ವೈದ್ಯಕೀಯ ಪಿಜಿ ಸೀಟು ಹೆಚ್ಚಳಕ್ಕೆ ರಾಜೀವ್ ಚಂದ್ರಶೇಖರ್ ಒತ್ತಾಯ

ಕ.ಪ್ರ.ವಾರ್ತೆ ಬೆಂಗಳೂರು ಸೆ. 13-
ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳನ್ನು ಹೆಚ್ಚಿಸಬೇಕೆಂಬ ಹೋರಾಟಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಕೈಜೋಡಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರಿಗೆ ಪತ್ರ ಬರೆದಿರುವ ರಾಜೀವ್ ಚಂದ್ರಶೇಖರ್, ದೇಶದಲ್ಲಿ ಹೆಚ್ಚುವರಿಯಾಗಿ 38,390 ಸ್ನಾತಕೋತ್ತರ ವೈದ್ಯ ಸೀಟುಗಳನ್ನು ಆರಂಭಿಸಲು ಕಾಲೇಜುಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿ ಕೂಡ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಇದರಿಂದ ದೇಶದ ಆರೋಗ್ಯ ವಲಯ ಸುಧಾರಿಸಲಿದೆ. ಪ್ರತಿ ಕಾಲೇಜಿನಲ್ಲೂ 160 ಸ್ನಾತಕೋತ್ತರ ಸೀಟುಗಳನ್ನು ಕಲ್ಪಿಸುವ ನೂತನ ಅಧ್ಯಾಪಕ-ವಿದ್ಯಾರ್ಥಿ ಅನುಪಾತವನ್ನು ಜಾರಿಗೆ ತರಬೇಕು. ಈ ಶಿಫಾರಸಿನಂತೆ ಪ್ರತಿ ವೈದ್ಯಕೀಯ ವಿಭಾಗದಲ್ಲಿ 5 ಮತ್ತು ಇತರ ವಿಭಾಗಗಳಲ್ಲಿ 30 ವಿದ್ಯಾರ್ಥಿಗಳ ಅನುಪಾತದ ಶಿಫಾರಸನ್ನು ಅನುಷ್ಠಾನಗೊಳಿಸುವುದರಿಂದ ಸುಮಾರು 38,390 ಸೀಟುಗಳು ದೊರೆಯುತ್ತವೆ. ಇವುಗಳಲ್ಲಿ ಹೆಚ್ಚಿನ ಸೀಟುಗಳು ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸೇರುತ್ತವೆ ಎನ್ನುವುದು ಗಮನಾರ್ಹ ವಿಚಾರ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಈಗಿನ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಸೀಟುಗಳ ಅಸಮಾನತೆ ಹೀಗೆ ಮುಂದುವರಿಸುವುದರಿಂದ ಆರೋಗ್ಯ ರಕ್ಷಣೆಯು ಅಸಾಧ್ಯವಾಗಲಿದೆ. ರೋಗಗಳ ನಿರ್ವಹಣೆಯು ಅಸಮರ್ಪಕವಾಗುತ್ತದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದೇ ಇರುವುದರಿಂದ ಅಕಾಲಿಕ ಮರಣ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಹಿರಿಯ ತಜ್ಞ ವೈದ್ಯರ ನಿವೃತ್ತಿಯ ಬಳಿಕ ಮತ್ತಷ್ಟು ಸಮಸ್ಯೆ ಕಾಡಲಿದೆ ಎಂದು ರಾಜೀವ್ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ದೇಶದಲ್ಲಿ ಕೇವಲ 12 ಸಾವಿರ ಸ್ನಾತಕೋತ್ತರ ಸೀಟುಗಳಿವೆ. ಇದಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಬೇಕಿದೆ. ದೇಶದಲ್ಲಿ 47,600 ಪದವಿ ಸೀಟುಗಳಿವೆ. ಭಾರತದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಾಕಷ್ಟು ರೋಗಗಳಿಗೆ ಎಂಬಿಬಿಎಸ್ ವೈದ್ಯರು ಚಿಕಿತ್ಸೆ ನೀಡಲು ತರಬೇತಿ ಹೊಂದಿರುವುದಿಲ್ಲ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು. ಇದಕ್ಕೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಸೀಟುಗಳನ್ನು ನೀಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿಗಳು ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿ ಕೇಂದ್ರ ಸರ್ಕಾರಕ್ಕೂ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸುವ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


