ಗಣಿ ಗುತ್ತಿಗೆ ರದ್ದು: ಸರ್ಕಾರಕ್ಕೆ ಕಾಂಚಾಣ ಸದ್ದು!
ಕನ್ನಡಪ್ರಭ ವಾರ್ತೆ ಬಳ್ಳಾರಿ ಸೆ.14
'ಸಿ' ಕೆಟಗರಿಯಲ್ಲಿರುವ 51 ಗಣಿ ಕಂಪನಿಗಳ ಗುತ್ತಿಗೆಯನ್ನು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ರದ್ದುಪಡಿಸಿ ಆದೇಶಿಸಿದ್ದು, ಇದೀಗ 51 ಗಣಿ ಕಂಪನಿಗಳ ಜಾಗತಿಕ ಮರು ಹರಾಜಿನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 13,800 ಕೋಟಿ ಆದಾಯ ಹರಿದು ಬರಲಿದೆ.
'ಸಿ' ಕೆಟಗರಿ ಗಣಿ ಕಂಪನಿಗಳ ಜಾಗತಿಕ ಹರಾಜನ್ನು ಮಾ. 31, 2015ರೊಳಗಾಗಿ ಮಾಡಬೇಕೆಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದರಿಂದ 'ಸಿ' ಕೆಟಗರಿಯ ಗಣಿ ಮಾಲೀಕರು ಸುಪ್ರೀಂ ಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಮಧ್ಯೆಯೇ ರಾಜ್ಯ ಸರ್ಕಾರದ ಈ ನಿಲುವು ಗಣಿ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ವಾರ್ಷಿಕವಾಗಿ ಅದಿರು ಉತ್ಪಾದನೆ, ಆಯಾ ಗಣಿ ಕಂಪನಿಗಳ ಖನಿಜ ನಿಕ್ಷೇಪ, ಪರವಾನಗಿ ನೀಡಿರುವ ಉತ್ಪಾದನೆ, ಮಾರುಕಟ್ಟೆಯ ಮೂಲ ಬೆಲೆ ಆಧರಿಸಿ ಜಾಗತಿಕ ಹರಾಜಿನ ಅವಧಿಯನ್ನು ನಿಗದಿಗೊಳಿಸಲಾಗುತ್ತದೆ. ಈಗಾಗಲೇ 'ಸಿ' ಕೆಟಗರಿಯಲ್ಲಿ ಬರುವ 51 ಗಣಿ ಕಂಪನಿಗಳ ಗಣಿ ಗುತ್ತಿಗೆಯನ್ನು ಸುಪ್ರೀಂ ಕೋರ್ಟ್ ಏ.18ರಂದು ರದ್ದು ಪಡಿಸಿ ಆದೇಶಿಸಿದ್ದರಿಂದ ಜಾಗತಿಕ ಹರಾಜಿನ ಹೊಣೆ ರಾಜ್ಯ ಸರ್ಕಾರದ ಮೇಲಿದೆ.
960 ಹೆಕ್ಟೇರ್ನಲ್ಲಿ ಅಕ್ರಮ ಗಣಿಗಾರಿಕೆ: ಈಗಾಗಲೇ ರಾಜ್ಯ ಸರ್ಕಾರದಿಂದ ಗಣಿ ಗುತ್ತಿಗೆ ರದ್ದತಿ ಆದೇಶಕ್ಕೆ ಗುರಿಯಾಗಿರುವ 'ಸಿ' ಕೆಟಗರಿಯ 51 ಗಣಿ ಕಂಪನಿಗಳು ಸುಮಾರು 2046.35 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿವೆ. ಇನ್ನು 960.06 ಹೆಕ್ಟೇರ್ ಪ್ರದೇಶದ ಗಣಿ ಗುತ್ತಿಗೆ ಅಲ್ಲದೆ ಅಕ್ರಮ ಗಣಿಗಾರಿಕೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಗುತ್ತಿಗೆ ಪಡೆಯದ ಪ್ರದೇಶಗಳಲ್ಲೂ ಗಣಿಗಾರಿಕೆ ನಡೆಸಿ, ಹೊರ ಪ್ರದೇಶದಲ್ಲಿ ಡಂಪ್ ಮಾಡಲಾಗಿದೆ. ರಸ್ತೆ ನಿರ್ಮಾಣ ಸೇರಿದಂತೆ ಸುಮಾರು 960 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡಿರುವ ಆರೋಪವನ್ನು ಈ 51 ಗಣಿ ಕಂಪನಿಗಳು ಎದುರಿಸುತ್ತಿವೆ. ಅಂದರೆ ಒಟ್ಟು ಗಣಿ ಗುತ್ತಿಗೆಯ ಅರ್ಧದಷ್ಟು ಪ್ರದೇಶದಲ್ಲಿ ಅಕ್ರಮ ನಡೆಸಿವೆ ಎಂಬ ಆರೋಪ ಈ ಕಂಪನಿಗಳ ಮೇಲಿದೆ.
11.55 ಕೋಟಿ ಮೆಟ್ರಿಕ್ ಟನ್ ಗಣಿಗಾರಿಕೆ: 1999ರಿಂದ 2011ರ ಅವಧಿಯಲ್ಲಿ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಗಣಿಗಾರಿಕೆ ಉದ್ಯಮ ಉತ್ತುಂಗ ಸ್ಥಿತಿಯಲ್ಲಿತ್ತು. 12 ವರ್ಷಗಳಲ್ಲಿ 'ಸಿ' ಕೆಟಗರಿಯ 51 ಗಣಿ ಕಂಪನಿಗಳು 11,55,86,996 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಿವೆ. ಇನ್ನು ಗಣಿಗಾರಿಕೆ ಸ್ಥಗಿತಗೊಳಿಸಿದಾಗ ಈ ಕಂಪನಿಗಳ ಗುತ್ತಿಗೆ ಪ್ರದೇಶದಲ್ಲಿ 1096.15 ಕೋಟಿ ಅದಿರು ಇತ್ತು. ಇದನ್ನು ಸರ್ಕಾರ ಮಾರಾಟ ಮಾಡಿದೆ.
ಗಣಿ ಗುತ್ತಿಗೆ ರದ್ದಾಗಿರುವ ಕಂಪನಿಗಳು
ಜೆ.ಎಂ. ವೃಷಬೇಂದ್ರಯ್ಯ, ವಿ.ಎಂ ಪ್ರೈ. ಲಿ., ಅಂಬಿಕಾ ಘೋರ್ಪಡೆ, ಮೈಸೂರು ಮ್ಯಾಂಗನೀಸ್ ಕಂಪನಿ, ಹೊತೂರು ಟ್ರೇಡರ್ಸ್, ಎಂ. ದಶರಥ ರಾಮೀರೆಡ್ಡಿ, ಭರತ ಮೈನ್ಸ್ ಆ್ಯಂಡ್ ಮಿನರಲ್ಸ್, ಅಸೋಸಿಯೇಟ್ ಮೈನಿಂಗ್, ಬಿ. ಆರ್. ಯೋಗೇಂದ್ರನಾಥ್ ಸಿಂಗ್, ಲತಾ ಮೈನಿಂಗ್ ಕಂಪನಿ (ಡಿ. ನಾರಾಯಣ), ಕೆನರಾ ಮಿನರಲ್ಸ್, ತಂಗವೇಲು ಆ್ಯಂಡ್ ಅದರ್ಸ್, ಟ್ರೇಡೆಂಟ್ ಮೈನಿಂಗ್ ಕಂಪನಿ (ಎಂ.ಪಿ. ನಾಗಮ್ಮ), ಎನ್. ಮಂಜೂರ್ ಅಹಮದ್, ಸ್ಮಿತ್ ಕಮಲಾಬಾಯಿ, ಸುದರ್ಶನ ಸಿಂಗ್ (ಮಹಾಲಕ್ಷ್ಮಿ ಮಿನರಲ್ಸ್), ರಾಮಘಡ ಮಿನರಲ್ಸ್ ಆ್ಯಂಡ್ ಮೈನಿಂಗ್ ಪ್ರೈ.ಲಿ., ಟ್ರೇಡೆಂಟ್ ಮಿನರಲ್ಸ್, ಅಲ್ಲಂ ವೀರಭದ್ರಪ್ಪ, ಕನ್ಯಾಲಾಲ್ ದುದೇರಿಯಾ, ಆದರ್ಶ ಎಂಟರ್ ಪ್ರೈಸಸ್, ಮಾತಾ ಮಿನರಲ್ಸ್, ಎಸ್ಬಿ ಮಿನರಲ್ಸ್, ಕರ್ನಾಟಕ ಲಿಂಪೋ, ಎಸ್ಬಿ ಮಿನರಲ್ಸ್, ಅಂಜನಾ ಮಿನರಲ್ಸ್, ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಪ್ರೈ. ಲಿ., ಪಿ. ಆಬೂಬ್ಕರ್, ಎಲ್ಎಂಸಿ, ಕಮಲಾಬಾಯಿ, ತೇಜ ವರ್ಕ್ಸ್, ರಾಜಾಪುರ ಮೈನ್ಸ್, ಎಸ್.ಜಿ. ರಂಗನಗೌಡ, ನಿಧಿ ಮೈನಿಂಗ್ ಪ್ರೈ.ಲಿ., ಮಿಲನಾ ಮಿನರಲ್ಸ್ (ಲಕ್ಷ್ಮಿ ಆ್ಯಂಡ್ ಕೋ), ದೀಪ್ ಚಂದ್ ಕಿಶನ್ಲಾಲ್, ಎಸ್ಬಿ ಮಿನಲ್ಸ್, ತುಂಗಭದ್ರಾ ಮಿನರಲ್ಸ್ ಲಿಮಿಟೆಡ್ (ಎಂ.ಎಲ್. ನಂ. 2365), ತುಂಗಭದ್ರಾ ಮೈನಿಂಗ್ ಮಿನರಲ್ಸ್ (ಎಂ.ಎಲ್. ನಂ.2366), ಎಂ. ಶ್ರೀನಿವಾಸಲು, ಎಂ. ಚೆನ್ನಕೇಶವರೆಡ್ಡಿ (ಲಕ್ಷ್ಮಿ ನಾರಾಯಣ ಮೈನಿಂಗ್ ಕಂಪನಿ), ಸ್ಪಾರ್ಕ್ ಲೈನ್ ಮೈನಿಂಗ್ ಕಾರ್ಪೋರೇಷನ್, ಮಿನರಲ್ ಮೈನರ್ಸ್ ಆ್ಯಂಡ್ ಟ್ರೇಡರ್ಸ್, ಮೈಸೂರ್ ಮಿನರಲ್ಸ್ ಲಿಮಿಟೆಡ್, ವಿಎಸ್ ಲಾಡ್ ಆ್ಯಂಡ್ ಸನ್ಸ್, ಕಾರ್ತಿಕೇಯ ಮ್ಯಾಂಗನೀಸ್, ಜಿ. ರಾಜಶೇಖರ್, ರಾಮರಾವ್ ಪೋಲ್, ರಜಿಯಾ ಖಾನೂಮ್ ಶ್ರೀಮತಿ, ಶಾಂತಲಕ್ಷ್ಮಿ ಜಯರಾಂ ಕಂಪನಿಗಳ ಗಣಿ ಗುತ್ತಿಗೆ ರದ್ದುಪಡಿಸಲಾಗಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

