ಪ್ರಧಾನ ಸುದ್ದಿ

ಡಿಎಂಎಸ್ ಅಕ್ರಮ: ಕೇಂದ್ರಕ್ಕೆ ರು. 1232 ಕೋಟಿ ನಷ್ಟ

Published On :

ಬಳ್ಳಾರಿ: ಗಣಿಗಾರಿಕೆ ಅಂದರೆ ಹೀಗೇನೆ. ಅದರ ಕಬಂಧ ಬಾಹುಗಳು ಎಂಥವರನ್ನೂ ಏಮಾರಿಸುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ಕಂಪನಿಯ ಅಕ್ರಮವೇ ಸಾಕ್ಷಿ.
ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟ ಮಾಡಿದೆ ಈ ಖಾಸಗಿ ಗಣಿ ಕಂಪನಿ. ಕೇವಲ 50 ಎಕರೆ ಗಣಿ ಪ್ರದೇಶ ಹೊಂದಿರುವ ಡಿಎಂಎಸ್ ಕೇಂದ್ರ ಸರ್ಕಾರದ ಎನ್‌ಎಂಡಿಸಿ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿ, ಸುಮಾರು 1,232 ಕೋಟಿ ನಷ್ಟ ಉಂಟು ಮಾಡಿದೆ.  ಈ ಪ್ರಕರಣದಲ್ಲೂ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಭಾವ ಬೀರಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಸೆ.23, 2011ರಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ ಸಿಬಿಐನವರು ಡಿಎಂಎಸ್ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಸಿಬಿಐ ಇನ್‌ಸ್ಪೆಕ್ಟರ್ ಆನಂದಕೃಷ್ಣ ತನಿಖೆ ನಡೆಸಿದ್ದರು. ಕೇವಲ ಡಿಎಂಎಸ್ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ (ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ)ಗೆ ಸೇರಿದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ 62,73,657 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಿದೆ.


ಅಧಿಕಾರ ಚಲಾಯಿಸಿ ಜೈಲು ಪಾಲಾದರು
ನಿವೃತ್ತ ಐಎಎಸ್ ಅಧಿಕಾರಿ ವಿಶ್ವನಾಥ್ ಹಾಗೂ ನಿವೃತ್ತ ಅಧಿಕಾರಿ, ಕೆಎಟಿ ಹಾಲಿ ಸದಸ್ಯೆ ಶಮೀಂ ಬಾನು ಡಿಎಂಎಸ್ ಪರವಾನಗಿ ನವೀಕರಣ ಮಾಡುವಲ್ಲಿ ಎಡವಿದ್ದೆ ಬಂಧನಕ್ಕೆ ಕಾರಣವಾಯಿತು. ಡಿಎಂಎಸ್‌ಗೆ ಗಣಿ ಗುತ್ತಿಗೆ ನವೀಕರಣಕ್ಕೆ ಅಂದಿನ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ್ ಹಾಗೂ ಶಮೀಂ ಬಾನು ಅವರು ಮೂಲ ನಕಾಶೆಗೆ ಅಪ್ರೂವ್ ಮಾಡಲು ಕೇಂದ್ರಕ್ಕೆ ಕಳುಹಿಸುವುದನ್ನು ಬಿಟ್ಟು, ಮಾಡಿಫೈ ಮಾಡಿದ ನಕಾಶೆಯನ್ನು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸುತ್ತಾರೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಸಿ ಅಂಡ್ ಐನ ಅಂದಿನ ಅಧಿಕಾರಿ ಶಮೀಂ ಬಾನು ಅವರು ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿದ ಆದೇಶವನ್ನು ಹಿಂದಕ್ಕೆ ಪಡೆದು ವಿಶ್ವನಾಥ್ ಸೇರಿ ಇಬ್ಬರೂ ಡಿಎಂಎಸ್ ಪರವಾನಗಿ ನವೀಕರಣಕ್ಕೆ ಆದೇಶ ನೀಡುತ್ತಾರೆ.
ಆದರೆ, ಮೈನ್ಸ್ ಆ್ಯಂಡ್ ಮಿನರಲ್ ಡೆವಲಪ್‌ಮೆಂಟ್ ಆ್ಯಕ್ಟ್ 1957ರ ಪ್ರಕಾರ ಮಾಡಿಫೈ ಮಾಡಿದ ನಕಾಶೆ ಆಧಾರದ ಮೇಲೆ ನವೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ನವೀಕರಣ ಮಾಡಿದ್ದಾರೆ ಎಂದು ದೋಷಾರೋಪಣ ಪಟ್ಟಿಯಲ್ಲಿ ಸಿಬಿಐನವರು ತಿಳಿಸಿದ್ದಾರೆ. ಇದೀಗ ಪರವಾನಗಿ ನೀಡಿದ್ದೇ ಅವರಿಗೆ ಉರುಳಾಗಿ ಪರಿಣಿಮಿಸಿದೆ. ಇನ್ನು ಮಾಡಿಫೈ ನಕಾಶೆಯಲ್ಲಿ ಡಿಎಂಎಸ್ ಗಣಿ ಪ್ರದೇಶವು ಎನ್‌ಎಂಡಿಸಿ ಪ್ರದೇಶದಲ್ಲಿ ಬರುವುದು ಡಿಎಂಎಸ್ ಅಕ್ರಮಕ್ಕೆ ಕಾರಣವಾಗಿದೆ.

ಪರ್ಮಿಟ್ ನೀಡಿದ ಇಲಾಖೆ
ಡಿಎಂಎಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಜು ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾಗಿ 2007-08ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಆಗಮಿಸುತ್ತಾರೆ. ಡಿಎಂಎಸ್ ಗಣಿಗಾರಿಕೆ ನಡೆಸಿ, ಅದಿರನ್ನು ಸಾಗಾಣಿಕೆ ಮಾಡಿದ ಮೇಲೆ 1,59,250 ಮೆಟ್ರಿಕ್ ಟನ್‌ಗೆ ಸಾಗಾಣಿಕೆಗೆ ಪರ್ಮಿಟ್ ನೀಡುತ್ತಾರೆ ಇವರು. ಇಲ್ಲಿಂದ ಆ ಅದಿರು ಸಾಗಿಸಲು ಗೋವಾ, ಬೇಲೆಕೇರಿಗೆ ಪರ್ಮಿಟ್ ನೀಡಲಾಗಿದೆ. ಬಂಧಿತ ಇನ್ನೊಬ್ಬ ಸಂಡೂರಿನ ಸಿಪಿಐ ರಮಾಕಾಂತ್ ಅವರಿಗೆ ಡಿಎಂಎಸ್‌ನವರು ಎನ್‌ಎಂಡಿಸಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಎನ್‌ಎಂಡಿಸಿನವರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈ ಅಕ್ರಮದಲ್ಲಿ ಅವರ ಪಾತ್ರ ಇದೆ ಎಂಬ ಹಿನ್ನೆಲೆಯಲ್ಲಿ ರಮಾಕಾಂತ್ ಬಂಧನಕ್ಕೊಳಗಾದರು.


ಲೇಸರ್ ಸರ್ವೇಯಿಂದ ಅಕ್ರಮ ಬಯಲು
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಿಇಸಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ನಲ್ಲಿ ಲೇಸರ್ ಸರ್ವೇ ನಡೆಸಿದಾಗ ಸುಮಾರು 1.43 ಕೋಟಿ ಮೆಟ್ರಿಕ್ ಟನ್ ಅದಿರನ್ನು ಗಣಿಗಾರಿಕೆ ಮಾಡಿದ್ದಾರೆ. ಆದರೆ ಕಂಪನಿ ಮಾತ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 1.13 ಕೋಟಿ ಮೆಟ್ರಿಕ್ ಟನ್ ಅದಿರನ್ನು ಗಣಿಗಾರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಗಣಿಗಾರಿಕೆ ಪ್ರದೇಶದಲ್ಲಿ 81 ಲಕ್ಷ ಟನ್ ಅದಿರನ್ನು ಕಾನೂನು ಪ್ರಕಾರ ಮಾಡಿದ್ದರೆ, 62 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಪ್ರಭಾವ ಇದೆ ಎಂಬ ವಿಷಯವನ್ನು ಸಿಬಿಐ ಸಲ್ಲಿಸಿದ ದೋಷಾರೋಪಣ ಪಟ್ಟಿಯ ಕೊನೆಯಲ್ಲಿ ಹೇಳಲಾಗಿದೆ. ಕಂಪನಿ ಹಾಗೂ ಬಂಧಿತರ ವಿರುದ್ಧ ಐಪಿಸಿ 120ಬಿ, 379, 420, 427, 447 ಕಲಂನಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.