ಸಿರಿಯಾ ದಾಳಿಯಿಂದ ವಿಶ್ವ ಅರ್ಥ ವ್ಯವಸ್ಥೆಗೆ ಹಾನಿ: ಚೀನಾ
ಸೇಂಟ್ ಪೀಟರ್ಸ್ಬರ್ಗ್(ರಷ್ಯಾ): ಸಿರಿಯಾದ ಮೇಲಿನ ಉದ್ದೇಶಿತ ಕ್ಷಿಪಣಿ ದಾಳಿಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರವನ್ನು ಜಿ20 ಶೃಂಗದಲ್ಲೂ ಗಟ್ಟಿದನಿಯಲ್ಲಿ ಪ್ರಸ್ತಾಪಿಸುವ ಸುಳಿವು ನೀಡಿದೆ.
ಸಿರಿಯಾ ಮೇಲಿನ ಯುದ್ಧ ತೈಲ ದರ ಏರಿಕೆಗೆ ಕಾರಣವಾಗಲಿದೆ. ಇದು ವಿಶ್ವ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಚೀನಾ ಎಚ್ಚರಿಸಿದೆ. ಸಿರಿಯಾ ಯುದ್ಧಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜತೆಗೆ ಮಾತುಕತೆ ನಡೆಸುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಯತ್ನಕ್ಕೆ ಬೆಂಬಲ ಸೂಚಿಸುವುದಾಗಿ ಜಿ 20 ಶೃಂಗ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಚೀನಾ ಉಪಪ್ರಧಾನಿ ಜುಗುವಾಂಗ್ಯೋ ಹೇಳಿದ್ದಾರೆ.
ಇದೇ ವೇಳೆ, ರಾಸಾಯನಿಕ ಅಸ್ತ್ರವನ್ನು ಅವಲಂಬಿಸಿದವರು ರಾಸಾಯನಿಕ ದಾಳಿಯ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಬೀಜಿಂಗ್ನಲ್ಲಿ ಹೇಳಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹಾಂಗ್ಲೀ, ಏಕಪಕ್ಷೀಯ ಸೈನಿಕ ಕಾರ್ಯಾಚರಣೆಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಸಂಘರ್ಷವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಎಂದಿದ್ದಾರೆ.
ರಷ್ಯಾದಂತೆ ಸಿರಿಯಾದ ಪ್ರಮುಖ ಶಸ್ತ್ರಾಸ್ತ್ರ ಸರಬರಾಜುದಾರನಾದ ಚೀನಾ ಕೂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರ ಹೊಂದಿದೆ.
ಅಜೆಂಡಾದಲ್ಲಿಲ್ಲ: ಸಿರಿಯಾ ಚರ್ಚೆ ಜಿ20 ಸಮ್ಮೇಳನದ ಅಜೆಂಡಾದಲ್ಲಿಲ್ಲ. ಆದರೂ ಈ ವಿಚಾರ ಚರ್ಚೆಗೆ ಬರಲಿದೆ ಎಂದು ಫ್ರಾನ್ಸ್ನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಯಸ್ ಮಾಹಿತಿ ನೀಡಿದ್ದಾರೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಫ್ರಾನ್ಸ್ ಸರ್ಕಾರ ಈಗಾಗಲೇ ಬೆಂಬಲಿಸಿದೆ. ಸಿರಿಯಾ ವಿಚಾರಕ್ಕೆ ಸಂಬಂಧಿಸಿ ಜಿ20 ಪ್ರಮುಖ ದೇಶಗಳ ವಿದೇಶಾಂಗ ಸಚಿವರೂ ಒಂದೆಡೆ ಸೇರಿ ಚರ್ಚೆ ನಡೆಸಲಿದ್ದಾರೆ. ಸಿರಿಯಾಗೆ ಸಂಬಂಧಿಸಿದ ಜಿ20ಯ ನಿಲುವಿಗೆ ಬದ್ಧತೆ ಪ್ರದರ್ಶಿಸುವುದು ಅಮೆರಿಕಕ್ಕೆ ಅನಿವಾರ್ಯವೇನಲ್ಲ. ಆದರೆ, ಸಿರಿಯಾ ಯುದ್ಧದ ವಿರುದ್ಧ ಒಮ್ಮತ ಮೂಡಿಸಲು ಪ್ರಯತ್ನಿಸುವುದು ಪುಟಿನ್ ಉದ್ದೇಶ. ಸಿರಿಯಾಗೆ ಸಂಬಂಧಿಸಿ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಸುಳ್ಳು ಹೇಳುತ್ತಿದ್ದಾರೆ. ಬಂಡುಕೋರರ ಜತೆಗೆ ಅಲ್ಖೈದಾ ಸಂಪರ್ಕ ಇರುವುದನ್ನು ತಳ್ಳಿಹಾಕುತ್ತಿದ್ದಾರೆ ಎಂದು ಪುಟಿನ್ ಈಗಾಗಲೇ ಆರೋಪಿಸಿದ್ದಾರೆ.
ಸಾಮರಸ್ಯ ನಷ್ಟ
2009ರ ಹಣಕಾಸು ಬಿಕ್ಕಟ್ಟಿನ ವೇಳೆ ಅಭಿವೃದ್ಥಿ ಹೊಂದುತ್ತಿರುವ ಮತ್ತು ಹೊಂದಿದ ದೇಶಗಳ ನಡುವೆ ಸಹಭಾಗಿತ್ವ ಕಾಯ್ದುಕೊಳ್ಳಲು ಜಿ20 ಯಶಸ್ವಿಯಾಗಿತ್ತು. ಬಹುರಾಷ್ಟ್ರೀಯ ಕಂಪನಿಗಳ ತೆರಿಗೆ ವಂಚನೆಗೆ ಸಂಬಂಧಿದ್ದು ಸೇರಿ ಕೆಲ ಒಪ್ಪಂದಗಳಿಗೆ ವಿವಿಧ ದೇಶಗಳು ಸಹಿಹಾಕುವ ಸಾಧ್ಯತೆ ಇದೆ.
ಟಿ ವಿಶ್ವ ಮಾರುಕಟ್ಟೆ ಕುಸಿತ ತಡೆಯಲು 630 ಲಕ್ಷ ಕೋಟಿ ಡಾಲರ್ ಮೊತ್ತದ ವಿಶ್ವ ಮಾರುಕಟ್ಟೆಯ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸುವ ಪ್ರಸ್ತಾಪವನ್ನು ಜಿ20 ನಾಯಕರ ಮುಂದಿಡಲಾಗುವುದು.
ಅಮೆರಿಕವನ್ನು ಎಚ್ಚರಿಸಿದ ಚೀನಾ, ರಷ್ಯಾ
ಅಮೆರಿಕದ ಕೇಂದ್ರ ಬ್ಯಾಂಕ್ನ ಬಾಂಡ್ ಖರೀದಿ ಯೋಜನೆಯು ವಿಶ್ವ ಆರ್ಥಿಕ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಷ್ಯಾ ಹಾಗೂ ಚೀನಾ ಎಚ್ಚರಿಸಿದೆ. ಅಮೆರಿಕದ ಈ ನೀತಿಯು ವಿಶ್ವ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಹಾಗೂ ವಿಶ್ವ ಹಣಕಾಸು ಮಾರುಕಟ್ಟೆಯ ಸ್ಥಿರತೆ ಮತ್ತು ವಿಶ್ವ ಆರ್ಥಿಕತೆಯ ನಿಧಾನಗತಿಯ ಚೇತರಿಕೆ ಕುರಿತು ಗಮನಹರಿಸುವಂತೆ ಶೃಂಗಕ್ಕೂ ಮುನ್ನ ಮಾತನಾಡಿದ ಚೀನಾದ ಉಪ ವಿತ್ತ ಸಚಿವ ಝು ಗುವಾಂಗ್ಯೋ ತಿಳಿಸಿದ್ದಾರೆ.
ಅಂಗಳದಲ್ಲಿ ನಿಂತು ಸ್ವಾಗತಿಸಿದ ಪುಟಿನ್
ಜಿ- 20 ಶೃಂಗಸಭೆ ನಡೆಯುವ ಕಾನ್ಸ್ಟಂಟಿನೋವಸ್ಕಿ ಅರಮನೆಯ ಅಂಗಳದಲ್ಲಿ ನಿಂತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅತಿಥಿ ಸದಸ್ಯ ದೇಶಗಳ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಎಲ್ಲ ದೇಶಗಳ ನಾಯಕರು ಬರುತ್ತಿದ್ದಂತೆ ಪುಟಿನ್ ಕಾರಿನ ಬಾಗಿಲ ಬಳಿ ಹೋಗಿ ತಾವೊಬ್ಬರೇ ಸ್ವಾಗತಿಸಿದರು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಗಮಿಸಿದಾಗ ಪುಟಿನ್ ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಒಬಾಮ ಅವರು ಆಗಮಿಸುತ್ತಿದ್ದಂತೆ ಪುಟಿನ್ ಎಲ್ಲರಂತೆ ತೀರಾ ಸಹಜವಾಗಿ ಬರಮಾಡಿಕೊಂಡರು. ಉಳಿದವರಿಗೆ ನೀಡಿದ ಸ್ವಾಗತನ್ನೇ ಒಬಾಮ ಅವರಿಗೂ ನೀಡಿದರು. ಅವರಿಬ್ಬರಲ್ಲಿ ಔಪಚಾರಿಕತೆ ಮೀರಿದ ಆತ್ಮೀಯತೆ ಇರಲಿಲ್ಲ.
ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರ
ಜಿ-20 ಶೃಂಗಸಭೆಯಲ್ಲಿ ಪ್ರತಿನಿಧಿಗಳು, ಸದಸ್ಯ ದೇಶಗಳ ಅಧಿಕಾರಿಗಳನ್ನೂ ಮೀರಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದವರೆಂದರೆ ಪತ್ರಕರ್ತರು. ಶೃಂಗಸಭೆಯಲ್ಲಿ ಭಾಗವಹಿಸಿದ ಇಪ್ಪತ್ತು ಸದಸ್ಯ ದೇಶಗಳಲ್ಲದೇ, ಅಂತಾರಾಷ್ಟ್ರೀಯ ಪತ್ರಕರ್ತರೂ ಇದರಲ್ಲಿ ಅತೀವ ಆಸಕ್ತಿವಹಿಸಿ ಪಾಲ್ಗೊಂಡಿರುವುದು ಗಮನಾರ್ಹ. ಈ ಶೃಂಗದಲ್ಲಿ ಸುಮಾರು ಮೂರು ಸಾವಿರ ಪತ್ರಕರ್ತರು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರ ಇಪ್ಪತ್ನಾಲ್ಕು ಗಂಟೆ ತೀವ್ರ ಚಟುವಟಿಕೆಯಿಂದ ಕೂಡಿದೆ. ಜಗತ್ತಿನ ಪ್ರಮುಖ ಟಿವಿ ಚಾನೆಲ್ಗಳ ಪ್ರತಿನಿಧಿಗಳೂ ಪಾಲ್ಗೊಂಡಿರುವುದರಿಂದ ಮಾಧ್ಯಮ ಕೇಂದ್ರ ಅಕ್ಷರಶಃ ಟಿವಿ ಸ್ಟುಡಿಯೋದಂತೆ ಕಂಗೊಳಿಸುತ್ತಿದೆ.
ಈ ವರ್ಷದ ಅಜೆಂಡಾ
ಜಿ-20 ಶೃಂಗಸಭೆಯಲ್ಲಿ ನಾವು ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದು ಅವು ಇಂತಿವೆ.
1. ಅಭಿವೃದ್ಧಿ ಮತ್ತು ಜಾಗತಿಕ ಅರ್ಥ ವ್ಯವಸ್ಥೆ
2. ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆ
3. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹೂಡಿಕೆ
4. ಅಭಿವೃದ್ಧಿ ಮತ್ತು ವ್ಯಾಪಾರ
ಈ ನಾಲ್ಕು ಪ್ರಧಾನ ಅಂಶಗಳ ಅಡಿಯಲ್ಲಿ ಹಲವಾರು ಉಪ ಅಂಶಗಳಿದ್ದು ಇವುಗಳ ಬಗ್ಗೆ ಚರ್ಚೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

