ನೌಕರಿ ಹೆಸರಲ್ಲಿ 20 ಕೋಟಿ ಪಂಗನಾಮ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ.2-
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿರುವ ಹೊತ್ತಿನಲ್ಲೇ, ಇಬ್ಬರು ಸಹೋದರರು ಆಯೋಗದ ಅಧ್ಯಕ್ಷರ ಹೆಸರು ಹೇಳಿಕೊಂಡು ಸುಮಾರು 20 ಕೋಟಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಮೂಲದ ಡಾ.ಪ್ರಭುದೇವ್ ತುಂಬರಗಡ್ಡಿ ಮತ್ತು ರಾಜೇಂದ್ರ ತುಂಬರಗಡ್ಡಿ ಸಹೋದರರು ಕೆಪಿಎಸ್ಸಿಯ ಹಿಂದಿನ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಮತ್ತು ಕೃಷ್ಣ ಅವರು ನಮಗೆ ಆಪ್ತರು. ಅವರಿಂದ ಕೆಲಸ ಮಾಡಿಸಿ ಕೊಡಿಸುತ್ತೇವೆ ಎಂದು ಹೇಳಿ ಸುಮಾರು 20 ಕೋಟಿ ವಂಚಿಸಿದ್ದಾರೆ. ಇವರು ಯಾದಗಿರಿ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಮೈಸೂರು, ಮಂಡ್ಯ, ಬಿಜಾಪುರ ಜಿಲ್ಲೆಯ ನಿರುದ್ಯೋಗಿ ಯುವಕರಿಂದ ಹಣ ಲಪಟಾಯಿಸಿದ್ದಾರೆ. ಈಗಾಗಲೇ ಹಣ ವಂಚನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕಳೆದ ಜುಲೈ 13ರಂದು ದೂರು ದಾಖಲಾಗಿದೆ. ಇಷ್ಟೇ ಅಲ್ಲದೆ, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರ ವಿರುದ್ಧ ಬಿಜಾಪುರದ ಮೂರನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಗುಲ್ಬರ್ಗದಲ್ಲೂ ವಂಚನೆ: ಇಂಥದ್ದೆ ವಂಚನೆಗೆ ಸಂಬಂಧಿಸಿದಂತೆ ಗುಲ್ಬರ್ಗ ನಗರ ಪೊಲೀಸ್ ಠಾಣೆಯಲ್ಲೂ ವಿಚಾರಣೆ ನಡೆದಿದೆ. ಆದರೆ, ಅಲ್ಲಿ ಹಣ ಕಳೆದುಕೊಂಡ ಯುವಕರು ದೂರು ನೀಡಿಲ್ಲ. ಪ್ರಕರಣ ದಾಖಲಿಸಿದರೆ ಕೈಬಿಟ್ಟಿರುವ ಹಣ ಮರಳಿ ಬರುವ ಸಾಧ್ಯತೆಯೂ ಕ್ಷೀಣಿಸುತ್ತದೆ ಎನ್ನುವ ಆತಂಕದಿಂದ ಮತ್ತು ರಾಜಿ ಮಾತುಕತೆಯಿಂದಾದರೂ ಬರುವಷ್ಟು ಹಣವಾದರೂ ಬರಲಿ ಎಂದು ಸುಮ್ಮನೆ ಉಳಿದುಕೊಂಡಿದ್ದಾರೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಗುಲ್ಬರ್ಗ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಎಸ್.ಎಚ್. ತೇಲಿ ಅವರು, 'ಸಹೋದರರಿಬ್ಬರ ವಿರುದ್ಧ ದೂರು ದಾಖಲಿಸುವುದಕ್ಕೆ ಕೈಸುಟ್ಟುಕೊಂಡ ಯುವಕರು ಮುಂದೆ ಬರುತ್ತಿಲ್ಲ.
ವಂಚನೆಗೆ ಸಂಬಂಧಿಸಿದಂತೆ ಈಗಾಗಲೇ ಡಾ. ಪ್ರಭುದೇವ ಮತ್ತು ರಾಜೇಂದ್ರರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವರಿಬ್ಬರು ನಮ್ಮ ಮಾತು ಕೇಳಿಸಿಕೊಂಡಿಲ್ಲ' ಎಂದು ತಿಳಿಸಿದ್ದಾರೆ.
ಚಾಲ್ತಿಯಲ್ಲಿಲ್ಲದ ಚೆಕ್ ನೀಡಿದರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಣ ಕೊಟ್ಟು ಕೈಸುಟ್ಟುಕೊಂಡು ಹತಾಶರಾಗಿದ್ದ ಯುವಕರು ಕಳೆದ ಮೇ 24ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಆರೋಪಿಗಳನ್ನು ಉಪಾಯವಾಗಿ ಕರೆಸಿ ಮೈಸೂರಿಗೆ ತೆಗೆದುಕೊಂಡು ಹೋಗಿದ್ದರು. ಈಗಾಗಲೇ ಹಣ ಕಳೆದುಕೊಂಡ ಯುವಕರು ಡಾ. ಪ್ರಭುದೇವ ಮತ್ತು ರಾಜೇಂದ್ರ ಅವರನ್ನು ಕೂಡಿ ಹಾಕಿ ಅವರಿಂದ ಬಾಂಡ್ ಪೇಪರ್ ಮತ್ತು ಪ್ರಾಮಿಸರಿ ನೋಟ್, ಕಾರ್ಪೊರೇಷನ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಚೆಕ್ಕುಗಳ ಮೇಲೆ ಸಹಿ ಮಾಡಿಸಿಕೊಂಡು ಮೇ 26ರಂದು ಕೈ ಬಿಟ್ಟಿದ್ದಾರೆ. ಆದರೆ ಆರೋಪಿಗಳಿಬ್ಬರೂ ಅಲ್ಲಿಯೂ ಚಾಲ್ತಿಯಲ್ಲಿಲ್ಲದ ಖಾತೆಗಳ ಚೆಕ್ಕುಗಳಿಗೆ ಸಹಿ ಮಾಡಿಕೊಟ್ಟು ಯುವಕರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿರುವ ಡಾ. ಪ್ರಭುದೇವ ಅವರ ಪತ್ನಿ ಭುವನೇಶ್ವರಿ ಕೂಡ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ಒಂದೂವರೆ ತಿಂಗಳಿಂದ ಅವರು ಮಾಹಿತಿ ನೀಡದೇ ರಜೆ ಮೇಲೆ ತೆರಳಿದ್ದಾರೆ. ಕೆಲವು ದಿನಗಳ ಹಿಂದೆ ಸುರಪುರದ ಯುವಕರು ಮುರ್ಡೇಶ್ವರಕ್ಕೆ ತೆರಳಿ ಡಾ. ಭುವನಶ್ವೇರಿ ಅವರ ಕ್ವಾಟರ್ಸ್ ಎದುರು ಸಿಕ್ಕಾಪಟ್ಟೆ ಗಲಾಟೆ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.
- ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

