ನಮ್ಮ ಆದ್ಯತೆಗಳ ಪಲ್ಲಟ ಹಿನ್ನೆಲೆಗೆ ಕನ್ನಡದ ವಿವೇಕ

ಬೆಂಗಳೂರಿನಲ್ಲಿ ಕನ್ನಡವು ಅಂದೂ ನಾಶವಾಗಲಿಲ್ಲ; ಮುಂದೂ ನಾಶವಾಗುವುದಿಲ್ಲ. ಕಾಲಕಾಲಕ್ಕೆ ಜೀವಂತಿಕೆಯನ್ನು ಮೆರೆಯುತ್ತ ಬಂದಿರುವ ಕನ್ನಡಪರ ಕ್ರಿಯಾಶೀಲತೆಯು ಇದರ ಹಿಂದಿನ ಒಂದು ಪ್ರಮುಖ ಕಾರಣವಾಗಿದೆ.
ಕನ್ನಡ ಭಾಷೆ ಮತ್ತು ಬದುಕು ವಿವಿಧ ಕಾಲಘಟ್ಟಗಳಲ್ಲಿ ವಿವಿಧ ವಿನ್ಯಾಸದ ಆತಂಕಗಳನ್ನು ಎದುರಿಸುತ್ತ ಜೀವಂತಿಕೆಯನ್ನು ಸಾದರಪಡಿಸುತ್ತ ಬಂದಿದೆ. ಹಾಗೆ ನೋಡಿದರೆ ಕನ್ನಡದ ಮೊದಲನೇ ಶಾಸನವೆಂದು ನಾವು ಹೆಮ್ಮೆಯಿಂದ ಹೇಳುವ 'ಹಲ್ಮಿಡಿ ಶಾಸನ'ದಲ್ಲಿ ಕೆಲವು ಕನ್ನಡ ಪದಗಳಿರುವುದರಿಂದ ಮೊದಲನೇ ಕನ್ನಡ ಶಾಸನ ಎಂದು ಪ್ರಸಿದ್ಧವಾಗಿದೆ. ಕನ್ನಡ ಆದಿಕವಿಯೆಂಬ ಕೀರ್ತಿಗೆ ಭಾಜನನಾಗಿರುವ ಮಹಾಕವಿ ಪಂಪ ಸಂಸ್ಕೃತದ 'ಮಾರ್ಗ'ಕ್ಕೆ ಎದುರಾಗಿ ಕನ್ನಡದ 'ದೇಸಿ'ಯನ್ನು ಬಳಸುತ್ತಲೇ ಸಂಸ್ಕೃತದಿಂದ ಕನ್ನಡ 'ಸ್ವತಂತ್ರ'ಗೊಳಿಸುವ ಕ್ರಿಯಾಶೀಲತೆ ತೋರಿದ್ದು ಒಂದು ಐತಿಹಾಸಿಕ ಘಟನೆಯೆಂದೇ ನನ್ನ ಭಾವನೆ. ಮುಂದೆ ನಯಸೇನ 'ಬೆರಸಲ್ಕೆ ತಕ್ಕುದೆ ಘೃತಮುಮಂ ತೈಲಮುಮಂ' ಎಂದು ಸಾರುತ್ತಾ ಸಂಸ್ಕೃತ ಮತ್ತು ಕನ್ನಡವನ್ನು ಬೆರಕೆ ಮಾಡುವುದಕ್ಕೂ ವಿರೋಧ ಒಡ್ಡಿದ. ಆಂಡಯ್ಯ ಕವಿ ಸಂಸ್ಕೃತ ಪದಗಳನ್ನು ಬಳಸುವುದಿಲ್ಲವೆಂದು ಸಂಕಲ್ಪಿಸಿ ಕನ್ನಡದ ತದ್ಭವ ಪದಗಳನ್ನು ರೂಪಿಸಿ 'ಕಬ್ಬಿಗರ ಕಾವ' ಎಂಬ ಕಾವ್ಯ ಬರೆದ. ಮುದ್ದಣ್ಣ ಕವಿಯ ಕಾಲಕ್ಕೆ ಸಂಸ್ಕೃತ ಮತ್ತು ಕನ್ನಡದ ಸ್ಥಾನಮಾನವನ್ನು ನಿರ್ಣಯಿಸುವ ಸಮನ್ವಿತ ವಿವೇಕವೊಂದು ಕಾಣಿಸಿಕೊಂಡು ಸಂಸ್ಕೃತವು 'ಕರ್ಮಣಿ ಸರದೊಳ್ ಚೆಂಬುಳಂ ಕೋದಂತಿಕೆ' ಇರಬೇಕೆಂದು ಹೇಳಿದ ಕನ್ನಡವು ಕರಿಮಣಿ ಸರವಾದರೆ (ಮಾಂಗಲ್ಯ) ಸಂಸ್ಕೃತವು ಅದಕ್ಕೆ ಪೋಣಿಸಿದ ಕೆಂಪು ಹವಳ ಮಾತ್ರವಾಗಿರಬೇಕೆಂಬುದು ಈ ವಿವೇಕ. ಹೀಗೆ ಸಂಸ್ಕೃತದ ಹಿಡಿತದಿಂದ ವಿಮೋಚನೆಗೊಳ್ಳುವ ಹೋರಾಟದಲ್ಲಿ ಕನ್ನಡದ ವಿವೇಕವೊಂದು ಆಯಾ ಕಾಲಕ್ಕೆ ತಕ್ಕಂತೆ ಹರಿದು ಬಂದಿದೆ.
ಆಧುನಿಕ ಸಂದರ್ಭದಲ್ಲಿ ಕನ್ನಡವು ಆಂಗ್ಲ ಮತ್ತು ಹಿಂದಿ ಭಾಷೆಯ ಪ್ರಾಬಲ್ಯಕ್ಕೆ ಎದುರಾಗಿ ನಿಂತು ಉಳಿಯುವ ಬೆಳೆಯುವ ಸವಾಲನ್ನು ಎದುರಿಸಿದೆ. ಜಗತ್ತಿನಲ್ಲಿ ಪ್ರಬಲ ಭಾಷೆಗಳ ಪ್ರಭಾವ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವರೂಪಗಳ ಪರಿಣಾಮಗಳಿಂದ ಸುಮಾರು 30,000 ಭಾಷೆಗಳು ಇಲ್ಲವಾಗಿವೆ. ಈಗ ಒಟ್ಟು 6703 ಭಾಷೆಗಳು ಚಾಲ್ತಿಯಲ್ಲಿದ್ದು, ಅದರಲ್ಲಿ ಆಂಗ್ಲಭಾಷೆಯು ಪ್ರಪಂಚದ ಸುಮಾರು ಮೂರನೇ ಭಾಗದಷ್ಟು ಜನರಿಗೆ ಗೊತ್ತು. ಆದರೆ ಆಧುನಿಕ ತಂತ್ರಜ್ಞಾನದ ಫಲವಾಗಿ ಅಂತರ್ಜಾಲದಲ್ಲಿ ಆಂಗ್ಲಭಾಷೆಯು ಶೇ.68ರಷ್ಟು ಬಳಕೆಯಲ್ಲಿದೆ. ಇನ್ನು ಹಿಂದಿಗೆ ನಮ್ಮ ಸಂವಿಧಾನವು ವಿಶೇಷ ಸವಲತ್ತು ಒದಗಿಸಿದೆ. ಹಿಂದಿ ಭಾಷೆಗೆ ಇರುವ ವಿಶೇಷ ಸವಲತ್ತುಗಳು ಸಂಸ್ಕೃತ ಮತ್ತು ಅರೇಬಿಕ್ ಭಾಷೆಗಳಿಗೆ ವಿಸ್ತಾರಗೊಂಡಿರುವುದನ್ನು ಬಿಟ್ಟರೆ ಬೇರಾವ ಭಾರತೀಯ ಭಾಷೆಗಳಿಗೂ ಅಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಎಲ್ಲಿ ಭಾರತೀಯ ಭಾಷೆಗಳೂ ಸಮಾನವೆಂದು ಅಂಶವನ್ನು ಸಂವಿಧಾನದಲ್ಲಿ ಅಳವಡಿಸುವಂತೆ ಮಾಡಲು 'ಭಾಷಾ ಸಮಾನತೆಯ ಹೋರಾಟ'ವನ್ನು ಕಟ್ಟಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ಗಟ್ಟಿಯಾಗಿ ತಿಳಿ ಹೇಳಬೇಕಾಗಿದೆ. ಜೊತೆಗೆ ಕನ್ನಡ ಚಳವಳಿಯನ್ನು ಕುರಿತು ತಾತ್ವಿಕ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವ ಆತ್ಮಾವಲೋಕನ ನಡೆಯಬೇಕಾಗಿದೆ.
ಈ ಹಿನ್ನಲೆಯಲ್ಲಿ ಕೆಲವು ಅಂಶಗಳನ್ನು ನಿರೂಪಿಸ ಬಯಸುತ್ತೇನೆ. ನಾನು ನಿರೂಪಿಸುವ ಅಂಶಗಳು 'ಕನ್ನಡ ವಿವೇಕದ ಪರಂಪರೆ'ಗೆ ಪೂರಕವೆಂದು ಭಾವಿಸುತ್ತೇನೆ.
1) ಕನ್ನಡ ಚಳವಳಿಗೆ ತನ್ನದೇ ಆದ ಪರಂಪರೆಯಿದೆ. ಪಂಪ ಕವಿಯು 'ಮಾರ್ಗ'ಕ್ಕೆ ಎದುರಾಗಿ 'ದೇಸಿ'ಯನ್ನು ಬಳಸಿತೊಡಗಿದ್ದಲ್ಲದೆ, ಜೈನಧರ್ಮ ಮಾರ್ಗದಲ್ಲಿದ್ದು ಅದನ್ನು ಮೀರಿ 'ಮನುಷ್ಯ ಜಾತಿ ತಾನೊಂದೆ ವಲಂ' ಎಂದಾಗಲೇ ಕನ್ನಡಕ್ಕೆ, ಕನ್ನಡ ಚಳವಳಿಗೆ, ಏಕಕಾಲಕ್ಕೆ ಭಾಷಿಕ ಮತ್ತು ಸಾಮಾಜಿಕ ಆಯಾಮ ದೊರಕಿತು. ಮುಂದೆ ನಯಸೇನ, ಆಂಡಯ್ಯ, ವಚನಕಾರರು, ಕುಮಾರವ್ಯಾಸ, ದಾಸರು, ಮುದ್ದಣ್ಣ ಮುಂತಾದವರ ನೆಲೆಯಲ್ಲಿ ಪ್ರಮುಖ ಮಾದರಿಗಳನ್ನು ಸೃಷ್ಟಿಸಿಕೊಂಡಿತು. ಆಧುನಿಕ ಸಂದರ್ಭದಲ್ಲಿ ಆಲೂರು ವೆಂಕಟರಾಯರು, ಬಿಎಂಶ್ರೀ, ಕುವೆಂಪು, ಬೇಂದ್ರೆ, ಅ.ನ.ಕೃ, ಕೆ.ಎಸ್.ನ ಮುಂತಾದವರು ಸೃಷ್ಟಿಸಿದ ಮಾದರಿಗಳು ಮತ್ತು ಅಭಿವ್ಯಕ್ತಿ ವಿನ್ಯಾಸಗಳು ವಿಸ್ತಾರಗೊಂಡವು. ಮುಂದೆ ಕನ್ನಡ ಚಿಂತಕರು ಮತ್ತು ಹೋರಾಟಗಾರರ ನಡುವೆ ಬೇಡದ ಅಂತರವೊಂದು ನಿರ್ಮಾಣವಾಯಿತು. ಇಂದಿನ ಅನೇಕ ಅನಾಹುತಗಳ ಹಿಂದೆ ಈ 'ಅಂತರ'ದ ಪಾತ್ರವೂ ಇದೆ. ಇದರ ಪರಿಣಾಮವಾಗಿ ಅಸಹನೆಯ ಅಂಶ ಮುನ್ನೆಲೆಗೆ ಬಂದಿದೆ. ಇದಕ್ಕೆ ಆಯ್ದ ಚಿಂತಕರ ಕುಮ್ಮಕ್ಕೂ ಇದೆ. ಕನ್ನಡದ ಕರುಳು ಮತ್ತು ಕೊರಳು ಒಂದಾಗುವ ಬದಲು ಎರಡಾಗುವ ಆತಂಕ ಕಾಣುತ್ತಿದೆ. ಕೆಲವೊಮ್ಮೆ ಉಗ್ರವಾದಿ ಧೋರಣೆ ಬೇಕೆನ್ನಿಸಿದರೂ ವಿವೇಕವಿಲ್ಲದ ಉಗ್ರವಾದವು ಹಿಂಸೆಯಾಗುತ್ತದೆಯೆಂಬ ಎಚ್ಚರಬೇಕೇ ಬೇಕು. ಕನ್ನಡ ಪರಂಪರೆಯಲ್ಲಿ ವಿಕಾಸಗೊಂಡ ವಿವೇಕವನ್ನು ನಾವು ಮರೆಯಬಾರದು. ವಿವೇಕದ ಸ್ಥೂಲ ಮಾದರಿ ಹೀಗಿದೆ:
ಸಂಸ್ಕೃತದ ಪ್ರಾಬಲ್ಯವನ್ನು ವಿರೋಧಿಸಿದರೂ ಅದರ ಜ್ಞಾನವನ್ನು ಕನ್ನಡವು ನಿರಾಕರಿಸಲಿಲ್ಲ. ಇಂಗ್ಲಿಷಿನ ದಾಳಿಯನ್ನು ಪ್ರತಿಭಟಿಸಿದರೂ ಅದರ ಪ್ರಬುದ್ಧ ವಿವೇಕವನ್ನು ಯಾವತ್ತೂ ಬೇಡವೆನ್ನಲಿಲ್ಲ. ಹಿಂದಿಯ ಸವಾರಿಗೆ ಖಂಡನೆಯಿದ್ದರೂ ಅದರೊಳಗಿನ ಸಾಹಿತ್ಯಕ್ಕೆ ಕುರುಡಾಗಲಿಲ್ಲ. ಒಟ್ಟಾರೆಯಾಗಿ ಇದು ಕನ್ನಡದ ವಿವೇಕ. ಈ ವಿವೇಕ ಈಗ ಹಿನ್ನಲೆಗೆ ಸರಿಯುತ್ತಿದೆ. ಇದಕ್ಕೆ ಮತ್ತೊಂದು ಕಾರಣ - ಆದ್ಯತೆಗಳ ಪಲ್ಲಟ. ಕನ್ನಡಕ್ಕೆ ಕರ್ನಾಟಕಕ್ಕೆ ಯಾವುದು ಮೊದಲ ಆದ್ಯತೆ, ಯಾವುದು ಆನಂತರದ ಆದ್ಯತೆ ಎಂದು ಚಿಂತಿಸದೆ, ಭಾವೋದ್ರೇಕದ ಸಂಗತಿಗಳನ್ನು ಆದ್ಯತೆಯ ಅಂಶವನ್ನಾಗಿಸುತ್ತಿರುವುದು ಮತ್ತು ಅಂಥವು ಮಾತ್ರವೇ ಕನ್ನಡದ ಮುಖ್ಯ ಕೆಲಸ ಎಂಬಂತೆ ಪ್ರತಿಪಾದಿಸುತ್ತಿರುವುದು ಕನ್ನಡ ಪರ ಚಿಂತನೆ ಮತ್ತು ಕ್ರಿಯೆಯ ಒಂದು ಮುಖ್ಯ ಕೊರತೆ.
2) ಭವಿಷ್ಯದ ಕನ್ನಡ ಚಳವಳಿಗೆ ಸೂಕ್ತ ಚಿಂತನಾ ಮಾದರಿಯೊಂದು ಬೇಕಾಗಿದೆ. ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯನ್ನಾಗಿ ನೋಡದೆ ಅನ್ನದ ಪ್ರಶ್ನೆಯೆಂದು ಪರಿಗಣಿಸಬೇಕು. 'ಅನ್ನದ ಪ್ರಶ್ನೆ' ಎಂದರೆ ಕನ್ನಡ ಕಲಿತವರು ಬದುಕು ಹಸನಾಗುವಂತೆ ಮಾಡುವ ನೀತಿ ನಿಲುವಿನ ಪ್ರಶ್ನೆ. ಮೊದಲು ಶಿಕ್ಷಣದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಕಲಿಯಲೇಬೇಕಾದ ಪಠ್ಯಕ್ರಮವನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಶಿಕ್ಷಣದಲ್ಲಿ ಕನ್ನಡ ಉಳಿದರೆ ಮುಂದಿನ ಪೀಳಿಗೆಯಲ್ಲೂ ಉಳಿಯುತ್ತದೆ. ಆನಂತರ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಿಗೆ ಕನ್ನಡ ಭಾಷೆಯ ತಿಳುವಳಿಕೆ ಕಡ್ಡಾಯವಾಗಬೇಕು. ಈ ದಿಕ್ಕಿನಲ್ಲಿ ಸೂಕ್ತ ಹಾಗೂ ಶಕ್ತ ಚಳವಳಿ ನಡೆಯಬೇಕು. ಇನ್ನು ಆಡಳಿತ ಎಲ್ಲಾ ಹಂತದಲ್ಲೂ ಕನ್ನಡದ ಅನುಷ್ಠಾನ ಸರಿಯಾಗಿ ಆಗಬೇಕು.
3) ಆಂಗ್ಲ ಮಾಧ್ಯಮದ ಪ್ರಾಬಲ್ಯ ಹೆಚ್ಚುತ್ತಿರುವ ಮತ್ತು ವೃತ್ತಿ ಶಿಕ್ಷಣ ಮುಖ್ಯವೆಂದು ಭಾವಿಸಲಾಗುತ್ತಿರುವ ಸನ್ನಿವೇಶದಲ್ಲಿ ಶಿಕ್ಷಣದಲ್ಲಿ 'ಸಾಂಸ್ಕೃತಿಕ ಪಠ್ಯ'ವನ್ನು ಅಳವಡಿಸಬೇಕು. ಈ ಪಠ್ಯವು ಕರ್ನಾಟಕದ ಸಾಂಸ್ಕೃತಿಕ ಪರಿಚಯ ಮಾಡಿಕೊಡುವಂತಿರಬೇಕು. ಕನ್ನಡವು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆಯುವುದು ಸಹ ತುಂಬಾ ಮುಖ್ಯ. ಹೊಸ ಸನ್ನಿವೇಶ, ಹೊಸ ತಂತ್ರಜ್ಞಾನದ ಸವಾಲುಗಳಿಗೆ ಉತ್ತರ ಕೊಟ್ಟುಕೊಂಡು ಕಟ್ಟುವ ಕ್ರಿಯೆಯಲ್ಲಿ ಕನ್ನಡದ ಒಳಿತು ಅಡಗಿದೆ. ಇದು ಚಿಂತಕರು ಮತ್ತು ಚಳವಳಿಗಾರರು ಒಟ್ಟಾಗಿ ಗಮನಸಬೇಕಾದ ಕೆಲವು ಅಂಶಗಳು. ಆದರೆ ನಾನು ಆರಂಭದಲ್ಲಿ ಪ್ರಸ್ತಾಪಿಸಿದಂತೆ, ಕನ್ನಡಪರ ಚಿಂತಕರು ಮತ್ತು ಚಳವಳಿಗಾರರ ನಡುವೆ 'ಅಂತರ'ವಿರುವುದರಿಂದ 'ಒಟ್ಟಾಗಿ ಗಮನಿಸುವ' ಬಗ್ಗೆ ಅನುಮಾನವಿದೆ. ಕೆಲವು ಚಿಂತಕರು ಕೆಲವು ಚಳವಳಿಗಾರರ ವೈಪರೀತ್ಯ ವಿಚಾರಗಳಿಗಿಂತ ಭಿನ್ನವಾಗಿ ಯೋಚಿಸುವುದಿಲ್ಲವೆಂಬ ಕಟುಸತ್ಯದ ನಡುವೆಯೂ 'ಅಂತರ' ಉಳಿದಿದೆ. ಹಾಗೆ ನೋಡಿದರೆ ಕನ್ನಡದ ಆದ್ಯತೆಗಳನ್ನು ಪಲ್ಲಟಗೊಳಿಸಿ ಹೋರಾಟಕ್ಕೆ ಮೂಲ ಆಹಾರ ಒದಗಿಸುವ 'ವಿದ್ವಾಂಸರು'(ಚಿಂತಕರು?) ನಮ್ಮಲ್ಲಿದ್ದಾರೆ. ಆದ್ದರಿಂದ ಕೇವಲ ಚಳವಳಿಗಾರರನ್ನು ಮಾತ್ರ ಸಿನಿಕತನದಿಂದ ನೋಡಲಾಗದು ಎನ್ನುವ ಸ್ಥಿತಿ ನಮ್ಮದು. ಅನ್ನದ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಪರಚಿಂತನೆ ಮತ್ತು ಚಳವಳಿ ನಡೆಯದಿದ್ದರೆ ಇಂದಿನ ಸ್ಥಿತಿ ಖಂಡಿತ ಬದಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಾವು ಮೊದಲು 'ಬಾಯಿ ಪಾಠದ ಕನ್ನಡಾಭಿಮಾನ'ದಿಂದ ಹೊರಬಂದು ಹೊಸದಾಗಿ ಯೋಚಿಸಬೇಕು. ಬಾಯಿಪಾಠಕ್ಕೆ ಉತ್ತಮ ಉದಾಹರಣೆಯೆಂದರೆ - ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಗತಿ ಕುರಿತ ಮಾತುಗಳು:
4) ಬೆಂಗಳೂರಿನಲ್ಲಿ ಕನ್ನಡಕ್ಕೆ ಆಪತ್ತು ಬಂದಿದೆ ಎಂಬ ಮಾತು ಅನೇಕ ವರ್ಷಗಳಿಂದಲೂ ಇದೆ. ಅದಕ್ಕೆ ಕಾರಣಗಳೂ ಇವೆ. ಬೆಂಗಳೂರು ಹೇಳಿ ಕೇಳಿ ಕಾಸ್ಮೋಪಾಲಿಟನ್ ನಗರ. ಇಂಥ ನಗರಗಳ ಸ್ವರೂಪವು ಚೆನ್ನೈನಂಥ ನಗರಗಳಿಗಿಂತ ಭಿನ್ನ. ಸಂವಿಧಾನಾತ್ಮಕ ಹಕ್ಕಿನ ಕಾರಣಕ್ಕಾಗಿ ಬೇರೆ ಊರಿಂದ ಬರುವವರನ್ನು ತಡೆಯುವಂತಿಲ್ಲ. ತಡೆಯಲಾಗದು. ಕನ್ನಡಿಗರು ದೇಶ ವಿದೇಶದಲ್ಲಿ ನೆಲೆಸಿ ಅಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಸಮ್ಮೇಳನಗಳನ್ನು ನಡೆಸಿ ಕರ್ನಾಟಕವನ್ನು ಕನಸುತ್ತಿರುವಾಗ ಸಂಭ್ರಮ ಪಡುವ ನಾವು, ಬೇರೆ ಭಾಷೆಯವರು ಇಲ್ಲಿಗೆ ಬಂದು ನೆಲೆಸಿ ತಮ್ಮ ಮೂಲ ಭಾಷೆ-ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಪ್ರತಿರೋಧ ಒಡ್ಡುವ ಬದಲು ಅವರನ್ನು ಕನ್ನಡೀಕರಣಗೊಳಿಸುವುದೇ ಸೂಕ್ತ ಮಾರ್ಗ. ಒಕ್ಕೂಟ ವ್ಯವಸ್ಥೆಯಲ್ಲಿ ಅವರವರ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಂಡು ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಕರಗತ ಮಾಡಿಕೊಂಡು ಬದುಕುವುದು ಒಂದು ಅನಿವಾರ್ಯ ಪ್ರಕ್ರಿಯೆಯಾಗಬೇಕು. ಆದ್ದರಿಂದ ಕಾಸ್ಮೋಪಾಲಿಟನ್ ನಗರವೆಂಬ ಕಾರಣಕ್ಕೆ ಕನ್ನಡವನ್ನು ಕಡೆಗಣಿಸುವುದು ಕ್ಷಮಾರ್ಹವಲ್ಲ. ಸಂವಿಧಾನಾತ್ಮಕವೂ ಅಲ್ಲ. ಆದರೂ ಬೆಂಗಳೂರಿನಲ್ಲಿ ಯಾಕೆ ಹೀಗಾಗುತ್ತಿದೆ?
ಮೂರ್ನಾಲ್ಕು ದಶಕಗಳ ಹಿಂದೆ ಬೆಂಗಳೂರನ್ನು ತಮಿಳರು ನುಂಗಿ ಹಾಕುತ್ತಾರೆಂಬ ವಾದ ಹುಟ್ಟಿಕೊಂಡು ಇಲ್ಲಿವರೆಗೆ ಜೀವಂತವಾಗಿತ್ತು. ಈಗ ಆ ಜಾಗಕ್ಕೆ ಐಟಿ, ಬಿಟಿಗಳು ಬಂದಿದ್ದಾರೆ. ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಅಂದೂ ಹೇಳಲಾಗುತ್ತಿತ್ತು. ಇಂದೂ ಹೇಳಲಾಗುತ್ತಿದೆ. ಈ ಹೇಳಿಕೆಯಲ್ಲಿ ಬದಲಾವಣೆಯಾಗಿಲ್ಲ. ಆದರೆ ಬೆಂಗಳೂರು ಬದಲಾವಣೆಗೊಂಡಿದೆ. ಜಾಗತೀಕರಣದ ಅಬ್ಬರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೊಸ ಸಾಮ್ರಾಜ್ಯಗಳಾಗಿ ವಿಜೃಂಭಿಸುತ್ತ ಆರ್ಥಿಕ ನೀತಿಯ ಜೊತೆಗೆ ಸಾಮಾಜಿಕ ಬದುಕನ್ನೂ ನಿಯಂತ್ರಿಸತೊಡಗಿವೆ. ಲಾಭ ಗಳಿಕೆಯ ದಾಹದಲ್ಲಿ ಬದುಕಿನ ಭಾಷೆಯೂ ಬೆಂದು ಹೋಗುತ್ತಿದೆ. ರಾಜ್ಯ ಭಾಷೆಯೂ ತಲ್ಲಣಗೊಂಡಿದೆ. ಇಷ್ಟಾಗಿಯೂ ಬೆಂಗಳೂರಿನಲ್ಲಿ ಕನ್ನಡವು ಅಂದೂ ನಾಶವಾಗಲಿಲ್ಲ; ಮುಂದೂ ನಾಶವಾಗುವುದಿಲ್ಲ. ಕಾಲಕಾಲಕ್ಕೆ ಜೀವಂತಿಕೆಯನ್ನು ಮೆರೆಯುತ್ತ ಬಂದಿರುವ ಕನ್ನಡಪರ ಕ್ರಿಯಾಶೀಲತೆಯು ಇದರ ಹಿಂದಿನ ಒಂದು ಪ್ರಮುಖ ಕಾರಣವಾಗಿದೆ.
ಬೆಂಗಳೂರು ನಗರದ ಪ್ರಸ್ತುತ ಬದಲಾವಣೆಯ ವಿನ್ಯಾಸದ ಹಿಂದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ನೀತಿಗಳ ಪ್ರಭಾವವಿದ್ದು, ನಮ್ಮ ರಾಜ್ಯವು ಸೂಕ್ತ ನೀತಿ ನಿರೂಪಣೆ ಮತ್ತು ಅನುಷ್ಠಾನದ ಮೂಲಕ ಕನ್ನಡಪರ ಬದ್ಧತೆಯನ್ನು ತೋರಬೇಕಾಗಿದೆ. ಕನ್ನಡಪರ ಬದ್ಧತೆಯೆಂದರೆ ಕನ್ನಡಿಗರ ಬದುಕಿನ ಪರವಾದ ಬದ್ಧತೆ. ಕನ್ನಡಿಗರು ಉಳಿಯದೆ ಕನ್ನಡವು ಉಳಿಯುವುದಿಲ್ಲ. ಆದ್ದರಿಂದ ಕನ್ನಡಿಗರಿಗೆ-ಕನ್ನಡ ಬಲ್ಲವರಿಗೆ-ಮಾತ್ರ ಉದ್ಯೋಗ ಎಂಬ ನೀತಿಯು ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಕಡ್ಡಾಯವಾಗಿ ಅನ್ವಯವಾಗಬೇಕು. ಕನ್ನಡ ಮತ್ತು ಉದ್ಯೋಗಕ್ಕೆ ಸಂಬಂಧ ಕಲ್ಪಿಸುವುದು ಮುಖ್ಯವಾಗಬೇಕು. ಕನ್ನಡವನ್ನು ಓದದೆ ಈ ರಾಜ್ಯದಲ್ಲಿ ಯಾರೂ ಶಿಕ್ಷಣವನ್ನು ಪೂರೈಸಲು ಅವಕಾಶವಿರಬಾರದು. ಈ ಅಂಶಗಳಿಗೆ ಮೊದಲನೇ ಆದ್ಯತೆ ನೀಡಿ ಒತ್ತಾಯ ತರುವುದು ಹೋರಾಟ ನಡೆಸುವುದು ಜರೂರಿನ ಕ್ರಿಯೆಯಾಗಬೇಕು. ಅಲ್ಲದೆ ಆಡಳಿತದಲ್ಲಿ ಕನ್ನಡದ ಬಳಕೆ ಮತ್ತಷ್ಟು ವಿಸ್ತಾರಗೊಳ್ಳಬೇಕಾದುದು ಅಗತ್ಯ. ಹೀಗೆ ಉದ್ಯೋಗ, ಶಿಕ್ಷಣ ಮತ್ತು ಆಡಳಿತ - ಈ ಮೂರೂ ಕ್ಷೇತ್ರಗಳು ಆದ್ಯತೆಯ ಮೇಲೆ ಕನ್ನಡ ಕೇಂದ್ರಿತವಾದಾಗ ಕನ್ನಡಿಗರು ಮತ್ತು ಕನ್ನಡ ಉಳಿಯಲು, ಬೆಳೆಯಲು ಸಂಪೂರ್ಣಣ ಸಾಧ್ಯ. ಇದರ ಬದಲು ಆದ್ಯತೆಗಳನ್ನು ಪಲ್ಲಟಗೊಳಿಸಿ ಅದೇ ಅಂತಿಮ ಎಂಬ ಹಟಕ್ಕೆ ಬಿದ್ದರೆ ಯಾರೇನು ಮಾಡಲು ಸಾಧ್ಯ?
ಈಗಲೂ ನನಗೆ ನಂಬಿಕೆಯಿದೆ. ಕನ್ನಡದ ವಿವೇಕ ಇನ್ನೂ ಜಾಗೃತವಾಗಿರುವುದರಿಂದ ಹೊಸ ಸವಾಲಿಗೆ ಉತ್ತರ ಹುಡುಕುತ್ತ ಬೆಂಗಳೂರಲ್ಲಿ ಕನ್ನಡ ಉಳಿಯುತ್ತದೆ; ಆದರೆ ತನ್ನ ಉಳಿವಿಗಾಗಿ ಸೂಕ್ತ ಆದ್ಯತೆಯ ಕನ್ನಡ ಕ್ರಿಯಾಶೀಲತೆಯನ್ನು ಬಯಸುತ್ತದೆ. ಈ ಕ್ರಿಯಾಶೀಲತೆಯ ತಾತ್ವಿಕ ನೆಲೆ ಯಾವುದು?
1 ಕನ್ನಡಿಗರನ್ನು ಉಳಿಸಿ ಕನ್ನಡ ಉಳಿಯುತ್ತದೆ.
2 ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಚೆನ್ನಾಗಿ ಕಲಿಸಿ. ಆಗ ಮಾತೃ ಭಾಷೆಯೂ ಉಳಿಯುತ್ತದೆ. ಕೀಳರಿಮೆಯೂ ಕರಗುತ್ತದೆ.
3 ಜನರ ಮೂಲಕ ಭಾಷೆಯನ್ನು ನೋಡಿ, ಹೊಸ ತಾತ್ವಿಕತೆ ಹುಟ್ಟುತ್ತದೆ; ಭಾಷೆ ಮತ್ತು ಬದುಕು ಒಂದೇ ಆಗಿ ಕಾಣಿಸುತ್ತದೆ ಮತ್ತು ಬದುಕನ್ನು ಬಿಟ್ಟು ಬರೀ ಭಾಷೆಯ ಬಗ್ಗೆ ಚಿಂತಿಸುವ ಕ್ರಮವನ್ನು ತಪ್ಪಿಸುತ್ತದೆ.
- ಬರಗೂರು ರಾಮಚಂದ್ರಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


