ರಪ್ರದೇಶ ಬಲವಾಗಿ ಆಕ್ಷೇಪಿಸಿತ್ತು. ಕೃಷ್ಣಾ ಜಲ ನ್ಯಾಯಾಧಿಕರಣ 2010 ಡಿ.30ರಂದು ನೀಡಿದ್ದ ಅಂತಿಮ ಐತೀರ್ಪಿನ ಕುರಿತು ನದಿ ಪಾತ್ರದ ಮೂರು ರಾಜ್ಯಗಳು ಸಲ್ಲಿಸಿದ್ದ ಸ್ಪಷ್ಟೀಕರಣ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಬ್ರಿಜೇಶ್ ಕುಮಾರ್ ಶುಕ್ರವಾರ ಈ ಆದೇಶ ನೀಡಿದ್ದಾರೆ.

513 ಟಿಎಂಸಿ ಬಗ್ಗೆ ನಿರ್ಧಾರವಾಗಿಲ್ಲ: ಹಂಚಿಕೆ ಮಾಡದ 513 ಟಿಎಂಸಿ ನೀರಿನ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಆದರೆ, ಸಂಬಂಧಿಸಿದ ರಾಜ್ಯಗಳು ಸಕ್ಷಮ ಪ್ರಾಧಿಕಾರದ ಮುಂದೆ ನೀರು ಹಂಚಿಕೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ. ಜತೆಗೆ ಹಂಚಿಕೆಯಾಗದ ನೀರನ್ನು ಮೂರೂ ರಾಜ್ಯಗಳು ಬಳಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಹೊಂದಿವೆ. ಆದರೆ, ಹಕ್ಕು ಹೊಂದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ರಾಜ್ಯಕ್ಕೆ 911 ಟಿಎಂಸಿ: ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅಂದರೆ 1001 ಟಿಎಂಸಿ ನೀರು ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ ಕೇವಲ 911 ಟಿಎಂಸಿ ನೀರು ಹಂಚಿಕೆ ಮಾಡಿದೆ. ಕರ್ನಾಟಕ ಅತಿ ಹೆಚ್ಚು ಬರಪೀಡಿತ ಪ್ರದೇಶ ಹೊಂದಿದ್ದು, ಆಂಧ್ರ ಕಡಿಮೆ ಬರಪೀಡಿತ ಪ್ರದೇಶ ಹೊಂದಿದೆ. ಹೀಗಿದ್ದರೂ ಕರ್ನಾಟಕ್ಕೆ ಕಡಿಮೆ ನೀರು ಹಂಚಿಕೆ ಮಾಡಿರುವುದು 'ರಾಜ್ಯಗಳ ಸಮಾನತಾ ಸಿದ್ಧಾಂತ'ಕ್ಕೆ ವಿರುದ್ಧವಾಗಿದೆ. ಆದ್ದರಿಂದ ನೀರು ಹಂಚಿಕೆಯನ್ನು ಪುನರ್ ಪರಿಶೀಲಿಸಬೇಕು. ಕೈಗಾರಿಕೆ, ಕುಡಿಯುವ ಉದ್ದೇಶಕ್ಕೆ ಪ್ರತ್ಯೇಕ ಹಂಚಿಕೆ ಮಾಡಬೇಕು ಎಂದು ಕೋರಿತ್ತು.
ಕರ್ನಾಟಕದಿಂದ ಆಂಧ್ರಕ್ಕೆ 8 ಟಿಎಂಸಿ ನೀರು ಹರಿಸಲು ಆದೇಶ ನೀಡಿರುವುದರಿಂದ ಮಹಾರಾಷ್ಟ್ರಕ್ಕೂ ಕೂಡಾ ಕರ್ನಾಟಕಕ್ಕೆ ಅದೇ ಪ್ರಮಾಣದಲ್ಲಿ ನೀರು ಹರಿಸಲು ಆದೇಶಿಸುವಂತೆ ಕೋರಿತ್ತು. ವಿದ್ಯುತ್ ಉತ್ಪಾದನೆಗೆ ಮಹಾರಾಷ್ಟ್ರಕ್ಕೆ 25 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈ ಪ್ರಮಾಣದ ನೀರನ್ನು ಕರ್ನಾಟಕಕ್ಕೆ ನೀಡಬೇಕು. ಅದಕ್ಕೆ ಬದಲಿಯಾಗಿ ಕರ್ನಾಟಕ ವಿದ್ಯುತ್ ನೀಡುವ ಪ್ರಸ್ತಾಪ ಸಲ್ಲಿಸಿತ್ತು.

ಅಣೆಕಟ್ಟೆ ಏನು, ಎತ್ತ?
ಏನು ವಿವಾದ?
ಆಲಮಟ್ಟಿ ಅಣೆಕಟ್ಟೆಯನ್ನು 524.256 ಮೀಟರ್‌ಗೆ ಹೆಚ್ಚಿಸಲು ಮೊದಲೇ ನಿರ್ಧರಿಸಲಾಗಿತ್ತು. ಆದರೆ, ಆಂಧ್ರಪ್ರದೇಶ ಸರ್ಕಾರ ಅಣೆ ಎತ್ತರ ಕುರಿತು ತಕರಾರು ತಗೆಯಿತು. ಹೀಗಾಗಿ 26 ಕ್ರಸ್ಟ್‌ಗೇಟ್‌ಗಳನ್ನು ಕೋರ್ಟ್ ಆದೇಶದ ಮೇರೆಗೆ 519.60 ಮೀಟರ್‌ಗೆ ಕಡಿತಗೊಳಿಸಲಾಗಿತ್ತು. ಆದರೆ ಇದೀಗ ಕೃಷ್ಣಾ ನ್ಯಾಯಾಧಿಕರಣ 524.256 ಮೀಟರ್‌ಗೆ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಹಸಿರು ನಿಶಾನೆ ತೋರಿದೆ.

ಆಲಮಟ್ಟಿ ಅಣೆಕಟ್ಟೆ ಎತ್ತರಿಸಲು ಆಂಧ್ರದ ತಕರಾರು ತಳ್ಳಿ ಹಾಕಿ ಕೃಷ್ಣ ಜಲನ್ಯಾಯಾಧಿಕರಣ ನೀಡಿರುವ ಆದೇಶ ಸ್ವಾಗತಾರ್ಹ. ಉತ್ತರ ಕರ್ನಾಟಕದ ಭಾಗಕ್ಕೆ ಇಂದು ಐತಿಹಾಸಿಕ ದಿನ. ರಜೋಳಿ ಬಂಡಾ ನಾಲೆಗೆ 4 ಟಿಎಂಸಿ ನೀರು ಹರಿಸುವಂತೆ ನೀಡಿರುವ ಆದೇಶ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
-ಎಂ.ಬಿ. ಪಾಟೀಲ್, ಜಲ ಸಂಪನ್ಮೂಲ ಸಚಿವ

ನಷ್ಟವೇನು?
ಅಣೆಕಟ್ಟೆ ಎತ್ತರ ಹೆಚ್ಚಳದಿಂದ 22 ಹಳ್ಳಿಗಳು ಮುಳುಗಡೆಯಾಗಲಿವೆ.
ಸ್ಥಳಾಂತರದಿಂದ 1 ಲಕ್ಷಕ್ಕೂ ಅಧಿಕ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.

ಏನೇನು ಲಾಭ?
ಸದ್ಯಕ್ಕೆ ಅಣೆಕಟ್ಟೆಯಲ್ಲಿ 123 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಎತ್ತರ ಹೆಚ್ಚಳದಿಂದ 220 ಟಿಎಂಸಿ ನೀರು ಸಂಗ್ರಹವಾಗಲಿದೆ. ಅಂದರೆ ಬರೋಬ್ಬರಿ 100 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭ್ಯ.
ಈಗಾಗಲೇ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತಿದೆ. ಎತ್ತರ ಹೆಚ್ಚಳದಿಂದ ಮತ್ತೆ 5 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ.
ಸದ್ಯಕ್ಕೆ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಎತ್ತರ ಹೆಚ್ಚಳದಿಂದ ಮುಂಬರುವ ದಿನಗಳಲ್ಲಿ 500ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.
ನ್ಯಾಯಾಧಿಕರಣ ನೀಡಿದ ತೀರ್ಪಿನಿಂದ ಉತ್ತರ ಕರ್ನಾಟಕದ ಭಾಗದ ನೀರಾವರಿ ಯೋಜನೆಗಳಿಗೆ ಮತ್ತೆ ಶಕ್ತಿ ಬರಲಿದೆ.

ತುಂಗಾ, ಭದ್ರಾ, ಸಿಂಗಟಾಲೂರು ಯೋಜನೆಗೆ 4 ಟಿಎಂಸಿ ಕಡಿತ
ಆಂಧ್ರಪ್ರದೇಶದ ರಜೋಳಿ ಬಂಡಾ ನಾಲೆಗೆ ತುಂಗಭದ್ರಾದಿಂದ 4 ಟಿಎಂಸಿ ನೀರು ಹರಿಸುವಂತೆಯೂ ಸೂಚಿಸಿದೆ. ಇದರಿಂದಾಗಿ ಅಂತಿಮ ಐತೀರ್ಪಿನಲ್ಲಿ ತುಂಗಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಹಾಗೂ ಸಿಂಗಟಾಲೂರು ಯೋಜನೆಗಳಿಗೆ ಒದಗಿಸಿದ್ದ 40 ಟಿಎಂಸಿ ನೀರಿನಲ್ಲಿ 4 ಟಿಎಂಸಿ ನೀರು ಕಡಿತವಾಗಿದೆ. ಈಗ ಈ ಪ್ರಮಾಣ 36 ಟಿಎಂಸಿಗೆ ಇಳಿದಂತಾಗಿದೆ.
ನೀರು ಹಂಚಿಕೆ ಮರುಪರಿಶೀಲನೆ ಸೇರಿದಂತೆ ಸ್ಪಷ್ಟೀಕರಣ ಅರ್ಜಿಯಲ್ಲಿ ಕರ್ನಾಟಕ ಹನ್ನೆರಡು ಅಂಶಗಳನ್ನು ಪ್ರಸ್ತಾಪಿಸಿತ್ತು. ಈ ಪೈಕಿ ಮೇಲ್ಕಂಡ ನಾಲ್ಕಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳ ಬಗ್ಗೆ ಯಾವ ನಿರ್ಧಾರವನ್ನೂ ಪ್ರಕಟಿಸಿಲ್ಲ. ಅಂತಿಮ ಐತೀರ್ಪಿನಲ್ಲಿ ಕರ್ನಾಟಕ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 198 ಟಿಎಂಸಿಗಿಂತ ಹೆಚ್ಚು ನೀರು ಬಳಸಿಕೊಳ್ಳಬಾರದು ಎಂಬ ಅಂಶವು ಸ್ಪಷ್ಟ ನಿರ್ಬಂಧವಲ್ಲ ಎಂದು ಕರ್ನಾಟಕ ತಿಳಿಸಿತ್ತು. ತನಗೆ ಹಂಚಿಕೆ ಮಾಡಿದ ನೀರನ್ನು ಉಳಿಸಿಕೊಂಡು ಅದನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.