ಕೇರನ್ ದಾಳಿಗೆ ಪಾಕ್ ಸಾಥ್
ಶ್ರೀನಗರ: ಕಳೆದ 15 ದಿನಗಳಿಂದ ಕೇರನ್ ವಲಯದಲ್ಲಿ ಕೇಳಿಸುತ್ತಿದ್ದ ಗುಂಡಿನ ಮೊರೆತ ಸ್ತಬ್ಧಗೊಂಡಿದೆ. 7 ಪಾಕ್ ಉಗ್ರರ ಹತ್ಯೆ ಮೂಲಕ 'ಆಪರೇಷನ್ ಕೇರನ್' ಮಂಗಳವಾರ ಅಂತ್ಯಗೊಂಡಿದೆ.
ಪಾಕಿಸ್ತಾನದ ವಿಶೇಷ ಪಡೆ ಬೆಂಬಲಿತ ಉಗ್ರರ ಭಾರಿ ನುಸುಳುವಿಕೆಗೆ ಭಾರತದ ಸೇನೆ ತಕ್ಕ ಉತ್ತರ ನೀಡುವ ಮೂಲಕ ಉಗ್ರರ ಹುಟ್ಟಡಗಿಸಿದೆ. ಅಷ್ಟೇ ಅಲ್ಲ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾ, ತಮಗೂ ಉಗ್ರರಿಗೂ ಸಂಬಂಧವೇ ಇಲ್ಲ ಎನ್ನುತ್ತಲೇ ಬಂದಿರುವ 'ಪಾಪಿ'ಸ್ತಾನದ ನಿಜ ಬಣ್ಣ ಬಯಲಾಗಿದೆ. ಒಳನುಸುಳುವಿಕೆ ಪ್ರಯತ್ನದಲ್ಲಿ ಪಾಕ್ ಸೇನೆಯ ಕೈವಾಡವಿರುವುದಕ್ಕೆ ಸೂಕ್ತ ಸಾಕ್ಷ್ಯ ಲಭ್ಯವಾಗಿರುವುದಾಗಿ ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಹೇಳಿದ್ದಾರೆ.
ಅತಿಕ್ರಮಣ ಯತ್ನ: ಕೇರನ್ನಲ್ಲಿ ಉಗ್ರರು ನಡೆಸಿದ ಯತ್ನವು 1999ರ ಕಾರ್ಗಿಲ್ ಸಮರದ ಬಳಿಕ ನಡೆದ ಭಾರಿ ಅತಿಕ್ರಮಣ ಯತ್ನವಾಗಿತ್ತು.
15 ದಿನಗಳ ಹಿಂದೆ ಸುಮಾರು 30-40 ಉಗ್ರರು ಭಾರತಕ್ಕೆ ನುಸುಳಲು ಸನ್ನದ್ಧರಾಗಿ ಬಂದಿದ್ದರು. ಇದನ್ನು ತಡೆಯಲು ಸೇನೆ ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಸತತ 15 ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ ಸೇನೆ 7 ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವೇಳೆ 6 ಮಂದಿ ಯೋಧರಿಗೂ ಗಾಯಗಳಾಗಿವೆ. ಉಗ್ರರನ್ನು ಹೊಡೆದುರುಳಿಸುವ ಸಲುವಾಗಿ ಸೇನೆಯು ಕೇರನ್ ವಲಯದ 3 ಕಿ.ಮೀ. ವ್ಯಾಪ್ತಿಯಲ್ಲಿ 7 ಶೋಧ ಕಾರ್ಯಾಚರಣೆ ನಡೆಸಿತ್ತು. ನುಸುಳುವಿಕೆಗೆ ಯತ್ನಿಸಿದ್ದ 7 ಮಂದಿ ಉಗ್ರರು ಕೇರನ್ ವಲಯದಿಂದ ವಾಪಸಾಗಿ ಬೇರೆ ಪ್ರದೇಶದಿಂದ ನುಸುಳಲು ಯತ್ನಿಸಿದ್ದರು. ಆದರೆ ಅವರ ಪ್ರಯತ್ನವನ್ನು ವಿಫಲಗೊಳಿಸಿದ ಸೇನೆ ಎಲ್ಲ 7 ಮಂದಿಯನ್ನೂ ಹೊಡೆದುರುಳಿಸಿತು. ಕಾರ್ಯಾಚರಣೆ ಅಂತ್ಯಗೊಳಿಸಿದ ಬಗ್ಗೆ ಮಾಹಿತಿ ನೀಡಿದ ಲೆ.ಜನರಲ್ ಸಂಜೀವ್ ಚಚ್ರಾ, ಈ ಕಾರ್ಯಾಚರಣೆ ಕೊನೆಗೊಂಡರೂ, ಒಳನುಸುಳುವಿಕೆ ನಿಗ್ರಹಿಸುವ ನಮ್ಮ ಪಡೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಗುಪ್ತಚರ ಆಧರಿತ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಪಾಕ್ ಬೆಂಬಲಕ್ಕಿದೆ ಸೂಕ್ತ ಸಾಕ್ಷ್ಯ
ಪಾಕಿಸ್ತಾನ ಸೇನೆಗೆ ಗೊತ್ತಿಲ್ಲದೇ ಅಥವಾ ಅವರ ಬೆಂಬಲವಿಲ್ಲದೇ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುವಿಕೆ ಪ್ರಯತ್ನ ನಡೆಯಲು ಸಾಧ್ಯವೇ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಸ್ಪಷ್ಟವಾಗಿ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

