ಶಿಕ್ಷಕರ ವಿರುದ್ಧ ಕ್ರಮ: 'ಶಿಸ್ತು' ತಪ್ಪಿದ ಪ್ರಾಧಿಕಾರ
ಕ.ಪ್ರ.ವಾರ್ತೆ, ಮಂಗಳೂರು, ಸೆ. 15-
ಕರ್ತವ್ಯಲೋಪ ಎಸಗುವ ಶಿಕ್ಷಕರು ಅಥವಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಂಗಳೂರಿನ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಇಲಾಖೆಯ (ಡಿಡಿಪಿಐ) ಶಿಸ್ತು ಪ್ರಾಧಿಕಾರ 'ನಡೆದದ್ದೇ ಹಾದಿ' ಎನ್ನುವಂತೆ ವರ್ತಿಸುತ್ತಿದೆ.
ಕಳೆದ ಐದಾರು ವರ್ಷದಲ್ಲಿ ಶಿಕ್ಷಕರು ಅಥವಾ ಸಿಬ್ಬಂದಿ ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ನಾನಾ ಕಾರಣಗಳಿಗೆ ಅಮಾನತುಗೊಳಿಸಿ ವೇತನ ಸೌಲಭ್ಯ ತಡೆಹಿಡಿದಿದೆ. ನಿಯಮ ಪ್ರಕಾರ 6 ತಿಂಗಳು ಕಳೆದರೂ ಇಲಾಖೆ ವಿಚಾರಣೆ ಪೂರ್ತಿಗೊಳಿಸದೆ ಶಿಕ್ಷಕರನ್ನು ಬಲಿಪಶು ಮಾಡುತ್ತಿದೆ. ಶಿಕ್ಷಕರನ್ನು ಅಮಾನತಿನಲ್ಲಿಟ್ಟು ಬೇಕಾಬಿಟ್ಟಿ ವರ್ತಿಸಿರುವ ಪ್ರಾಧಿಕಾರದ ನಡವಳಿಕೆ ಕುರಿತ ದಾಖಲೆ ಪತ್ರಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ.
ವಿಚಾರಣೆ ನಿಯಮ ಹೇಗೆ?: ಯಾವುದೇ ಶಿಕ್ಷಕರ ಅಥವಾ ಸಿಬ್ಬಂದಿ ವಿರುದ್ಧ ದೂರು ಬಂದಾಗ ಅದನ್ನು ತನಿಖೆ ನಡೆಸಿ ನಂತರ ವರದಿ ಆಧಾರದಲ್ಲಿ ಡಿಡಿಪಿಐ ಅಮಾನತು ಅಥವಾ ವಿಚಾರಣೆಗೆ ಕ್ರಮ ಕೈಗೊಳ್ಳುತ್ತಾರೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿದರೆ 6 ತಿಂಗಳೊಳಗೆ ಬೇರೆ ಶಾಲೆಗೆ ಮರು ನೇಮಿಸಬೇಕು.
ವಿಚಾರಣೆಗೆ ಮುನ್ನ ಶಿಕ್ಷಕ ಅಥವಾ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿ, ಉತ್ತರ ಬಂದ ಬಳಿಕ ತನಿಖಾಧಿಕಾರಿಯನ್ನು ನೇಮಿಸಬೇಕು. ಈ ಹಂತದಲ್ಲಿ ಶಿಕ್ಷಕರ/ ಸಿಬ್ಬಂದಿ ನಿರಪರಾಧಿ ಎಂದು ಸಾಬೀತಾದರೆ ಮತ್ತದೇ ಶಾಲೆಯಲ್ಲಿ ಮುಂದುವರಿಸಬಹುದು. ಇಲ್ಲದಿದ್ದರೆ ಆರೋಪಿ ಶಿಕ್ಷಕ/ಸಿಬ್ಬಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುತ್ತಾರೆ. ವಿಚಾರಣಾಧಿಕಾರಿ ನೀಡುವ ವರದಿ ಆಧಾರದಲ್ಲಿ ಆರೋಪ ಸಾಬೀತಾದರೆ ಡಿಡಿಪಿಐ ಅಮಾನತು ಅಥವಾ ಶಿಸ್ತಿನ ಕ್ರಮ ಕೈಗೊಳ್ಳಬೇಕು.
ಇಲ್ಲಿ ಶಿಕ್ಷಕರೇ ಬಲಿಪಶು: ಡಿಡಿಪಿಐ ಕಚೇರಿಯ ಶಿಸ್ತು ಪ್ರಾಧಿಕಾರ ತನಗೆ ಬೇಕಾದಂತೆ ಶಿಸ್ತು ಕ್ರಮ ಕೈಗೊಳ್ಳುತ್ತಿದೆ ಎನ್ನುವುದು ನೊಂದ ಶಿಕ್ಷಕರ ಆರೋಪ.
ನ್ಯಾಯ ವಿಳಂಬ ಮಾಡುವವರ ವಿರುದ್ಧ ಆರೋಪ ಹೊತ್ತ ಶಿಕ್ಷಕರು ಮೇಲಧಿಕಾರಿಗಳಿಗೆ ದೂರು ಸಲ್ಲಿಸಲು ಸಾಧ್ಯವಾಗದೆ ಸುಮ್ಮನಿರುತ್ತಾರೆ. ವಿಪರ್ಯಾಸ ಎಂದರೆ ನ್ಯಾಯ ತೀರ್ಮಾನಿಸಬೇಕಾದ ಪ್ರಾಧಿಕಾರದ ಕೈ ಬಿಸಿ ಮಾಡಿದವರು ಆರೋಪಗಳಿಂದ ಬಹು ಬೇಗನೆ ಮುಕ್ತರಾಗುತ್ತಾರೆ.
ಲಭ್ಯ ದಾಖಲೆ ಪ್ರಕಾರ, ಮಂಗಳೂರಿನ ಕೆಂಜಾರು, ಉಳ್ಳಾಲ, ಬಂಟ್ವಾಳದ ಸಜಿಪನಡು, ಪುತ್ತೂರಿನ ಕಾಣಿಯೂರು ಶಾಲೆಯ ಶಿಕ್ಷಕರನ್ನು ಕರ್ತವ್ಯಲೋಪ ಮೇರೆಗೆ ಅಮಾನತುಗೊಳಿಸಿದ ಬಳಿಕ ಮರು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಕಾವೂರು, ಬೆಳ್ತಂಗಡಿ, ಬಂಗಾಡಿ ಶಾಲೆಗಳ ಸಿಬ್ಬಂದಿಯದ್ದೂ ಇದೇ ಕತೆ.
ಆದರೆ, ಕೆಲವೆಡೆ ಘಟನೆ ನಡೆದು ಎರಡ್ಮೂರು ವರ್ಷಗಳಾದೂ ಇವರ ವಿರುದ್ಧ ತನಿಖೆ ಮುಂದುವರಿದಿಲ್ಲ, ಆರೋಪ ಪಟ್ಟಿ ದಾಖಲಾಗಿಲ್ಲ, ವಿಚಾರಣಾಧಿಕಾರಿ ನೇಮಕ ಇಲ್ಲ, ಹೀಗಾಗಿ ಪ್ರಕರಣ ವಿಲೇವಾರಿ ಆಗಿಲ್ಲ. ಮೇಲಧಿಕಾರಿಗೆ ಶಿಸ್ತುಕ್ರಮಕ್ಕೆ ಶಿಫಾರಸು ಸಹ ಮಾಡಿಲ್ಲ.
ವೇತನ ಸೌಲಭ್ಯಕ್ಕೆ ಕತ್ತರಿ: ಶಿಸ್ತು ಪ್ರಾಧಿಕಾರದ ಈ ಧೋರಣೆಯಿಂದ ಶಿಕ್ಷಕರು/ಸಿಬ್ಬಂದಿ ವೇತನ ಸೌಲಭ್ಯಗಳನ್ನು ಕಳಕೊಳ್ಳುವಂತಾಗಿದೆ. ವೃಥಾ ಆರೋಪಕ್ಕೆ ಸಿಲುಕಿಕೊಂಡವರು ಆರ್ಥಿಕ ಸಂಕಷ್ಟದೊಂದಿಗೆ ಮಾನಸಿಕವಾಗಿಯೂ ಜರ್ಜರಿತರಾಗುತ್ತಿದ್ದಾರೆ. ಇವರಿಗೆ ವರ್ಗಾವಣೆ ಭಾಗ್ಯವೂ ಇರುವುದಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಈ ಸಂಬಂಧ ಮೌನವಾಗಿದೆ.
ಹಲವು ಸಂದರ್ಭಗಳಲ್ಲಿ ಯಾರದ್ದೋ ತಪ್ಪಿಗೆ, ರಾಜಕೀಯ ಒತ್ತಡಕ್ಕೆ ಶಿಕ್ಷಕರು ಅಮಾನತಿನಂಥ ಶಿಕ್ಷೆಗೆ ಒಳಗಾಗಿ ಹರಕೆಯ ಕುರಿಗಳಾಗುತ್ತಾರೆ. ಇಂಥ ಸನ್ನಿವೇಶದಲ್ಲಿ ಶಿಕ್ಷಕರ ವಿರುದ್ಧದ ಪ್ರಕರಣದ ತನಿಖೆ ನಡೆಸಿ ನ್ಯಾಯ ಒದಗಿಸುವ ಬದಲು ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರವೇ ಅಶಿಸ್ತಿನಿಂದ ವರ್ತಿಸಿದರೆ ಶಿಕ್ಷಕರಿಗೆ ನ್ಯಾಯ ನೀಡುವವರು ಯಾರೆಂದು ಪ್ರಶ್ನಿಸುತ್ತಾರೆ ಹೆಸರು ಹೇಳಲಿಚ್ಛಿಸದ ಆರೋಪಿ ಸ್ಥಾನದಲ್ಲಿರುವ ನೊಂದ ಶಿಕ್ಷಕರೊಬ್ಬರು.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

