ಪ್ರಧಾನ ಸುದ್ದಿ

ಜಯಂತಿ ಹೊಸ್ತಿಲಲ್ಲಿ ಗಾಂಧಿ ಟೋಪಿಗೆ ಬಲು ಬೇಡಿಕೆ

Published On :

ಹುಬ್ಬಳ್ಳಿ: ಇದನ್ನು ಬೇಕಾದರೆ ದೇಶಾಭಿಮಾನವೆನ್ನಿ, ಅನುಕರಣೆ ಅಥವಾ ಕ್ರೇಜ್ ಎಂದಾದರೂ ಎನ್ನಿ, ಈಗ ಮಾತ್ರ ಗಾಂಧಿ ಟೋಪಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಸಿದ್ಧವಾಗುವ ಗಾಂಧಿ ಟೋಪಿ ಕಳೆದೆರಡು ವರ್ಷಗಳಿಂದ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
ಹೌದು. ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿಯೇ ಸಿದ್ಧವಾಗುವ ಗಾಂಧಿ ಟೋಪಿಯೂ ನಿರೀಕ್ಷೆಗೂ ಮೀರಿ ಮಾರಾಟವಾಗುತ್ತಿದೆ. ರಾಷ್ಟ್ರಧ್ವಜ ತಯಾರಿಕೆಯಿಂದ ವಾರ್ಷಿಕ 2 ಕೋಟಿಗೂ ಹೆಚ್ಚು ಆದಾಯ ಕಂಡುಕೊಂಡಿರುವ ಕೇಂದ್ರದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಗಾಂಧಿ ಟೋಪಿಗೆ ಬಲು ಬೇಡಿಕೆ ಬರುವುದರ ಜತೆಗೆ ಕಳೆದ ವರ್ಷ 13.5 ಲಕ್ಷ ಆದಾಯ ಗಳಿಕೆಯಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಗಾಂಧಿ ಟೋಪಿ ಮಾರಾಟವಾಗುವ ನಿರೀಕ್ಷೆಯಿದೆ.

ಗಾಂಧಿ ಜಯಂತಿಗೆ ಬಲು ಬೇಡಿಕೆ: ರಾಷ್ಟ್ರಧ್ವಜ ತಯಾರಿಕೆಯಂತೆ ಗಾಂಧಿ ಟೋಪಿಯೂ ನಿಯಮ, ಶಿಸ್ತು ಬದ್ಧವಾಗಿಯೇ ಸಿದ್ಧಪಡಿಸಬೇಕು. ಈ ಕೆಲಸದಲ್ಲಿ ಮಹಿಳಾ ನೇಕಾರರು ನಿರತರಾಗಿದ್ದಾರೆ. ಗಾಂಧಿ ಟೋಪಿಗೆ ಅಗತ್ಯ ಬಟ್ಟೆ ಬಾಗಲಕೋಟೆಯ ತುಳಸಿಗೇರಿಯಿಂದ ತರಿಸಿಕೊಳ್ಳಲಾಗಿದೆ. 18 ಸೆಂ. ಮೀ. ನಿಂದ ಆರಂಭವಾಗಿ 19, 20, 21, 22, 23 ಹಾಗೂ ಅಂತಿಮವಾಗಿ 24 ಸೆಂ.ಮೀ. ಅಳತೆಯುಳ್ಳ ಬಗೆ ಬಗೆಯ ಟೋಪಿಗಳು ಸಿದ್ಧವಾಗುತ್ತಿವೆ. ಗಾಂಧಿ ಟೋಪಿ ತಯಾರಿಕೆ ಗ್ರಾಮೋದ್ಯೋಗ ಕೇಂದ್ರದಲ್ಲಿ ನಿರಂತರ ಪ್ರಕ್ರಿಯೆಯಾಗಿದ್ದರೂ ಗಾಂಧಿ ಜಯಂತಿ ಸನ್ನಿಹಿತವಾಗುತ್ತಿರುವುದರಿಂದ ಟೋಪಿ ತಯಾರಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.

ಅಣ್ಣಾ ಹಜಾರೆ ಮೂವ್‌ಮೆಂಟ್ ಎಫೆಕ್ಟ್: 
ಪಾಶ್ಚಿಮಾತ್ಯ ಸಂಸ್ಕೃತಿಯ ಸೆಳೆತದಿಂದಾಗಿಯೋ ಏನೋ ಗಾಂಧಿ ಟೋಪಿ ತೊಡುವವರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಶಕ್ತಿಯ ದ್ಯೋತಕದಂತಿದ್ದ ಈ ಟೋಪಿಯನ್ನು ಹಿರಿಯರು ಮಾತ್ರ ಧರಿಸುತ್ತಿದ್ದರು. ಆದರೆ, ಗಾಂಧಿ ವಾದಿ ಅಣ್ಣಾ ಹಜಾರೆಯವರು ಕೈಗೊಂಡ ಭ್ರಷ್ಟಾಚಾರ ವಿರೋಧಿ ಹೋರಾಟದ ಪರಿಣಾಮ ಗಾಂಧಿ ಟೋಪಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿತು. ಪ್ರಮುಖವಾಗಿ ಯುವಕರು ಗಾಂಧಿ ಟೋಪಿಯತ್ತ ಆಕರ್ಷಿತರಾದರು. ಗಾಂಧಿ ಟೋಪಿ ಧರಿಸಿ ಹೋರಾಟದಲ್ಲಿ ಪಾಲ್ಗೊಂಡು ದೇಶಾಭಿಮಾನ ಮೆರೆದರು. ಗಾಂಧಿ ಟೋಪಿಯಲ್ಲಿ ಅಂಥ ಅದ್ಭುತ ಶಕ್ತಿಯಿದೆ. ಅಣ್ಣಾ ಹಜಾರೆ ಹೋರಾಟದ ಪರಿಣಾಮವೋ ಎನ್ನುವಂತೆ ಖಾದಿ ಕೇಂದ್ರದಲ್ಲಿ ತಯಾರಾಗುವ ಗಾಂಧಿ ಟೋಪಿ ಭರ್ಜರಿಯಾಗಿ ಮಾರಾಟವಾಗಲಾರಂಭಿಸಿದೆ ಎನ್ನುತ್ತಾರೆ ಖಾದಿ ಮಾರಾಟ ಕೇಂದ್ರದ ಮೇಲ್ವಿಚಾರಕ ವಿಜಯಕುಮಾರ ಕರ್ಜಗಿ.

ಶಾಲೆಯಿಂದ ಬೇಡಿಕೆ: ಇದೀಗ ಗಾಂಧಿ ಜಯಂತಿ ಹತ್ತಿರವಾಗುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳಿಂದಲೂ ಗಾಂಧಿ ಟೋಪಿಗೆ ಬೇಡಿಕೆ ಬರುತ್ತಿದೆ. ವಿವಿಧ ಶಾಲೆಗಳ ಶಿಕ್ಷಕರು ಟೋಪಿ ಖರೀದಿಸಲು ಆಗಮಿಸುತ್ತಿದ್ದಾರೆ. ಪ್ರಮುಖವಾಗಿ ಸೇವಾದಳದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಾಗಿ ಗಾಂಧಿ ಟೋಪಿ ಖರೀದಿಸುತ್ತಿದ್ದಾರೆ. ಈ ರೀತಿಯ ಬೇಡಿಕೆ ಹಿಂದೆಂದೂ ವ್ಯಕ್ತವಾಗಿರಲಿಲ್ಲ ಎಂಬುದು ಗಮನಾರ್ಹ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.