ಪ್ರಧಾನ ಸುದ್ದಿ

ಗಣಿ ವರದಿ ರೀಓಪನ್

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ. 6-
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರಾಗಿದ್ದಾಗ ನ್ಯಾ. ಸಂತೋಷ್ ಹೆಗ್ಡೆ ಅವರು ಕೊಟ್ಟಿರುವ ವರದಿಗೆ ಮರುಜೀವ ನೀಡಲು ಸರ್ಕಾರ ನಿರ್ಧರಿಸಿದೆ.
ವರದಿಯನ್ನು ಮರು ಪರಿಶೀಲಿಸುವಂತೆ ಹಿಂದಿನ ಬಿಜೆಪಿ ಸರ್ಕಾರ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿತ್ತು. ಆ ಆರ್ಜಿಯನ್ನು ವಾಪಸ್ ಪಡೆದುಕೊಂಡು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ವರದಿ ಅನ್ವಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಮೂಲಕ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆ ವೇಳೆ ನೀಡಿದ್ದ ಭರವಸೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.
ನ್ಯಾ. ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಕುರಿತಂತೆ 2 ವರದಿ ನೀಡಿದ್ದರು. ವರದಿ ಮರು ವಿಮರ್ಶೆ ಮಾಡುವಂತೆ ಮತ್ತು ಸ್ಪಷ್ಟೀಕರಣ ಬಯಸಿ ಹಿಂದಿನ ಸರ್ಕಾರದ ಸಚಿವ ಸಂಪುಟ ನಿರ್ಧರಿಸಿತ್ತು. ಜೊತೆಗೆ ವರದಿಯನ್ನು ಲೋಕಾಯುಕ್ತರಿಗೆ ಹಿಂದಿರುಗಿಸಿತ್ತು. ಸ್ಪಷ್ಟೀಕರಣ ಕೇಳಿದ್ದನ್ನು ವಾಪಸ್ ಪಡೆಯಲು ರಾಜ್ಯ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದ್ದು, ವಾರದಲ್ಲಿ ಈ ಪ್ರಕ್ರಿಯೆ ಮುಗಿಯುವ ಲಕ್ಷಣವಿದೆ.
ಅಕ್ರಮ ಗಣಿಗಾರಿಕೆ ಕುರಿತಂತೆ ನ್ಯಾ. ಸಂತೋಷ್ ಹೆಗ್ಡೆ ವರದಿ ಜಾರಿ ಹಾಗೂ ಗಣಿ ಅಕ್ರಮಗಳ ವಿಚಾರಣೆಗೆ  ಪ್ರತ್ಯೇಕ ನ್ಯಾಯಾಲಯ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ದೀರ್ಘ ಚರ್ಚೆಯಾಗಿದೆ. ಎರಡೂ ವರದಿಗಳ ಜಾರಿಗೆ ಸಹಮತ ವ್ಯಕ್ತವಾಗಿದ್ದು, ಈ ಬಗ್ಗೆ ಉಂಟಾಗುವ ಕಾನೂನು ತೊಡಕುಗಳು ಸೇರಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ, ಮುಖ್ಯ ಕಾರ್ಯದರ್ಶಿ ಹಾಗೂ ಅಡ್ವೊಕೇಟ್ ಜನರಲ್‌ಗೆ ವಹಿಸಲಾಗಿದೆ.
ಸ್ಪಷ್ಟೀಕರಣ ಕೇಳುವ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಈ ಮೂವರು ಚರ್ಚೆ ನಡೆಸಿ ನಿರ್ಧಾರ ಮಾಡಲಿದ್ದಾರೆ. ಈ ನಿರ್ಧಾರದಂತೆ ಸ್ಪಷ್ಟೀಕರಣದ ವಿಷಯ ಲೋಕಾಯುಕ್ತರಿಂದ ವಾಪಸ್ ಆದರೆ, ಅಕ್ರಮ ಗಣಿಗಾರಿಕೆ ಕುರಿತಂತೆ ನ್ಯಾ. ಹೆಗ್ಡೆ ನೀಡಿರುವ 2 ವರದಿಗಳು ಯಥಾವತ್ತಾಗಿ ಜಾರಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.