ಜವಳಿ ಅಭಿವೃದ್ಧಿ ನಿಗಮ ಮುಚ್ಚಲು ಸದಸ್ಯರಿಂದಲೇ ಆಗ್ರಹ
ಬೆಳಗಾವಿ: ನೇಕಾರರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಜವಳಿ ಸೌಲಭ್ಯ ಅಭಿವೃದ್ಧಿ ನಿಗಮದ ಅಗತ್ಯವಿಲ್ಲ. ಅಧಿಕಾರಿಗಳ ಭ್ರಷ್ಟಾಚಾರ, ಸರ್ವಾಧಿಕಾರದಿಂದ ಬಡ ನೇಕಾರರ ಮೇಲೆ ಹೊರೆ ಬೀಳುತ್ತಿದೆ. ಆದ್ದರಿಂದ ತಕ್ಷಣ ನಿಗಮವನ್ನು ಮುಚ್ಚುವುದು ಒಳಿತು ಎಂದು ನಿಗಮದ ಸದಸ್ಯರಾದ ಗಜಾನನ ಗುಂಜೇರಿ, ಸಂತೋಷ ಟೋಪಗಿ, ವೆಂಕಟೇಶ ವನಹಳ್ಳಿ, ರಮೇಶ ಹೆಡಾ, ಶ್ರೀಶೈಲ ಪಿಟಗಿ ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸಾವಿರಾರು ಕೋಟಿ ಯೋಜನೆಯನ್ನು ನಿಗಮದ ಅಧಿಕಾರಿಗಳು ಮನಬಂದಂತೆ ನಿರ್ವಹಿಸುತ್ತಿದ್ದಾರೆ. ಇದರಿಂದ ರಾಜ್ಯದ ನೇಕಾರರಿಗೆ ಯಾವುದೇ ಲಾಭವೂ ಆಗುತ್ತಿಲ್ಲ ಎಂದರು. ವಿದ್ಯಾ ವಿಕಾಸ ಯೋಜನೆಯಡಿ 2010-11ರಿಂದ ಮೂರು ವರ್ಷಗಳು ನಿಗಮದಿಂದ ಪೂರೈಸಿದ ಬಟ್ಟೆ ಕಳಪೆಯಾಗಿದೆ. ಅಲ್ಲದೆ ನಿಗದಿತ ಅವಧಿಗಿಂತ ತಡವಾಗಿ ಪೂರೈಸಲಾಗಿದೆ ಎಂಬ ನೆಪ ಒಡ್ಡಿ ಸರ್ಕಾರ ನಿಗಮಕ್ಕೆ 3.36 ಕೋಟಿ ದಂಡ ವಿಧಿಸಿದೆ. ಇದರಿಂದ ಬಟ್ಟೆ ಪೂರೈಸಿದ ಬಡ ನೇಕಾರರಿಗೆ ಅನ್ಯಾಯವಾಗಿದೆ. ನೇಕಾರರ ಮೇಲೆ ನೇರವಾಗಿ ದಂಡದ ಮೊತ್ತ ಬಿದ್ದಿದೆ. ರಾಜ್ಯ ಸರ್ಕಾರ ತಕ್ಷಣ ಇದನ್ನು ರದ್ದುಪಡಿಸಬೇಕೆಂದರು.
ಬಿಡುಗಡೆಯಾಗದ ಸಬ್ಸಿಡಿ ಸಾಲ: ನೇಕಾರರಿಗೆ ಶೇ.3ರ ಬಡ್ಡಿ ದರದಲ್ಲಿ ನೀಡುವ ಸಾಲದ ಸಬ್ಸಿಡಿ ಹಣ ಕಳೆದ 2012ರ ಮಾರ್ಚ್‌ನಿಂದ ಇದುವರೆಗೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಕಟಿಸಿದ ಸಣ್ಣ ನೇಕಾರರ 25 ಸಾವಿರದವರೆಗಿನ ಸಾಲವೂ ಮನ್ನಾ ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಅ.9 ರಂದು ಬೆಳಗಾವಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

