ಹಳ್ಳಿಗಳ ಗಡಿ ಗುರುತಿಸಲು ದಾಖಲೆಗಳಿಲ್ಲ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ. 25-
ಬಳ್ಳಾರಿ ಗಡಿ ಭಾಗದ ಮತ್ತು ಗಣಿಕಾರಿಕೆಯಿಂದಾಗಿ ಗಮನ ಸೆಳೆದಿರುವ ಓಬಳಾಪುರ, ಸಿದ್ದಾಪುರ ಮತ್ತು ಮಲ್ಲಪನಗಡಿ ಹಳ್ಳಿಗಳು ಕರ್ನಾಟಕದ್ದೇ ಅಥವಾ ಆಂಧ್ರಪ್ರದೇಶದ್ದೇ ಎಂಬುದಕ್ಕೆ ಎರಡೂ ರಾಜ್ಯಗಳ ಬಳಿ ದಾಖಲೆಗಳಿಲ್ಲ.
ಹೌದು, ಅಕ್ರಮ ಗಣಿಗಾರಿಕೆಯಿಂದಾಗಿ ಗಡಿ ನಾಶವಾಗಿ ಕಾಣಿಸಿಕೊಂಡ ವಿವಾದ ಬಗೆಹರಿಸಿಕೊಳ್ಳಲು ಎರಡೂ ರಾಜ್ಯಗಳು ಮುಂದಾಗಿವೆಯಾದರೂ ದಾಖಲೆಗಳು ಲಭ್ಯವಾಗುತ್ತಿಲ್ಲ. ಏಕೆಂದರೆ, ಈ ಪ್ರದೇಶ ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಹೀಗಾಗಿ ದಾಖಲೆಗಳು ತಮಿಳುನಾಡು ಬಳಿ ಇವೆ.
ಈ ಹಿನ್ನೆಲೆಯಲ್ಲಿ ಈ ಮೂರು ಹಳ್ಳಿಗಳ ಗಡಿ ಗುರುತಿಸಲು ಸರ್ವೇ ಆಫ್ ಇಂಡಿಯಾದಿಂದ ಸಮೀಕ್ಷೆ ನಡೆಸಬೇಕು ಎಂದು ಆಂಧ್ರಪ್ರದೇಶ ಹೇಳಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಹಿಂದೆ 2008ರಲ್ಲಿ ಮೂರು ಹಳ್ಳಿಗಳ ಗಡಿ ಸಮಸ್ಯೆ ಕುರಿತಂತೆ ಪರಿಶೀಲಿಸಿ ವರದಿ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ 2011ರಲ್ಲಿ ವರದಿಯನ್ನೂ ನೀಡಿತ್ತು. ಹಿಂದೆ ಈ ಪ್ರದೇಶ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮೇಲಾಗಿ ಅದರ ದಾಖಲೆಗಳು ಎರಡೂ ರಾಜ್ಯಗಳಲ್ಲಿ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ದಾಖಲಾತಿ ಕೊರತೆ ಇದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಈ ಮಧ್ಯೆ ಗಡಿ ಇತ್ಯರ್ಥವನ್ನು ಎರಡೂ ರಾಜ್ಯಗಳು ಸೇರಿ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಆಂಧ್ರಪ್ರದೇಶದ ಕಂದಾಯ ಸಚಿವರು ರಾಜ್ಯದ ಕಂದಾಯ ಸಚಿವರಿಗೆ ಪತ್ರ ಬರೆದಿದ್ದರು.
ಅದರಂತೆ ಶುಕ್ರವಾರ ಆಂಧ್ರಪ್ರದೇಶದ ಕಂದಾಯ ಸಚಿವ ರಘುವೀರರೆಡ್ಡಿ ಅವರು ರಾಜ್ಯದ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಘುವೀರರೆಡ್ಡಿ, ಗಡಿ ಸಮಸ್ಯೆ ಬಗೆಹರಿಸಲು ಸಮೀಕ್ಷೆ ನಡೆಸುವಂತೆ ಸರ್ವೇ ಆಫ್ ಇಂಡಿಯಾಗೆ ಎರಡೂ ರಾಜ್ಯಗಳು ಮನವಿ ಮಾಡಿಕೊಳ್ಳಬೇಕು ಎಂಬುದು ಆಂಧ್ರಪ್ರದೇಶದ ನಿಲುವಾಗಿದೆ ಎಂದು ಹೇಳಿದರು.
ಈ ಕುರಿತಂತೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಈ ಭಾಗದಲ್ಲಿ ಗಣಿ ನಿಕ್ಷೇಪವಿದೆ. ಮೇಲಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮುಂದಿದೆ. ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಂದು ನಿರ್ಧಾರ ಕೈಗೊಂಡು ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ತಿಳಿಸಿದರು.
ರೇಲ್ವೆ ಯೋಜನೆಗೆ ಸಹಕರಿಸಿ: ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಯದುರ್ಗದಿಂದ ತುಮಕೂರುವರೆಗಿನ 205 ಕಿಲೋ ಮೀಟರ್ ರೇಲ್ವೆ ಮಾರ್ಗ ನಿರ್ಮಾಣದ ಬಗ್ಗೆಯೂ ಚರ್ಚಿಸಲಾಯಿತು. ರೇಲ್ವೆ ಮಾರ್ಗ ಪೂರ್ಣಗೊಂಡರೆ ರಾಯದುರ್ಗದಿಂದ ಬಳ್ಳಾರಿ- ಬೆಂಗಳೂರು ಮಧ್ಯೆ ಸಂಚಾರ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಯೋಜನೆಗೆ ಸಹಕಾರಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರ ರಾಜ್ಯ ಸರ್ಕಾರವನ್ನು ಕೋರಿದ್ದು, ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಒಟ್ಟು 205 ಕಿ.ಮೀ. ಪೈಕಿ 103 ಕಿ.ಮೀ. ಆಂಧ್ರಪ್ರದೇಶ ವ್ಯಾಪ್ತಿಯಲ್ಲಿದೆ. ರಾಜ್ಯ ಮತ್ತು ರೇಲ್ವೆ ಇಲಾಖೆ ಪಾಲುದಾರಿಕೆಯೊಂದಿಗೆ ರೂಪಿಸುತ್ತಿರುವ ರೇಲ್ವೆ ಮಾರ್ಗಕ್ಕೆ ಆಂಧ್ರಪ್ರದೇಶ ಸರ್ಕಾರ 100 ಕೋಟಿ ಬಿಡುಗಡೆ ಮಾಡಿ ರೇಲ್ವೆ ಇಲಾಖೆಯಲ್ಲಿ ಠೇವಣಿ ಇಟ್ಟಿದ್ದು, ಭೂಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಯಾವುದೇ ಪ್ರಗತಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳಿಸಲು ಆಂಧ್ರ ಸರ್ಕಾರ ಕರ್ನಾಟಕದ ಸಹಕಾರ ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

