ಪ್ರಧಾನ ಸುದ್ದಿ

ಒಂಟಿ ಸಲಗ ದಾಳಿಗೆ ವ್ಯಕ್ತಿ ಬಲಿ

Published On :

ಕ.ಪ್ರ.ವಾರ್ತೆ, ರಾಮನಗರ, ಸೆ. 11-
ತಾವರೆಕೆರೆಯ ದೊಡ್ಡಮಾರನಹಳ್ಳಿಯಲ್ಲಿ ಆನೆ ದಾಳಿಗೆ ಬಾಲಕ ಬಲಿಯಾದ ಘಟನೆ ಮಾಸುವ ಮುನ್ನವೇ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಹಳ್ಳಿಗಳಲ್ಲಿ ಬುಧವಾರ ಪ್ರತ್ಯಕ್ಷವಾದ ಒಂಟಿ ಸಲಗ ಒಬ್ಬ ವ್ಯಕ್ತಿ ಮತ್ತು ಒಂದು ಹಸುವನ್ನು ಬಲಿ ತೆಗೆದುಕೊಂಡಿದೆ.
ತಾಲೂಕಿನ ಜಂಗಮರಪಾಳ್ಯ ಗ್ರಾಮದ ವೆಂಕಟರಾಮಯ್ಯ (60) ಮೃತಪಟ್ಟವರು. ರಾಮನಹಳ್ಳಿಯ ಶಂಕರ ಎಂಬುವರಿಗೆ ಸೇರಿದ 30 ಸಾವಿರ ಬೆಲೆಯ ಹಸು ಮೃತಪಟ್ಟರೆ, ಆನೆ ದಾಳಿಗೆ ಬಲಿಯಾದ ಮತ್ತೆರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.
ರೈತರು ಮುಂಜಾನೆಯೇ ಜಾನುವಾರುಗಳನ್ನು ಬಯಲು ಪ್ರದೇಶದಲ್ಲಿ ಮೇಯಲು ಬಿಟ್ಟು, ರಾಗಿ ಹೊಲದಲ್ಲಿ ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದರು. ಒಂಟಿ ಸಲಗ ದಿಢೀರ್ ಪ್ರತ್ಯಕ್ಷಗೊಂಡಾಗ ಚೀರಾಡುತ್ತಾ ತಪ್ಪಿಸಿಕೊಳ್ಳಲು ಓಡಿದರು.
ವೃದ್ಧರಾಗಿದ್ದ ವೆಂಕಟರಾಮಯ್ಯ ಅವರನ್ನು ಬೆನ್ನಟ್ಟಿದ ಆನೆ ಸೊಂಡಿಲಿನಿಂದ ಮೇಲೆಸೆದು, ಕಾಲಿನಿಂದ ತುಳಿದಿದೆ. ಕಾಲು ಮುರಿತಕ್ಕೊಳಗಾಗಿ ತೀವ್ರ ಗಾಯಗೊಂಡ ಅವರನ್ನು ಕೆಂಗೇರಿಯ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಒಂಟಿ ಸಲಗ ಹಸುಗಳ ಮೇಲೂ ದಾಳಿ ನಡೆಸಿದ್ದು, ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಅವು ಚೇತರಿಸಿಕೊಳ್ಳುತ್ತಿವೆ ಎಂದು ಸ್ಥಳೀಯ ಪಶು ವೈದ್ಯಾಧಿಕಾರಿ ಡಾ.ನಾಕೇಶ್ ತಿಳಿಸಿದ್ದಾರೆ.

ಭೀತಿಯ ವಾತಾವರಣ: ಬಿಡದಿ ಸುತ್ತಮುತ್ತ ಗ್ರಾಮಗಳ ಸನಿಹದಲ್ಲೇ ಒಂಟಿ ಸಲಗ ಪ್ರತ್ಯಕ್ಷವಾಗಿರುವುದರಿಂದ ಆ ಭಾಗದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಭಯದಿಂದ ರೈತರು ಹೊಲ, ಗದ್ದೆಗಳ ಕಡೆ ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.
ಕಾಡಾನೆ ದಾಳಿಯ ಕಾರಣಕ್ಕೆ ಅನೇಕ ಗ್ರಾಮಸ್ಥರು ಬುಧವಾರದಂದು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲಿಲ್ಲ.
ಪುಂಡಾನೆ ಹಾವಳಿಯಿಂದ ಈ ಭಾಗದಲ್ಲಿ ಸಾಕಷ್ಟು ಆಸ್ತಿ ನಷ್ಟವಾಗಿದೆ. ತೆಂಗು, ಮಾವು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಆನೆಯ ತುಳಿತದಿಂದ ಕೆಲವು ರೈತರ ರಾಗಿ ಬೆಳೆಯೂ ನೆಲ ಕಚ್ಚಿದೆ.

5 ಲಕ್ಷ ಪರಿಹಾರ: ಆನೆ ದಾಳಿಗೆ ಬಲಿಯಾದ ವೆಂಕಟರಾಮಯ್ಯ ಅವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಲಾಗುವುದು. ಮೃತಪಟ್ಟ ಹಾಗೂ ಗಾಯಗೊಂಡ ಜಾನುವಾರುಗಳ ಮಾಲೀಕರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಾಣಾವತ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.