ಹಾವಿನ ವಿಷ ತಡೆ ಔಷಧ ಕೊರತೆ
ಬಳ್ಳಾರಿ: ಹಾವು ಕಚ್ಚಿದರೆ ವ್ಯಕ್ತಿಯ ಪ್ರಾಣ ಉಳಿಸಲು ಬಹಳ ಅಗತ್ಯವಿರುವ ಹಾವಿನ ವಿಷ ತಡೆ ಔಷಧ ಸೀಸೆ (anti snake venom vial) ಕೊರತೆಯನ್ನು ಬಳ್ಳಾರಿಯ ವಿಮ್ಸ್ ಸೇರಿದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳು ಅನುಭವಿಸುತ್ತಿವೆ. ವಿಮ್ಸ್ನಂಥ ದೊಡ್ಡ ಸಂಸ್ಥೆಗಳೇ ಔಷಧಿಗಳನ್ನು ಎರವಲು ಪಡೆದು ಹಾವು ಕಚ್ಚಿದವರ ಜೀವ ಉಳಿಸುವ ಪರಿಸ್ಥಿತಿಯನ್ನು ತಂದುಕೊಂಡಿವೆ. ವರ್ಷದಿಂದ ವರ್ಷಕ್ಕೆ ಈ ಔಷಧಿ ಸೀಸೆಯ ಬೆಲೆಯೂ ಏರುತ್ತಿದ್ದು, ಅಭಾವವೂ ಹೆಚ್ಚಾಗುತ್ತಿದೆ. ದೇಶದ ಪುಣೆಯಲ್ಲಿ ಮಾತ್ರ ಖಾಸಗಿಯಾಗಿ ಈ ಔಷಧಿಯನ್ನು ತಯಾರಿಸಲಾಗುತ್ತಿದೆ. ಅಗತ್ಯದಷ್ಟು ಔಷಧ ತಯಾರಿಕೆಗೆ ಕಚ್ಚಾ ಉತ್ಪನ್ನಗಳ ಕೊರತೆ ಕಾಡುತ್ತಿದ್ದು, ಇಂಥದ್ದೊಂದು ಅಭಾವ ಸೃಷ್ಟಿಗೆ ಪ್ರಮುಖ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಔಷಧದ 2-3 ಸೀಸೆಗಳಿದ್ದರೂ ಸಕಾಗುತ್ತದೆ. ಹಾವು ಕಡಿದಾಕ್ಷಣ ಅಗತ್ಯ ಡೋಸ್ ನೀಡಿದರೆ ನಂತರ ದೊಡ್ಡ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸುಲಭವಾಗುತ್ತದೆ.
ಹಾವು ಕಡಿತದ ಪ್ರಮಾಣ ಹೆಚ್ಚು: ಮಳೆ ಹೆಚ್ಚಾದಂತೆ ಕೃಷಿ ಚಟುವಟಿಕೆಗಳೂ ಹೆಚ್ಚುತ್ತವೆ. ರೈತರು ಜಮೀನುಗಳಲ್ಲಿ ಕೆಲಸ ಮಾಡುವಾಗ ಹಾವುಗಳ ಹಾವಳಿ ಹೆಚ್ಚಾಗಿ, ಕಡಿಯುತ್ತವೆ. ಬಹುತೇಕ ಹಾವು ಕಚ್ಚಿ ರೈತರೇ ಹೆಚ್ಚಾಗಿ ಮೃತಪಡುವುದರಿಂದ ಪ್ರತಿ ಆಸ್ಪತ್ರೆಗಳಲ್ಲಿಯೂ ಈ ಔಷಧದ ಅಗತ್ಯವಿದೆ.
ಡಬಲ್ ರೇಟ್: ಈ ಔಷಧ ಪೂರೈಕೆಗೆ ವಿಮ್ಸ್ ಟೆಂಡರ್ ಕರೆಯುತ್ತಿತ್ತು. ಮೊದಲು 350ಕ್ಕೆ ಸೀಸವೊಂದು ಸಿಗುತ್ತಿತ್ತು. ಇದೀಗ ಇದರ ಬೆಲೆ 700ಕ್ಕೆ ಏರಿರುವುದರಿಂದ ಟೆಂಡರ್ ಕರೆಯಲೂ ಯಾರೂ ಮುಂದಾಗುತ್ತಿಲ್ಲ. ಇದನ್ನು ಸರಿದೂಗಿಸಲು ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ಇತರೆ ಜಿಲ್ಲೆಗಳ ಆಸ್ಪತ್ರೆಗಳಿಂದ ಅಲ್ಪಸ್ವಲ್ಪ ಔಷಧಿ ಪಡೆದು, ಹಾವು ಕಚ್ಚಿದವರ ರಕ್ಷಣೆಗೆ ವಿಮ್ಸ್ನಂಥ ಸಂಸ್ಥೆಗಳು ಮುಂದಾಗುತ್ತಿದೆ. ವಿಮ್ಸ್ಗೆ ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಸೇರಿದಂತೆ ಇತರೆ ಜಿಲ್ಲೆಗಳಿಂದ ಹಾವು ಕಚ್ಚಿಸಿಕೊಂಡವರು ಬರುತ್ತಾರೆ. ಸಹಜವಾಗಿ ವಿಮ್ಸ್ಗೆ ಈ ಔಷಧ ಅತ್ಯಂತ ಅಗತ್ಯ. ವಿಮ್ಸ್ನಲ್ಲಿನ ಸಮಸ್ಯೆ ಕುರಿತು ನಿರ್ದೇಶಕರು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸರ್ಕಾರಗಳು ಎಚ್ಚೆತ್ತುಕೊಳ್ಳಲಿ: ಹಾವು ಕಚ್ಚಿಸಿ ಕೊಂಡಾಗ ವ್ಯಕ್ತಿ ದೇಹಕ್ಕೆ ಸೇರಿದ ವಿಷದ ಪ್ರಮಾಣದ ಮೇಲೆ ಈ ಔಷಧವನ್ನು ನೀಡಲಾಗುತ್ತದೆ. ಹಾವು ಕಚ್ಚಿದ ಗಂಟೆಯೊಳಗಾಗಿ ಇದನ್ನು ಕೊಟ್ಟರೆ ಒಳ್ಳೆಯದು. ಆದರೆ, ಈ ಔಷಧಿಯ ಕೊರತೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಎದುರಿಸಿದರೆ ಎಲ್ಲಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಗಳಿಗೆ ಆಯಾ ಜಿಲ್ಲಾವಾರು ವ್ಯಾಪ್ತಿಯ ಡ್ರಗ್ಸ್ ಲಾಜಿಸ್ಟಿಕ್ಗಳಿಂದ ಈ ಔಷಧದ ಸೀಸೆಗಳನ್ನು ವಿತರಿಸಲಾಗುತ್ತದೆ. ಅಲ್ಲಿಯೂ ಕೊರತೆ ಎದುರಾದರೆ ಮತ್ತಷ್ಟು ಸಮಸ್ಯೆ ಕಟ್ಟಿಟ್ಟಬುತ್ತಿ. ಇಂಥ ಪರಿಸ್ಥಿತಿ ಬರುವ ಪೂರ್ವದಲ್ಲಿ ಸರ್ಕಾರಗಳು ಎಚ್ಚೆತ್ತುಕೊಂಡು ಈ ಆಗತ್ಯ ಔಷಧ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಸೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

