ದೇಶದ ಅತ್ಯುತ್ತಮ 10 ವೈದ್ಯ ಕಾಲೇಜುಗಳಲ್ಲಿ ಬಿಮ್ಸ್
ಬೆಳಗಾವಿ: ದೇಶದ ಹತ್ತು ಅತ್ಯುತ್ತಮ ಹೊಸ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ಯೂ ಒಂದು ಸ್ಥಾನವನ್ನು ಪಡೆದುಕೊಂಡಿದೆ.
'ಇಂಡಿಯಾ ಟುಡೆ' ದೇಶ್ಯಾದ್ಯಂತ ಸಮೀಕ್ಷೆ ನಡೆಸಿ, ಪ್ರಕಟಿಸಿರುವ ಟಾಪ್ ಟೆನ್ ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕದ ಬಿಮ್ಸ್ 9ನೇ ಸ್ಥಾನ ಪಡೆದಿದೆ. ಸ್ಥಾಪನೆಯಾಗಿ ಏಳು ವರ್ಷಗಳಲ್ಲಿಯೇ ಈ ಸಂಸ್ಥೆ ದೇಶ್ಯಾದ್ಯಂತ ತನ್ನ ಕೀರ್ತಿ ಮೆರೆದಂತಾಗಿದೆ. ದಕ್ಷಿಣ ಭಾರತದ ಎರಡು ಕಾಲೇಜುಗಳು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಈ ಕಾಲೇಜ್ನಲ್ಲಿ ಮೂಲ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇಂಡಿಯಾ ಟುಡೆ ಗ್ರೂಪ್ ಪ್ರತಿವರ್ಷ ಅತ್ಯುತ್ತಮ ವೈದ್ಯಕೀಯ ಕಾಲೇಜು ಜೊತೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳನ್ನೂ ಪ್ರತ್ಯೇಕ ಸಮೀಕ್ಷೆ ನಡೆಸಿ ಅತ್ಯುತ್ತಮ 10 ಕಾಲೇಜುಗಳನ್ನು ಆಯ್ಕೆ ಮಾಡುತ್ತದೆ. ಕಾಲೇಜು ಆಯ್ಕೆ ಪ್ರಕ್ರಿಯೆ ವೇಳೆ ಕಾಲೇಜು ಪ್ರತಿಷ್ಠೆ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲ ಸೌಲಭ್ಯಗಳನ್ನು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಕಾಳಜಿ, ಮಾರ್ಗದರ್ಶನ ಹೇಗೆ ದೊರೆಯುತ್ತದೆ? ವಿದ್ಯಾರ್ಥಿಗಳ ಹಾಜರಾತಿ, ಕಾಲೇಜು ವಾತಾವರಣ... ಹೀಗೆ ಪ್ರತಿಯೊಂದೂ ವಿಷಯಗಳ ಕುರಿತು ಪರಿಶೀಲಿಸಲಾಗುತ್ತದೆ. ಈ ಬಾರಿಯ ಇಂಡಿಯಾ ಟುಡೆ ನಡೆಸಿರುವ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಟಾಪ್ ಟೆನ್ ಪಟ್ಟಿಯಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು 9ನೇ ಕ್ರಮಾಂಕದಲ್ಲಿದೆ.
ಟಾಪ್ ಟೆನ್ ನಲ್ಲಿ ಬಿಮ್ಸ್: ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿ ಪದವಿ ಪಡೆದ ನಂತರ ಅವಶ್ಯಕ ಪ್ರಶಿಕ್ಷಣವನ್ನು ನೀಡಲಾಗುತ್ತದೆ. ವರ್ಷಪೂರ್ತಿ ವಿಚಾರಸಂಕಿರಣ, ಉಪನ್ಯಾಸ, ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತದೆ. ನುರಿತ ಉಪನ್ಯಾಸಕ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪಾಠ, ಮಾರ್ಗದರ್ಶನ ನೀಡುತ್ತಾರೆ. ಈ ಸಾಧನೆ, ಗೌರವದ ಶ್ರೇಯಸ್ಸು ಸಿಬ್ಬಂದಿಗೆ ಸಲ್ಲುತ್ತದೆ. ಕಾಲೇಜು ವಿದ್ಯಾರ್ಥಿಗಳನ್ನು ಪ್ರಶಿಕ್ಷಣಕ್ಕೆ ಹೊರಗಡೆ ಕಳುಹಿಸಲಾಗುತ್ತದೆ. ಪಠ್ಯಪುಸ್ತಕದ ಜ್ಞಾನದ ಜತೆಗೆ ಪ್ರಾತ್ಯಕ್ಷಿತೆ ತರಬೇತಿ ನೀಡಲಾಗುತ್ತದೆ.
ಟಾಪ್ ಟೆನ್ ಮೆಡಿಕಲ್ ಕಾಲೇಜುಗಳು
1. ದಿಲ್ಲಿಯ ವರ್ಧಮಾನ ಮಹಾವೀರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ
2. ಜೈಪುರದ ಮಹಾತ್ಮಗಾಂಧಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
3. ಲಖನೌದ ಇರಾ ಮೆಡಿಕಲ್ ಕಾಲೇಜು
4. ಡೆಹ್ರಾಡೂನ್ನ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
5. ರಾಜಕೋಟದ ಪಂಡಿತ ದೀನದಯಾಳ ಉಪಾಧ್ಯಾಯ ಮೆಡಿಕಲ್ ಕಾಲೇಜು
6. ವೆಲ್ಲೂರಿನ ಸರ್ಕಾರಿ ವೆಲ್ಲೂರ ಮೆಡಿಕಲ್ ಕಾಲೇಜು
7. ಗಾಜಿಯಾಬಾದ್ನ ಸಂತೋಷ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ
8. ಸೂರತ್ನ ಸೂರತ್ ಮುನ್ಸಿಪಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್
9. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ
10. ಅಮೃತಸರದ ಶ್ರೀ ಗುರು ರಾಮದಾಸ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್
- ಶ್ರೀಶೈಲ ಮಠದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

