ಪ್ರಧಾನ ಸುದ್ದಿ

ಇಲಾಖೆ ಒಪ್ಪಿಗೆ ಸಿಕ್ಕಿಲ್ಲ, ಮಕ್ಕಳಿಗೆ ದಸರಾ ದರ್ಶನ ಇಲ್ಲ

Published On :

ಕ.ಪ್ರ.ವಾರ್ತೆ  ಮಂಗಳೂರು  ಅ. 12
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ 'ಕರ್ನಾಟಕ ದರ್ಶನ' ಪ್ರವಾಸದಲ್ಲಿ ಮೈಸೂರು ದಸರಾ ತೋರಿಸುವುದು ಕಡ್ಡಾಯ ಎಂದು ಸೂಚಿಸಿದೆ. ಆದರೆ ಇಲಾಖೆಯೇ ಅಂತಿಮ ಅನುಮೋದನೆ ನೀಡಿಲ್ಲ, ಹಣಕಾಸು ಇಲಾಖೆ ಇನ್ನೂ ಮೊತ್ತ ಬಿಡುಗಡೆ ಮಾಡಿಲ್ಲ. ಒಂದು ವೇಳೆ ಹಣ ಬಿಡುಗಡೆ ಮಾಡಿದರೂ ಅ.25ರೊಳಗೆ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೈಸೂರು ದಸರಾ ದರ್ಶನ ಸಿಗದು.
ಇನ್ನೊಂದು ವಿಪರ್ಯಾಸವೆಂದರೆ, ಬೇರೆ ಜಿಲ್ಲೆಗಳಿಂದ ಬಂದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಲಿಯುತ್ತಿರುವ ಇದೇ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು 'ಕರ್ನಾಟಕ ದರ್ಶನ' ಅವಕಾಶ ವಂಚಿತರಾಗಿದ್ದಾರೆ. ಇದಕ್ಕೆ ಕಾರಣ ನಂಜುಂಡಪ್ಪ ವರದಿಯಲ್ಲಿ ಈ ಎರಡು ಜಿಲ್ಲೆಗಳು ಹಿಂದುಳಿದ ಜಿಲ್ಲೆ ಪಟ್ಟಿಗೆ ಸೇರದಿರುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ ಸುತ್ತೋಲೆ ಪ್ರಕಾರ, 8, 9 ಮತ್ತು 10ನೇ ತರಗತಿಯ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಕ್ಕಳಿಗೆ ಈ ಕಾರ್ಯಕ್ರಮ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿತ್ತು. ಅ.10ರಿಂದ 25ರವರೆಗೆ 29 ಜಿಲ್ಲೆಗಳು ವಿವಿಧ ದಿನಾಂಕಗಳಂದು 'ಕರ್ನಾಟಕ ದರ್ಶನ' ಮಾಡಬೇಕು. ಪ್ರತಿ ಜಿಲ್ಲೆಯಿಂದ ಪ್ರತಿ ತಂಡದಲ್ಲಿ ತಲಾ 50 ವಿದ್ಯಾರ್ಥಿಗಳಂತೆ ಒಟ್ಟು 300 ಮಕ್ಕಳನ್ನು 6 ತಂಡಗಳಲ್ಲಿ ರಚಿಸಿ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಇಲಾಖೆ ಒಪ್ಪಿಗೆ ಸಿಕ್ಕಿಲ್ಲ: ಪ್ರವಾಸ ತೆರಳುವ ಮಕ್ಕಳ ಪಟ್ಟಿಯನ್ನು ಆಯಾ ಇಲಾಖೆ ಅಧಿಕಾರಿಗಳು ಜಿಲ್ಲೆಯಿಂದ ಕಳುಹಿಸಿದ್ದಾರೆ. ಈ ಪಟ್ಟಿಗೆ ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ನೀಡಬೇಕು. ಅಲ್ಲದೆ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಬೇಕು. ಇದಾವುದೂ ಇದುವರೆಗೆ ಆಗಿಲ್ಲ. ಮೈಸೂರು ದಸರಾ ದರ್ಶನ ಕಡ್ಡಾಯ, ಸುತ್ತೂರು ಮಠದಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈಗ ಸರ್ಕಾರಿ ರಜೆ ಬಂದಿರುವುದರಿಂದ ಸೋಮವಾರವರೆಗೆ ಸಾಧ್ಯವಿಲ್ಲ. ಮಂಗಳವಾರ ಎರಡೂ ಇಲಾಖೆಗಳು ಒಪ್ಪಿಗೆ ನೀಡಿದರೂ ಬುಧವಾರ ಮತ್ತೆ ಹಬ್ಬದ ರಜೆ. ಶುಕ್ರವಾರ ವಾಲ್ಮೀಕಿ ಜಯಂತಿ ರಜೆ. ಆಗ ದಸರಾ ಮುಗಿದಿರುತ್ತದೆ. ಹೀಗಾಗಿ ಅ.25ರವರೆಗೆ ಅವಕಾಶವಿದ್ದರೂ ದಸರಾ ಹಬ್ಬದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ.
ಅರ್ಹರಿದ್ದರೂ ಪ್ರವಾಸ ಭಾಗ್ಯವಿಲ್ಲ: ವಿಶೇಷ ಘಟಕ ಯೋಜನೆ ಅನುದಾನದಲ್ಲಿ ಪ್ರತಿವರ್ಷ ಪ್ರವಾಸೋದ್ಯಮ ಹಾಗೂ ವಾರ್ತಾ ಇಲಾಖೆ ಈ ಮಕ್ಕಳ ಪ್ರವಾಸ ಏರ್ಪಡಿಸುತ್ತದೆ. ಇದರಲ್ಲಿ ಎಲ್ಲ ಜಿಲ್ಲೆಗಳ ಎಲ್ಲ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಕ್ಕಳಿಗೆ ಅವಕಾಶ ಸಿಗುತ್ತಿತ್ತು. ಆದರೆ ಪ್ರವಾಸೋದ್ಯಮ ಇಲಾಖೆ ಈ ಬಾರಿ ಆಯೋಜಿಸಿದ 'ಕರ್ನಾಟಕ ದರ್ಶನ'ದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಹಾಸ್ಟೇಲ್‌ಗಳಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ.
ಈ ಬಗ್ಗೆ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯೂ ಇಲ್ಲ. ಏಕೆಂದರೆ ನಂಜುಂಡಪ್ಪ ವರದಿಯಲ್ಲಿ ಈ ಎರಡು ಜಿಲ್ಲೆ ಹೆಸರು ಇಲ್ಲ. ಹಾಗಾಗಿ 29 ಜಿಲ್ಲೆಗಳ 114 ಹಿಂದುಳಿದ ತಾಲೂಕುಗಳಲ್ಲಿರುವ ಮಕ್ಕಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. ಈ ಉಭಯ ಜಿಲ್ಲೆಗಳಲ್ಲಿ 62 ಹಾಸ್ಟೇಲ್‌ಗಳಲ್ಲಿ 3 ಸಾವಿರಕ್ಕೂ ಅಧಿಕ ಹಿಂದುಳಿದ ಮಕ್ಕಳಿದ್ದು, ಇದರಲ್ಲಿ ಹೈಸ್ಕೂಲ್‌ನಲ್ಲಿ ಕಲಿಯುತ್ತಿರುವವರೂ ಇದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಬೇರೆ ಬೇರೆ ಜಿಲ್ಲೆಯಿಂದ ಬಂದವರು. ಈ ಜಿಲ್ಲೆ ಹಿಂದುಳಿದಿಲ್ಲ ಎಂಬ ಏಕಮಾತ್ರ ಕಾರಣಕ್ಕೆ ಈ ಮಕ್ಕಳೂ ಪ್ರವಾಸ ವಂಚಿತರಾಗುತ್ತಿದ್ದಾರೆ.

 ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.