ಪ್ರಧಾನ ಸುದ್ದಿ

ಕೃಷಿ ವಿವಿ; ರಾಜಕೀಯ ಜಾಹೀರು

Published On :

ಕ.ಪ್ರ.ವಾರ್ತೆ  ಬೆಂಗಳೂರು  ಅ. 5
ಕೃಷಿ ವಿವಿಗಳು ಇದ್ದೂ ರೈತರ ಪಾಲಿಗೆ ಸತ್ತಂತಾಗಿವೆ. ಇಂತಹ ಸ್ಥಿತಿಯಲ್ಲೇ ವಿವಿಗಳ ಕುಲಪತಿ ನೇಮಕ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ರೈತರಿಗೆ 'ಅನ್ನ' ನೀಡುವ 'ಅಕ್ಷಯಪಾತ್ರೆ'ಗೂ ಕುತ್ತು ಬಂದಿದೆ.
ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳ ಮೂಲಕ ರೈತರ ಪಾಲಿಗೆ ವರವಾಗಬೇಕಾದ ಕೃಷಿ ವಿವಿಗಳು ಅದರ ಮುಖ್ಯಸ್ಥರಿಲ್ಲದೆ ಆರೇಳು ತಿಂಗಳುಗಳಿಂದ ನರಳುತ್ತಿವೆ. ಇದರ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಲಾಬಿಗೆ ಒಳಗಾಗಿರುವ ಸರ್ಕಾರ ಶೋಧನಾ ಸಮಿತಿ (ಸರ್ಚ್ ಕಮಿಟಿ)ಯನ್ನೂ ರಚಿಸದೆ, ಇದೀಗ 'ಬೇಕಾಗಿದ್ದಾರೆ' ಎಂಬ ಜಾಹೀರಾತು ಪ್ರಕಟಿಸಿ ಹೊಸ ಪದ್ಧತಿ ಆರಂಭಿಸಿದೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲವೂ ಹೊಸದಾಗಿಯೇ ಆಗಬೇಕು ಎಂಬ ಭಾವನೆ ಕೃಷಿ ಇಲಾಖೆಯಲ್ಲಿ ಹೆಚ್ಚಾಗುತ್ತಲೇ ಇದೆ. ಸಚಿವ ಕೃಷ್ಣಬೈರೇಗೌಡರ ಸಚಿವಾಲಯದಲ್ಲಿನ ಸಹಾಯಕರು ಕೃಷಿ ಇಲಾಖೆ 'ಪದ್ಧತಿ'ಯನ್ನೇ ಬಿಡಿಸುತ್ತಿದ್ದಾರೆ. ಅದಕ್ಕೇ, ಹೊಸದಾಗಿ ರಚನೆಯಾಗಿರುವ ಶಿವಮೊಗ್ಗ ಕೃಷಿ-ತೋಟಗಾರಿಕೆ ವಿವಿಗೆ ಕುಲಪತಿ ನೇಮಿಸಲು ಆ. 28ರಂದು ಜಾಹೀರಾತು ನೀಡಿದೆ. ಇಲ್ಲಿವರೆಗೆ ವಿವಿ ಇತಿಹಾಸ ಹಾಗೂ ಪದ್ಧತಿ ಪ್ರಕಾರ ವಿವಿ ಸ್ಥಾಪನೆಗೆ ನೇಮಕವಾಗುವ 'ವಿಶೇಷ ಅಧಿಕಾರಿ'ಯೇ ಪ್ರಥಮ ಕುಲಪತಿ ಆಗುತ್ತಾರೆ. ರಾಜಕೀಯಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ಪದ್ಧತಿಯನ್ನೂ ಮುರಿಯಲು ಮುಂದಾಗಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಪ್ರಕ್ರಿಯೆ ಆರಂಭಿಸಿ, ಡಾ. ಪಿ.ಎಂ. ಸಾಲಿಮಠ ಅವರನ್ನು 2011ರ ನವೆಂಬರ್ 30ರಂದು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿತ್ತು. ವಿಧಾನಮಂಡಲ ಸಮ್ಮತಿ ಹಾಗೂ ರಾಜ್ಯಪಾಲರ ಅಂಕಿತವೂ ಬಿದ್ದು 2012ರ ಸೆಪ್ಟೆಂಬರ್ 21ರಂದು ವಿಶೇಷ ರಾಜ್ಯಪತ್ರದ ಮೂಲಕ ವಿವಿ ಅಧಿಸೂಚನೆಯೂ ಪ್ರಕಟವಾಯಿತು. 2011ರ ನವೆಂಬರ್‌ನಿಂದಲೇ ಡಾ. ಪಿ.ಎಂ. ಸಾಲಿಮಠ ವಿವಿಗೆ ಕುಲಪತಿಯಾಗಬೇಕಿತ್ತು. ಆದರೆ, ಈವರೆಗೂ ಅಂತಹ ನೇಮಕ ಸರ್ಕಾರದಿಂದ ಆಗೇ ಇಲ್ಲ. ಆದರೆ, ಇದೀಗ ಪ್ರಥಮ ಬಾರಿಗೆ ಜಾಹೀರಾತು ಪ್ರಕಟಿಸುವ ಮೂಲಕ ಅಭ್ಯರ್ಥಿಗಳಿಂದ ಕೃಷಿ ಸಚಿವಾಲಯಅರ್ಜಿ ಆಹ್ವಾನಿಸಿದೆ. ಇದರಿಂದ ಅರ್ಹತೆ ಇರುವ, ಅನುಭವವೂ ಇರುವ ಡಾ. ಪಿ.ಎಂ. ಸಾಲಿಮಠ ಅವರಿಗೆ ಹಕ್ಕನ್ನು ಕಸಿದಂತಾಗಿದೆ.
ಇನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಆರ್.ಆರ್. ಹಂಚಿನಾಳ್ ಏಪ್ರಿಲ್ 30ರಂದು ರಾಜಿನಾಮೆ ನೀಡಿದರು. ಹೀಗಾಗಿ, ರಿಜಿಸ್ಟ್ರಾರ್ ಡಾ. ಎಚ್.ಎಸ್. ವಿಜಯಕುಮಾರ್ ಅವರಿಗೆ ಪ್ರಭಾರವಾಗಿ (ಆ್ಯಕ್ಟಿಂಗ್) ಕುಲಪತಿ ಹುದ್ದೆ ನೀಡಲಾಗಿದೆ. ಐದು ತಿಂಗಳಾದರೂ ಒಂದು ಸರ್ಚ್ ಕಮಿಟಿಯನ್ನೂ ಕೃಷಿ ಸಚಿವಾಲಯ ರಚಿಸಿಲ್ಲ. ಆದರೆ, ಜಾಹೀರಾತು ನೀಡುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಕೃಷಿ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಿಸಲು ಜಾಹೀರಾತು ನೀಡಬಾರದು ಎಂದೇನೂ ಇಲ್ಲ. ಆದರೆ, ಈವರೆಗೆ ಯಾವ ವಿಶ್ವವಿದ್ಯಾಲಯಗಳೂ ಕುಲಪತಿ ನೇಮಕಕ್ಕೆ ಜಾಹೀರಾತು ನೀಡಿರುವ ಉದಾಹರಣೆಯೇ ಇಲ್ಲ. ಕೃಷಿ ಸಚಿವಾಲಯ ಎಲ್ಲ ವಿವಿಗಳಿಗೆ ಸುತ್ತೋಲೆ ಮೂಲಕ ಇದನ್ನು ತಿಳಿಸುತ್ತಿತ್ತು. ಇದಕ್ಕೆ ಮುನ್ನ ಸರ್ಚ್ ಕಮಿಟಿ ರಚನೆ ಆಗುತ್ತಿತ್ತು. ಆದರೆ, ಧಾರವಾಡ ಕೃಷಿ ವಿವಿ ವಿಚಾರದಲ್ಲಿ ಇದೆಲ್ಲ ವ್ಯವಸ್ಥೆಯನ್ನು ಗಾಳಿಗೆ ತೂರಲಾಗಿದೆ. ಇನ್ನು ಶಿವಮೊಗ್ಗ ಕೃಷಿ-ತೋಟಗಾರಿಕೆ ವಿವಿಯಲ್ಲಿ ವಿಶೇಷ ಅಧಿಕಾರಿಯೇ ಪ್ರಥಮ ಕುಲಪತಿಯಾಗುವ ಅವಕಾಶವನ್ನೂ ಕೃಷಿ ಸಚಿವಾಲಯ ತಪ್ಪಿಸಲು ಮುಂದಾಗಿದೆ.
ಒಂದು ವಿವಿಗೆ ಕುಲಪತಿ ಇಲ್ಲ ಎಂದರೆ ಮನೆಗೆ ಯಜಮಾನ ಇಲ್ಲದಂತೆ. ಮನೆ ಯಜಮಾನನ ಅನುಪಸ್ಥಿತಿಯಲ್ಲಿ ಯಾರೇ ಯಾವುದೇ ನಿರ್ಣಯ ಕೈಗೊಂಡರೂ ಅದು ಸಿಂಧುವಾಗುವುದಿಲ್ಲ. ಅದೇ ರೀತಿ ವಿವಿ ಕುಲಪತಿ ಇಲ್ಲದೆ ಸೆನೆಟ್ ಸಭೆ ನಡೆಯುವಂತಿಲ್ಲ. ಅವರಿಲ್ಲದಿದ್ದರೂ ಆಕ್ಟಿಂಗ್‌ನಲ್ಲೇ ಇರುವ ರಿಜಿಸ್ಟ್ರಾರ್ ನಿರ್ಣಯ ಕೈಗೊಂಡರೂ ಅದು ಕಾನೂನುಬದ್ಧವಲ್ಲ. ಕುಲಪತಿ ಬಂದ ಮೇಲೆ ಎಲ್ಲವೂ ಮರುವಿಮರ್ಶೆಗೆ ಒಳಗಾಗಬೇಕಾಗುತ್ತದೆ. ಇಂತಹ ಅವಕಾಶವನ್ನು ಕೃಷಿ ಸಚಿವಾಲಯ ಯಾರ ಉಪಕಾರಕ್ಕಾಗಿ ಮಾಡಿಕೊಡುತ್ತಿದೆಯೋ ಗೊತ್ತಿಲ್ಲ.
ಧಾರವಾಡ ಕೃಷಿ ವಿವಿಗೆ ಕುಲಪತಿ ಇಲ್ಲದೆ ಐದು ತಿಂಗಳು ಕಳೆದಿದ್ದು ಇನ್ನೂ ಸರ್ಚ್ ಕಮಿಟಿ ರಚನೆಯಾಗಿಲ್ಲ. ಸರ್ಚ್ ಕಮಿಟಿ ರಚನೆಯಾದರೂ ವರ್ಷಗಟ್ಟಲೆ ಸಭೆ ಸೇರದೆ ಕಾಲಹರಣ ಮಾಡುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಸರ್ಚ್ ಕಮಿಟಿ ರಚನೆಯಾಗಿ ಧಾರವಾಡ ಕೃಷಿ ವಿವಿಗೆ ಕುಲಪತಿ ನೇಮಕವಾಗುವುದಾದರೂ ಎಂದು? ಇದು ಕನಿಷ್ಠ ಆರು ತಿಂಗಳಾದರೂ ಸಾಧ್ಯವಿಲ್ಲ. ಇಂತಹ ಪ್ರಭಾವಕ್ಕೆ ಕೃಷಿ ಸಚಿವಾಲಯ ಒಳಗಾಗುವ ಅಗತ್ಯವಾದರೂ ಏನು?
ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ವಿಚಾರದಲ್ಲಿ ಸರ್ಕಾರ ಹೊಸ ಅಧ್ಯಾಯ ಬರೆಯಲು ಮುಂದಾಗಿದೆ. ಬಿಜೆಪಿ ಮಾಡಿದ್ದೆಲ್ಲ ಬೇಡ ಎನ್ನುವ ಮನೋಭಾವದಲ್ಲಿ ರೈತರ ಹಿತಾಸಕ್ತಿಯನ್ನೂ ಕಡೆಗಣಿಸಿ ಒಂದು ಕೃಷಿ ವಿವಿ ಸಂಪೂರ್ಣವಾಗಿ ಕಾರ್ಯನಿರ್ವಹಿಸದಂತೆ ಮಾಡುವುದು ಸರಿಯೇ?
ರೈತರಿಗೆ ಯಾವ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಎರಡು ಕೃಷಿ ವಿವಿಗಳು ಕುಲಪತಿಗಳಿಲ್ಲದೆ ನರಳುತ್ತಿವೆ. ಈ ಸಂಕಷ್ಟವನ್ನು ಬೇಗ ದೂರ ಮಾಡಿ, ರೈತರಿಗೆ ಆಗಾಗ ಸಿಗುವ ಸಂಶೋಧನೆಯ ಫಲ ಇನ್ನಷ್ಟು ವಿಳಂಬವಾಗದಂತೆ ನೋಡಿಕೊಳ್ಳಬೇಕಿದೆ.

ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.