ಪ್ರಧಾನ ಸುದ್ದಿ

ರಾಜ್ಯ- ಆಂಧ್ರ ಗಡಿ ಸಮಸ್ಯೆ ಇತ್ಯರ್ಥಕ್ಕೆ ಮುಹೂರ್ತ

Published On :

ಕ.ಪ್ರ.ವಾರ್ತೆ,  ಬಳ್ಳಾರಿ, ಅ. 7-
ಅಕ್ರಮ ಗಣಿಗಾರಿಕೆ ದೇಶವ್ಯಾಪಿ ಚರ್ಚೆಗೆ ಗುರಿಯಾಗಿದ್ದರೆ, ಗಣಿಗಾರಿಕೆ ವಿಷಯದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯಲ್ಲಿ ಗಡಿ ಒತ್ತುವರಿ ಆರೋಪ ಕೇಳಿಬಂದಿತ್ತು. ಗಡಿ ಒತ್ತುವರಿ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಂತರಾಜ್ಯ ಗಡಿ ಸರ್ವೆ ಕುರಿತು ಆಂಧ್ರಪ್ರದೇಶದ ಕಂದಾಯ ಸಚಿವ ಡಾ. ಎನ್. ರಘುವೀರಾ ರೆಡ್ಡಿ ಅವರು ರಾಜ್ಯ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಅವರಿಗೆ ಪತ್ರ ಬರೆಯುವ ಮೂಲಕ ಎರಡೂ ರಾಜ್ಯಗಳ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ.
ಗಣಿಗಾರಿಕೆ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಇದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವಂತೆಂ ಸುಪ್ರೀಂ ಕೋರ್ಟ್ ಏಪ್ರಿಲ್ 18, 2013ರಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯಗಳು ಸರ್ವೆಗೆ ಮುಂದಾಗಬೇಕಾಗಿದೆ ಎಂದು ಸಚಿವರು ಪತ್ರದಲ್ಲಿ ಬರೆದಿದ್ದಾರೆ.

ನ್ಯಾಯಾಲಯದ ಆದೇಶ ಏನಿತ್ತು?: ಪತ್ರದಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಸ್ತಾಪಿಸಿರುವ ಸಚಿವರು, ವಿವಾದಿತ ಗಡಿ ಪ್ರದೇಶದಲ್ಲಿ 7 ಗಣಿ ಗುತ್ತಿಗೆ ಪ್ರದೇಶಗಳಿವೆ. ಈ ಗಣಿ ಕಂಪನಿಗಳು 'ಬಿ' ಕೆಟಗರಿ ಅಡಿಯಲ್ಲಿ ಬರುತ್ತಿದ್ದು, ಎರಡು ರಾಜ್ಯಗಳ ಗಡಿ ವಿವಾದ ಬಗೆಹರಿಯುವವರೆಗೆ ಈ 7 ಗಣಿ ಗುತ್ತಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ. ಎರಡು ರಾಜ್ಯಗಳ ಗಡಿ ಗುರುತಾದ ಮೇಲೆ, ಎರಡು ರಾಜ್ಯಗಳ ಒಪ್ಪಿಗೆ ಪಡೆದು ಗಣಿ ಗುತ್ತಿಗೆ ವಿಷಯವನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಕೋರ್ಟ್ ಹೇಳಿದೆ.

ಸರ್ವೆ ವಿಷಯದಲ್ಲಿ ನಿಧಾನ: ಎರಡು ರಾಜ್ಯಗಳ ಗಡಿ ವಿವಾದವನ್ನು ಬಗೆಹರಿಸಲು ಕರ್ನಾಟಕ ರಾಜ್ಯ ಮುಂದಾಗಬೇಕು. ಸ್ವತಂತ್ರ ಸರ್ವೆ ನಡೆಸಬೇಕು. ಸರ್ವೆ ವಿಷಯದಲ್ಲಿ ಈಗಾಗಲೇ ತಡಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ ಸಮಯ ಕಳೆಯುತ್ತಿದ್ದು, ನಮ್ಮ ಸರ್ವೆ ಪ್ರಸ್ತಾವನೆಯನ್ನು ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಮುಂದಾಗಬೇಕು. ಸರ್ವೆಗೆ ಎರಡು ರಾಜ್ಯ ಸರ್ಕಾರಗಳ ಸಹಕಾರ ಮುಖ್ಯವೆಂದು ರೆಡ್ಡಿ ತಿಳಿಸಿದ್ದಾರೆ.
ಅ. 20ರಿಂದ 25ರೊಳಗೆ ಜಂಟಿ ಸಭೆ ನಡೆಸಲು ಮನವಿ: ಅಂತಾರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಕಂದಾಯ, ಅರಣ್ಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಹಾಗೂ ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅ.20ರಿಂದ 25ರೊಳಗೆ ಜಂಟಿ ಸಭೆ ನಿಗದಿ ಮಾಡಿದರೆ ಉತ್ತಮ ಎಂದು ರೆಡ್ಡಿ ಅವರು ಶ್ರೀನಿವಾಸಪ್ರಸಾದ್ ಅವರಿಗೆ ಅ.1ರಂದು ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಷಯದ ಕುರಿತಾಗಿ ಒಂದು ಕಡೆ ತನಿಖೆ ನಡೆಯುತ್ತಿದ್ದರೆ, ಇದೀಗ ಅಂತಾರಾಜ್ಯ ಗಡಿ ವಿಷಯದ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ಅಂತಾರಾಜ್ಯ ಗಡಿ ವಿಷಯದ ಇತ್ಯರ್ಥಕ್ಕೆ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಕರ್ನಾಟಕ ಸರ್ಕಾರ ಗಡಿ ವಿಷಯದಲ್ಲಿ ಆಸಕ್ತಿ ತೋರಬೇಕಾಗಿದೆ ಅಷ್ಟೆ. ಆ ಮೂಲಕ ಹಲವು ವರ್ಷಗಳಿಂದ ಎರಡು ರಾಜ್ಯಗಳ ಮಧ್ಯೆ ಇರುವ ಗಡಿ ವಿಷಯವನ್ನು ಸಮಚಿತ್ತವಾಗಿ ಇತ್ಯರ್ಥಪಡಿಸಿಕೊಳ್ಳಬೇಕಾಗಿದೆ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.