ಮತ್ತೆ ಮಳೆ ಅಬ್ಬರ; ನಾಲ್ವರು ಬಲಿ
ಬೆಂಗಳೂರು: ರಾಜ್ಯದ ವಿವಿಧೆಡೆ ಮತ್ತೆ ಮಳೆ ಅಬ್ಬರ ಜೋರಾಗಿದ್ದು ದಾವಣಗೆರೆಯಲ್ಲಿ ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಬಿದ್ದು ಅಬಕಾರಿ ಅಧಿಕಾರಿ ಹಾಗೂ ಅಥಣಿ ತಾಲೂಕಿನ ರಾಮತೀರ್ಥದಲ್ಲಿ ಸಿಡಿಲಿಗೆ ಇಬ್ಬರು, ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದಲ್ಲಿ ಒಬ್ಬ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, 100ಕ್ಕೂ ಮನೆಗಳು ಕುಸಿದು ಬಿದ್ದಿವೆ.
ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ರಾಮತೀರ್ಥ ಕ್ರಾಸ್ ಹತ್ತಿರ ಸಿಡಿಲು ಬಡಿದು ರಾಮತೀರ್ಥ ಗ್ರಾಮದ ಅನಿಲ ಲಕ್ಷ್ಮಣ ಬಾಗೆನ್ನವರ (19) ಮತ್ತು ರಾಮು ಪಾರೀಸ್ ಅಲಗೂರ (50) ಮೃತಪಟ್ಟಿದ್ದಾರೆ. ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಇದೇ ವೇಳೆ ಗುಲ್ಬರ್ಗ ಜಿಲ್ಲೆ ಚಿತ್ತಾಪರದ ನಾಗಾವಿ ದೇವಸ್ಥಾನ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮರೆಪ್ಪ ಭೂಮಿ (31) ಎಂಬಾತನಿಗೆ ಮಂಗಳವಾರ ಸಂಜೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಾವಣಗೆರೆ ಸರಸ್ವತಿ ಬಡಾವಣೆ ನಿವಾಸಿ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಅಬಕಾರಿ ಮತ್ತು ಲಾಟರಿ ದಳದ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪ್ಪ ಎಂಬವರು ಸೋಮವಾರ ರಾತ್ರಿ ಗಣೇಶ ಪ್ರತಿಷ್ಠಾಪನೆ ನೋಡಿ ವಾಪಸ್ ಬರುತ್ತಿದ್ದಾಗ ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದು, ಬಸ್ ನಿಲ್ದಾಣ ಬಳಿ ಶವ ಪತ್ತೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 37, ಹರಿಹರದಲ್ಲಿ 1, ಹರಪನಹಳ್ಳಿಯಲ್ಲಿ 6 ಸೇರಿದಂತೆ ಒಟ್ಟು 44 ಮನೆಗಳಿಗೆ ಹಾನಿಯಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹೇಮವಾಡಗಿ, ನಿಡಸನೂರು, ಪಾಲ್ತಿ, ಕೊಣ್ಣೂರ, ಕರಡಿ, ಮಲಗಿಹಾಳ ಸೇರಿದಂತೆ ಸುಮಾರು 12 ಗ್ರಾಮಗಳ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಕುಸಿದು ಬಿದ್ದಿವೆ. ಹೇಮವಾಡಗಿ, ಕರಡಿ ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಕುಷ್ಟಗಿಯಲ್ಲಿ 3 ಕುರಿಗಳು ಮೃತಪಟ್ಟಿವೆ. ಧಾರವಾಡ, ಹುಬ್ಬಳ್ಳಿ, ಹಾವೇರಿ, ಬಳ್ಳಾರಿಯಲ್ಲೂ ಭಾರಿ ಮಳೆಯಾಗಿದೆ.
ಮನೆಗಳಿಗೆ ನುಗ್ಗಿದ ನೀರು: ರಾಯಚೂರು, ಯಾದಗಿರಿ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಯಾದಗಿರಿ ನಗರ ಹಾಗೂ ಹುಣಸಗಿ ಸುತ್ತಮುತ್ತ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. 5 ಮನೆಗಳು ಕುಸಿದಿದ್ದು ನಾಲ್ವರು ಗಾಯಗೊಂಡಿದ್ದಾರೆ. ಹುಣಸಗಿಯಲ್ಲಿ ಒಂದೇ ದಿನ 128 ಮಿ.ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

