ಭೂಮಾಪನ ಇಲಾಖೆ ಭ್ರಷ್ಟಾಚಾರಕ್ಕೆ ಅಳತೆಯೇ ಇಲ್ಲ
ಕ.ಪ್ರ.ವಾರ್ತೆ ಬೆಂಗಳೂರು ಸೆ. 6
ಕಂದಾಯ ಇಲಾಖೆ ವತಿಯಿಂದ ಭೂಮಾಪನ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗಿರುವ ನಿಯಮಾವಳಿಗಳು ಭೂಮಾಪಕರನ್ನು ಭ್ರಷ್ಟಾಚಾರಕ್ಕೆ ತೊಡಗಲು ಉತ್ತೇಜಿಸುತ್ತಿವೆ...
ಹೌದು. ಭೂಮಾಪನ ಇಲಾಖೆಯಲ್ಲಿ ಜಾರಿ ಮಾಡಿರುವ ಕಾನೂನು ನಿಯಮಾವಳಿಗಳಲ್ಲಿ ಪರವಾನಗಿ ಭೂಮಾಪಕರ ಹಿತದೃಷ್ಟಿ ಕಡೆಗಣಿಸಾಗಿದೆ. ಈ ಪ್ರಮಾದದಿಂದ ಜಠಿಲ ಸಮಸ್ಯೆಗಳು ಉಲ್ಬಣಗೊಂಡು ದಿನದಿಂದ ದಿನಕ್ಕೆ ನಾನಾ ರೂಪ ಪಡೆದುಕೊಳ್ಳುತ್ತಿವೆ. ಇಲಾಖೆಯ ಈ ಪ್ರಮಾದದಿಂದ ಪರವಾನಗಿ ಭೂಮಾಪಕರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಪರೋಕ್ಷವಾಗಿ ಪ್ರೋತ್ಸಾಹ ನೀಡಿದೆ.
ಭೂಮಾಪನ ಇಲಾಖೆಯ ನಿಯಮಾವಳಿಗಳ ಬಗ್ಗೆ ಹಾಗೂ ಭ್ರಷ್ಟಾಚಾರಕ್ಕೆ ಅನುವಾಗುವ ಬಗ್ಗೆ ಸಮಗ್ರವಾಗಿ ದಾಖಲೆಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಶ್ರೀನಿವಾಸಪ್ರಸಾದ್, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೂ ಪತ್ರ ರವಾನೆಯಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಕಳಕಳಿಯ ಮನವಿ ಮಾಡಿಕೊಂಡಿದೆ. ಆದರೆ, ಭ್ರಷ್ಟಾಚಾರದಲ್ಲಿರುವ ಅಧಿಕಾರಿಗಳು ನಿಯಮಾವಳಿ ಬದಲಿಸಲು ತಡೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಬಹಿರಂಗವಾಗಿ ಆರೋಪಿಸಿದೆ.
ಕಂದಾಯ ಇಲಾಖೆ ಪರವಾನಗಿ ಭೂಮಾಪಕರ ಯೋಜನೆಯನ್ನು ಭೂಮಾಪನ ಇಲಾಖೆಯಲ್ಲಿ ಅನುಷ್ಠಾನಗೊಳಿಸಿದೆ. ಆದರೆ ಭೂಮಾಪನ ಇಲಾಖೆ ರೂಪಿಸಿರುವ ನಿಯಮಾವಳಿಗಳಲ್ಲಿ ಪರವಾನಗಿ ಭೂಮಾಪಕರ ಉಲ್ಲೇಖವೇ ಇಲ್ಲ. ಅವರ ಹಿತದೃಷ್ಟಿ ಕಾಯುವ ಒಂದು ಅಕ್ಷರವೂ ಇಲ್ಲ. ಅವರನ್ನು ಈಗಿರುವಂತೆಯೇ ಮುಂದುವರಿಸಿದರೆ ಜೀವನೋಪಾಯಕ್ಕಾಗಿ ಅವರು ಭೂಮಾಲೀಕರಿಂದ ಅನಧಿಕೃತವಾಗಿ ಹಣ ಪಡೆದುಕೊಳ್ಳಲೇ ಬೇಕಾಗುತ್ತದೆ. ಇದು ಭ್ರಷ್ಟಾಚಾರವಲ್ಲದೇ ಮತ್ತೇನೂ ಅಲ್ಲ.
ಸಿಕ್ಕಿದ್ದು ಆಶ್ವಾಸನೆ: ಪರವಾನಗಿ ಭೂಮಾಪಕರು 12 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಬಾರಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನೀಡಿದ ಭರವಸೆಯ ಮೇಲೆ ಆಶ್ವಾಸನೆ ಇರಿಸಿಕೊಂಡು ಮುಷ್ಕರ ನಿಲ್ಲಿಸಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಒಂದು ಭರವಸೆಯೂ ಈಡೇರಿಲ್ಲ. ಹೀಗಾಗಿ ಈ ಬಾರಿ ಅವರು ಆರಂಭಿಸುವ ಮುಷ್ಕರ 59 ದಿನ ಪೂರೈಸಿದೆ.
ಇವರಿಗೆ ಆಗಿರುವ ಅನ್ಯಾಯವನ್ನು ಸರ್ಕಾರಕ್ಕೆ ವಿವರಿಸಿ ಮಾನವೀಯ ಮೌಲ್ಯಗಳ ಮೇಲೆ ಕಾಯಂ ಮಾಡಲು ಅಥವಾ ನೇಮಕದಲ್ಲಿ ಪರವಾನಗಿ ಭೂಮಾಪಕರಿಗೆ ಪ್ರಥಮ ಆದ್ಯತೆ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮರು ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜು ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಇನ್ನೂ ಕಾರ್ಯರೂಪದಲ್ಲಿ ಕಾಣಸಿಕ್ಕಿಲ್ಲ.
ರಾಜ್ಯಾದ್ಯಂತ 2000ಕ್ಕೂ ಅಧಿಕ ಪರವಾನಗಿ ಭೂಮಾಪಕರು ಇಲಾಖೆಯ ಶೋಷಣೆಯಲ್ಲೇ ದುಡಿಯುತ್ತಿದ್ದಾರೆ. ಇವರ ಮಾನವ ಸಂಪನ್ಮೂಲ ಶಕ್ತಿಯನ್ನು ಬಳಸಿಕೊಂಡು ಸರ್ಕಾರ ಅವರಿಗೆ ವೇತನ ನೀಡದೆ ಅನ್ಯಾಯ ಮಾಡುತ್ತಿದೆ. ಗುಲಾಮರಂತೆ ನಮ್ಮನ್ನು ದುಡಿಸಿಕೊಳ್ಳುತ್ತಿದ್ದು, ಆಗಾಗ್ಗೆ ನಮ್ಮ ಮೇಲೆ ಆರೋಪ ಹೊರಿಸಲಾಗುತ್ತದೆ. ನಮ್ಮ ಕೆಲಸವನ್ನು ಕಾಯಂ ಮಾಡುವ ಮೂಲಕ ನಮ್ಮ ಹಕ್ಕನ್ನು ನೀಡಬೇಕು ಎಂದು ಸಂಘದ ವಿರೂಪಾಕ್ಷಪ್ಪ, ಶಿವಕುಮಾರ್, ರವಿಕುಮಾರ್. ಕೆ.ಬಿ. ಲೋಕೇಶ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಯವರು ಇನ್ನಾದರೂ ಇತ್ತ ಗಮನಹರಿಸಬೇಕು. ಸಬೂಬಿಗೆ ಮುಷ್ಕರ ನಿಲ್ಲಿಸಿ, ಭೂಮಾಲೀಕರಿಂದ ಹಣ ಪಡೆದು ಪರವಾನಗಿ ಭೂಮಾಪಕರು ಭ್ರಷ್ಟಾಚಾರಿಗಳಾಗದಂತೆ ನೋಡಿಕೊಳ್ಳಬೇಕಿದೆ.
...ಇಷ್ಟು ಹಣ ಎಂದು ನಿಗದಿ ಮಾಡಿಬಿಡಿ!
ಭೂಮಾಪಕರ ನೇರ ನೇಮಕಕ್ಕೆ ನಾಲ್ಕು ಲಕ್ಷ, ತಿರಸ್ಕೃತ ಅಭ್ಯರ್ಥಿ ಮರು ಆಯ್ಕೆಗೆ ಎರಡು ಲಕ್ಷ, ಪಿಯುಸಿ ಅರ್ಹತೆಯ ಅಭ್ಯರ್ಥಿಗೆ ಒಂದೂವರೆ ಲಕ್ಷ, 5 ವರ್ಷದ ಸೇವೆ ಸಲ್ಲಿಸಿದ ಪರವಾನಗಿ ಭೂಮಾಪಕನಿಗೆ ಒಂದು ಲಕ್ಷ, 12 ವರ್ಷ ಸೇವೆ ಸಲ್ಲಿಸಿದ್ದರೆ 50 ಸಾವಿರ, ವಯೋವುತಿ ಮೀರಿದ್ದರೆ ಒಂದು ಲಕ್ಷ...
ಹೀಗೆ ಹಣ ನಿಗದಿ ಮಾಡಿಬಿಡಿ. ಇಷ್ಟು ಹಣ ನೀಡಿದವರಿಗೆ ಹುದ್ದೆ ಸಿಗುತ್ತದೆ ಎಂಬ ಖಾತರಿ ಸಿಕ್ಕಂತಾಗುತ್ತದೆ. ಉಳಿದವರು ಸುಮ್ಮನಿರುತ್ತಾರೆ. ಹಿಂಬದಿಯಿಂದ ಹಣ ಪಡೆದು ಹುದ್ದೆ ನೀಡುವ ಬದಲು ಇಂತಿಷ್ಟು ಎಂದು ನಿಗದಿ ಮಾಡಿದರೆ ಭ್ರಷ್ಟಾಚಾರವಾದರೂ ಕಡಿಮೆ ಆಗುತ್ತದೆ. ಹೀಗೆಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ ಪರವಾನಗಿ ಭೂಮಾಪಕರ ಬಗೆಗಿನ ತಾತ್ಸಾರಕ್ಕೆ ನೊಂದು ಹೀಗೊಂದು ಸಲಹೆಯನ್ನು ಕಂದಾಯ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲಾಗಿದೆ.
ಭೂಮಾಪಕರ ನೇಮಕಕ್ಕಾಗಿ ಕಾನೂನುಬಾಹಿರವಾಗಿ ನಿಯಮಾವಳಿಗಳನ್ನು ಬದಲು ಮಾಡಿದಲ್ಲಿ ನಡೆಯುವ ಭೂಮಾಪಕರ ನೇಮಕದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದರೂ 1704 ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಇದಲ್ಲದೆ, 149 ಜನರಿಗೆ ನ್ಯಾಯ ಕಲ್ಪಿಸಲು ಕಂದಾಯ ಇಲಾಖೆ ವಿಶೇಷ ರಾಜ್ಯಪತ್ರದಲ್ಲಿ ನಿಯಮಾವಳಿಗಳಿಗೆ ಬದಲಾವಣೆ ತಂದಿದೆ. ಇವರೆಲ್ಲರಿಗೆ ಹುದ್ದೆ ಸಿಗಬೇಕೆಂದರೆ ಲಕ್ಷಾಂತರ ಹಣ ನೀಡಲೇಬೇಕು. ಆದ್ದರಿಂದ, ಈ ಹುದ್ದೆಗಳಿಗೆ ನೇರವಾಗಿ ಇಷ್ಟು ಹಣ ಎಂದು ನಿಗದಿ ಮಾಡಿಬಿಡಿ, ಹಣ ಇದ್ದವರು ಅರ್ಜಿ ಹಾಕುತ್ತಾರೆ. ಇಲ್ಲದವರಿಗೆ ಅರ್ಜಿ ಮೊತ್ತ 400 ಉಳಿಯುತ್ತದೆ ಎಂದು ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ವಿರೂಪಾಕ್ಷ ಕಟು ಶಬ್ದಗಳಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.
- ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

