ರಾಜಕೀಯದ ಕೈಗೆ ಬುದ್ಧಿ ಕೊಟ್ಟ ಜೀವಿಗಳ ಕ್ರಮಕ್ಕೆ ವ್ಯಾಪಕ ತರಾಟೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಏ.4
'ಮಹಾಯುದ್ಧ'ದ ಗಳಿಗೆಯಲ್ಲಿ ಪರಮೇಶ್ವರ, ಸಿದ್ದರಾಮಯ್ಯ ಅವರ 'ಲೂಸ್ ಟಾಕ್'ನಿಂದ ಕಂಗೆಟ್ಟಿರುವ ಕಾಂಗ್ರೆಸ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 'ಅಕ್ಷರ ಲೋಕ'ದ 'ನಾಯಕರು' ಬಹಿರಂಗವಾಗಿ 'ಕೈ' ಕುಲುಕಿ ಬೆಂಬಲಿಸಿದ್ದಕ್ಕೆ ಪ್ರತಿಪಕ್ಷ ಬಿಜೆಪಿ, ಸಾಹಿತ್ಯ ಲೋಕ ಸೇರಿದಂತೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಬುದ್ಧಿಜೀವಿಗಳು ಸಾಹಿತ್ಯ ಕೃಷಿಯಲ್ಲಿ ಮಾತ್ರ ತೊಡಗಬೇಕು. ಯಾವುದೇ ಕಾರಣಕ್ಕೂ ಜ್ಞಾನಪೀಠಿಗಳು ಹದ್ದು ಮೀರಿ ಅಜ್ಞಾನ ಪ್ರದರ್ಶಿಸಬಾರದು ಎಂಬ 'ಬುದ್ಧಿ'ಮಾತು ಹೇಳಿರುವ ಕೆಲವು ಹಿರಿಯ ಸಾಹಿತಿಗಳು, ಕಾಂಗ್ರೆಸ್ಗೆ ಬೇಕಾದರೆ ಮಾರ್ಗದರ್ಶನ ನೀಡಲಿ. ಆದರೆ, ಬಹಿರಂಗವಾಗಿ ಪ್ರಚಾರ ಮಾಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಬೆಂಬಲಿಸಿದ ಜ್ಞಾನಪೀಠಿಗಳಿಗೆ ಪ್ರತಿಪಕ್ಷ ಬಿಜೆಪಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಿದೆ.
ಮಾಲೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗದೀಶ ಶೆಟ್ಟರ್, ನಕ್ಸಲರ ಜತೆ ನಂಟು ಹೊಂದಿರುವ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಬೆಂಬಲ ಬಿಜೆಪಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಕೆಲವು ಸಾಹಿತಿಗಳು ನಕ್ಸಲ್ವಾದವನ್ನು ಬೆಂಬಲಿಸಿ ತಾವು ಬುದ್ಧಿಜೀವಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಕಾರ್ನಾಡ್, ಅನಂತಮೂರ್ತಿ ಅವರಿಂದ ರಾಜ್ಯಕ್ಕೆ ಏನೂ ಲಾಭ ಇಲ್ಲ. ಬಿಜೆಪಿ, ಜನಸಂಘವನ್ನು ಬಯ್ಯುವುದನ್ನೇ ಕಾಯಕ ಮಾಡಿಕೊಂಡಿರುವ ಇಂಥವರಿಂದ ಬಿಜೆಪಿ ಏನನ್ನೂ ಬಯಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಜ್ಞಾನಪೀಠ ಪುರಸ್ಕೃತರು ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿ ಮೋದಿ ವಿರುದ್ಧ ಹರಿಹಾಯುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧ. ಸಾಹಿತ್ಯ ಕೃಷಿಯವರಿಗೆ ರಾಜಕೀಯ ಅನುಭವ ಇಲ್ಲ. ಈ ಹೇಳಿಕೆ ಮೋದಿ ಅವರನ್ನು ಮೂರು ಬಾರಿ ಮುಖ್ಯಮಂತ್ರಿಯಾಗಿಸಿದ ಗುಜರಾತ್ ಜನತೆಗೆ ಮಾಡಿದ ಅವಮಾನ.
- ಬಿ.ಜೆ. ಪುಟ್ಟಸ್ವಾಮಿ, ಮೇಲ್ಮನೆ ಸದಸ್ಯ
ಸಾಹಿತಿಗಳು ಕೇವಲ ಬರವಣಿಗೆಗೆ ಮಾತ್ರ ಸಿಮೀತವಾಗಿರಬೇಕು. ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿ ನಿಂತು ಪ್ರಚಾರ ಮಾಡುವುದು ಸರಿಯಲ್ಲ. ಮೋದಿ ವಿರುದ್ಧ ಮಾತ್ರವೇ ಹರಿಹಾಯುತ್ತಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಉದ್ದೇಶವಾದರೂ ಏನು? ವಿನಾಕಾರಣ ಒಬ್ಬರನ್ನು ನಿಂದಿಸುವುದು ಹಾಗೂ ಬಯ್ಯುವುದು ಇವರಿಗೆ ಶೋಭೆ ತರುವ ಸಂಗತಿಯಲ್ಲ. ಅದರಲ್ಲೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಇಂತಹ ನಡವಳಿಕೆ ಒಂದು ರೀತಿಯ ಅಜ್ಞಾನ ಪ್ರದರ್ಶನ.
- ಡಾ.ಸಿ.ಪಿ. ಕೃಷ್ಣಕುಮಾರ್, ಹಿರಿಯ ಸಾಹಿತಿ
ಅನಂತಮೂರ್ತಿ, ಮರಳಸಿದ್ದಪ್ಪ, ಮುಖ್ಯಮಂತ್ರಿ ಚಂದ್ರು ಅವರಿಗೆ ಹುದ್ದೆ, ಅಧಿಕಾರ ಸಿಗುತ್ತದೆ ಎಂದಾದರೆ ಯಾವ ಪಕ್ಷದ ಕಡೆಯಾದರೂ ವಾಲುತ್ತಾರೆ. ಅಧಿಕಾರ ಹಾಗೂ ಹುದ್ದೆಯೇ ಇವರ ಸಿದ್ಧಾಂತಗಳು. ಬಿಜೆಪಿಯಲ್ಲಿ ಅಧಿಕಾರ ಅಥವಾ ಲಾಭ ದೊರೆಯುತ್ತದೆ ಎಂದಾದರೆ ಈ ದೇಶಕ್ಕೆ ಮೋದಿ ಏಕೆ ಅನಿವಾರ್ಯ ಹಾಗೂ ಸಮರ್ಥ ಪ್ರಧಾನಿ ಅಭ್ಯರ್ಥಿ ಎನ್ನುವುದನ್ನು ಹೇಳಬಲ್ಲರು. ಇವರೆಲ್ಲ ಮುಖವಾಡ ಧರಿಸಿಕೊಂಡು ಮಾತನಾಡುವ ಸಾಹಿತಿಗಳು.
- ಸುರೇಶಕುಮಾರ್, ಮಾಜಿ ಸಚಿವ
ಹರ ಹರ ಮಹದೇವ ಎಂಬುದನ್ನು ಹರ ಹರ ಮೋದಿ ಎಂದು ಬಳಸುವ ಮೂಲಕ ಬಿಜೆಪಿ ಅಹಂಕಾರ ತೋರುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಗೌರವವೇ ಇಲ್ಲ. ಬಿಜೆಪಿಯಲ್ಲಿ ಏಕ ವ್ಯಕ್ತಿ, ಸಂಸ್ಕೃತಿ, ಧರ್ಮ ಪ್ರಚಾರ ಮಾಡುವುದನ್ನು ಹಿಂದಿಗಿಂತ ಈಗ ಜಾಸ್ತಿ ಮಾಡಿದ್ದಾರೆ.
-ಡಾ. ಮರಳುಸಿದ್ದಪ್ಪ, ಹಿರಿಯ ಸಾಹಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


