ಕೈ ಗೆ ಸಿಡಿದ ರಾಹುಲ್ ಬಾಂಬ್

ನವದೆಹಲಿ: ಮುಜಾಫರನಗರದಲ್ಲಿ ಐಎಸ್ಐ ಮುಸ್ಲಿಂ ಯುವಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ರಾಜಕಾರಣದ ಎಲ್ಲಾ ಕೋನಗಳಿಂದಲೂ ಟೀಕೆಗೊಳಗಾಗಿದೆ.
ಗುಪ್ತಚರ ದಳದ ಮಾಹಿತಿ ಕಾಂಗ್ರೆಸ್ ಉಪಾಧ್ಯಕ್ಷ, ಸಂಸದ ರಾಹುಲ್ ಗಾಂಧಿಗೆ ಗೊತ್ತಾದದ್ದು ಹೇಗೆ? ಇದು ಬಿಜೆಪಿಯ ಪ್ರಶ್ನೆ. ಈ ಸಂಬಂಧ ಮಾತನಾಡಿರುವ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್, ರಾಹುಲ್ ಗಾಂಧಿ ಪ್ರಧಾನಿಯೂ ಅಲ್ಲ, ಗೃಹ ಸಚಿವರೂ ಅಲ್ಲ. ಆದರೂ ಗುಪ್ತಚರ ದಳದ ಗೌಪ್ಯ ಮಾಹಿತಿ ಅವರಿಗೆ ತಲುಪಿದ್ದು ಹೇಗೆ. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ರಾಹುಲ್ಗೆ ಗೊತ್ತಾದ ಬಗೆಯನ್ನು ಬಹಿರಂಗಗೊಳಿಸಬೇಕು, ಇಲ್ಲವೇ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಘೋಷಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಇದಷ್ಟೇ ಅಲ್ಲ, ಪಾಕಿಸ್ತಾನದ ಐಎಸ್ಐ ಭಾರತದ ಮುಸ್ಲಿಂ ಯುವಕರ ಜೊತೆ ಸಂಪರ್ಕದಲ್ಲಿದೆ ಎಂಬ ಮಾಹಿತಿ ಸತ್ಯವಾದರೆ, ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಈ ವಿಚಾರವನ್ನಾದರೂ ಬಹಿರಂಗಪಡಿಸಿ ಎಂದೂ ಅವರು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಈ ಹೇಳಿಕೆ ಮುಸ್ಲಿಮರ ದೇಶಭಕ್ತಿಯನ್ನೇ ಪ್ರಶ್ನಿಸವಂತಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ಗುಪ್ತಚರ ಇಲಾಖೆ ಐಎಸ್ಐ ಸಂಪರ್ಕದ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಕೂಡ ರಾಹುಲ್ ಹೇಳಿಕೆಯನ್ನು ಅಲ್ಲಗಳೆದಿದೆ.
ಮುಸ್ಲಿಂ ನಾಯಕ ಆಕ್ಷೇಪ: ಸ್ವತಃ ಮುಸ್ಲಿಂ ಮೌಲ್ವಿಗಳೇ ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ನಾಯಕ ಹೇಳಿಕೆ ನೀಡುವಾಗ ಜಾಗೃತರಾಗಿರಬೇಕು. ಇಂಥ ಹೇಳಿಕೆಗಳು ನಮ್ಮ ದೇಶ ಭಕ್ತಿಯನ್ನೇ ಪ್ರಶ್ನಿಸುವಂತಿವೆ ಎಂದು ಟೀಕಿಸಿದ್ದಾರೆ. ಈ ಕೂಡಲೇ ರಾಹುಲ್ ಗಾಂಧಿ ಹೇಳಿಕೆ ವಾಪಸ್ ಪಡೆಯಬೇಕು ಮತ್ತು ಮುಸ್ಲಿಮರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು: ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಹುಲ್ ಗಾಂಧಿ ಧರ್ಮ ಧರ್ಮಗಳ ನಡುವೆ ಕಂದಕ ನಿರ್ಮಿಸಲು ನೋಡುತ್ತಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅದು ದೂರು ನೀಡಿದೆ. ಪಂಚ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕಂದಕ ಸೃಷ್ಟಿಸಲು ನೋಡುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದೇ ವೇಳೆ ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಗುಪ್ತಚರ ದಳದ ನಿವೃತ್ತ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಪ್ತಚರ ದಳ ಹೇಗೆ ರಾಜಕೀಯ ಪಕ್ಷವೊಂದರ ನೇತಾರನ ಜೊತೆ ಮಾಹಿತಿ ಹಂಚಿಕೊಂಡಿದೆ. ಇದು ಬಹಿರಂಗಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಜಾಫರನಗರ ಸಂತ್ರಸ್ತರ ಜೊತೆ ಐಎಸ್ಐ ಸಂಪರ್ಕವಿದೆ ಎಂಬ ಗುಪ್ತಚರ ದಳದ ರಹಸ್ಯ ಮಾಹಿತಿ ರಾಹುಲ್ ಗಾಂಧಿಗೆ ಹೇಗೆ ಸಿಕ್ಕಿತು ಎಂಬುದೇ ಕಳವಳಕಾರಿ ಸಂಗತಿ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಗಂಭೀರವಾಗಿ ಪರಿಗಣಿಸಬೇಕು.
- ಅರುಣ್ ಭಗತ್, ನಿವೃತ್ತ ಗುಪ್ತಚರ ದಳ ಮುಖ್ಯಸ್ಥ
ರಾಹುಲ್ ಗಾಂಧಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ದೇಶದಲ್ಲಿ ಕೋಮುಗಲಭೆಗಳು ಆದಾಗ ಎರಡು ರೀತಿಯ ಮನಸ್ಸುಗಳು ಕುಣಿಯುತ್ತವೆ. ಒಂದು ಪಾಕಿಸ್ತಾನದ ಐಎಸ್ಐ, ಮತ್ತೊಂದು ಬಿಜೆಪಿ.
- ಶಕೀಲ್ ಅಹ್ಮದ್, ಕಾಂಗ್ರೆಸ್ ನಾಯಕ
ಐಎಸ್ಐ ಸಂಪರ್ಕದಲ್ಲಿರುವ ಮುಸ್ಲಿಂ ಯುವಕರ ಹೆಸರು ಬಹಿರಂಗಪಡಿಸಿ. ಇಲ್ಲದಿದ್ದರೆ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಅವರಿಗೆ ಅವಮಾನ ಮಾಡಿರುವ ನೀವು ಬಹಿರಂಗವಾಗಿ ಕ್ಷಮೆಯಾಚಿಸಿ.
- ನರೇಂದ್ರ ಮೋದಿಬಿಜೆಪಿ ಪ್ರಧಾನಿ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


