ಪ್ರಧಾನ ಸುದ್ದಿ

ನಿವೇಶನ, ಗಂಗಾ ಕಲ್ಯಾಣ ಯೋಜನೆಗೆ ಮಾಜಿ ಸೈನಿಕನ 'ಪರೇಡ್‌'!

Published On :

ಅಂಶಿ ಪ್ರಸನ್ನಕುಮಾರ್
ಮೈಸೂರು:
ಭಾರತ-ಪಾಕಿಸ್ತಾನ ನಡುವೆ 1971ರಲ್ಲಿ ಸಂಭವಿಸಿದ ಯುದ್ಧದಲ್ಲಿ ಗಾಯಗೊಂಡಿದ್ದ ಮಾಜಿ ಸೈನಿಕರೊಬ್ಬರು ಮೈಸೂರಿನಲ್ಲಿ ನಿವೇಶನ ಹಾಗೂ ಚಾಮರಾಜನಗರ ಜಿಲ್ಲೆ ಉಡಿಗಾಲದಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿರುವ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಸೌಲಭ್ಯ ಪಡೆಯಲು ಸರ್ಕಾರಿ ಕಚೇರಿಗಳಿಗೆ ಚಪ್ಪಲಿ ಸವೆಸುತ್ತಿದ್ದಾರೆ.
ಚಾಮರಾಜನಗರ ತಾಲೂಕು ಉತ್ತವಳ್ಳಿ ನಿವಾಸಿ ಸಿ. ರಂಗನ್ ಅ. ರಂಗಪ್ಪ (72) ಮಾಜಿ ಸೈನಿಕ. ರಂಗನ್ ಅವರು 1965ರಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದರು. ದೇಶ ಸೇವೆಯಲ್ಲಿರುವಾಗ 1971ರಲ್ಲಿ ಭಾರತ- ಪಾಕಿಸ್ತಾನ ನಡುವೆ ಯುದ್ಧ ನಡೆಯಿತು. ಪಾಕಿಸ್ತಾನದ ಗಡಿ ದಾಟಿ ಸುಮಾರು 30 ಕಿ.ಮೀ. ಮುಂದೆ ಸಾಗಿದಾಗ ದಕ್ಷಿಣ ವೃತ್ತ ಖಂಡ ಲಿಲ್ಲಿ ಎಂಬಲ್ಲಿ ಬಲಗಾಲಿಗೆ ಗುಂಡೇಟು ಬಿದ್ದು ಗಾಯಗೊಂಡರು. ಸುಮಾರು ಒಂದೂವರೆ ವರ್ಷ ಆಸ್ಪತ್ರೆಯಲ್ಲಿದ್ದರು. ಮಿಲಿಟರಿ ವೈದ್ಯಕೀಯ ಪರೀಕ್ಷೆಯ ನಂತರವೂ ಗಾಯದ ಕಲೆ ಹಾಗೆ ಉಳಿದಿದೆ. ಈಗಲೂ ಅವರಿಗೆ ನೋವು ಕಾಡುತ್ತದೆ.
ಇದಾದ ನಂತರ ಅವರಿಗೆ 1981ರವರೆಗೆ ಸೇನೆಯಲ್ಲಿಯೇ ನಾಗರಿಕ ಸೇವಾ ವಿಭಾಗದಲ್ಲಿ ಲಘು ಕೆಲಸ ನೀಡಲಾಗಿತ್ತು. ನಂತರ ಕೋಲಾರ ಚಿನ್ನದ ಗಣಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದರು. ನಿವೃತ್ತಿ ಬಳಿಕ ಊರಿಗೆ ಹಿಂದಿರುಗಿದ ಅವರು ಮೈಸೂರು ಜಿಲ್ಲಾಧಿಕಾರಿಗೆ (ಆಗಿನ್ನೂ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿರಲಿಲ್ಲ) ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ಸೂಕ್ತ ಕ್ರಮಕ್ಕಾಗಿ ಸೈನಿಕ ಕಲ್ಯಾಣ ಮತ್ತು ಪುನರ್ಸಸತಿ ಇಲಾಖೆಗೆ ಶಿಫಾರಸು ಮಾಡಿದ್ದರು. ಇದಾದ ನಂತರ ಯಾವುದೇ ಪ್ರಗತಿಯಾಗಿಲ್ಲ. 'ರಾಜ್ಯ ಸರ್ಕಾರದಿಂದ ಧನಸಹಾಯ ಕೇಳಿದೆ. ಸರ್ಕಾರ ನನ್ನ ಅರ್ಜಿಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ರವಾನಿಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ' ಎನ್ನುತ್ತಾರೆ ರಂಗನ್.
ಏನೂ ಬೇಕಾಗಿಲ್ಲ: ರಾಜ್ಯ ಸರ್ಕಾರದಿಂದ ನಿವೇಶನವೂ ಬೇಡ, ಧನಸಹಾಯವೂ ಬೇಡ. ಕೇಂದ್ರ ನೀಡುವ ಪಿಂಚಣಿ ಹಣದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದೇನೆ. ಪತ್ನಿ ಗುರುಸಿದ್ದಮ್ಮ ಹೆಸರಿನಲ್ಲಿ ಉಡಿಗಾಲದಲ್ಲಿ ಸರ್ವೆ ನಂ.395ರಲ್ಲಿ 2.30 ಎಕರೆ ಜಮೀನಿದೆ. ಇದು ಅವರಿಗೆ ತಂದೆಯಿಂದ ಬಂದಿದ್ದು. ಗುರುಸಿದ್ದಮ್ಮ ಅವರು ದಿ. ಕುಳ್ಳಯನ ಸಿದ್ದಯ್ಯ ಅವರ ಏಕೈಕ ಪುತ್ರಿ. ಸಣ್ಣ ಹಿಡುವಳಿದಾರರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಹಾಕಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ 2011ರ ಮೇ 11ರಂದು ಮನವಿ ಸಲ್ಲಿಸಿದೆ. ಸ್ವೀಕೃತಿಯನ್ನು ನೀಡಿದರು. ಮೂರು ವರ್ಷಗಳಾಗುತ್ತಾ ಬಂದರೂ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂಬುದು ರಂಗನ್ ಅವರ ಅಳಲು.
ಲಂಚ ಮಾತ್ರ ಕೊಡಲ್ಲ
ಗಂಗಾ ಕಲ್ಯಾಣ ಯೋಜನೆಯಲ್ಲಿ ಹಲವಾರು ಮಂದಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯ ಕಲ್ಪಿಸಲು ಲಂಚ ಕೇಳುತ್ತಾರೆ. ನಾನು ಮಿಲಿಟರಿಯಲ್ಲಿದ್ದವನು. ಅದೂ ಪಾಕಿಸ್ತಾನದ ಸೈನಿಕರೊಂದಿಗೆ ಕಾದಾಡಿ ಗಾಯಗೊಂಡವನು. ನನ್ನ ಮನವಿ ಮೇರೆಗೆ ಅವರಾಗಿಯೇ ಸೌಲಭ್ಯ ಕಲ್ಪಿಸಿಕೊಟ್ಟರೆ ಸರಿ. ಇಲ್ಲದಿದ್ದರೆ ನಾನಂತೂ ಲಂಚ ನೀಡಲು ಹೋಗುವುದಿಲ್ಲ ಎಂಬುದು ರಂಗನ್ ನಿಲುವು. ರಂಗನ್ ಅವರಿಗೆ ಇಬ್ಬರು ಮಕ್ಕಳು. ಮಗ ಇವರೊಂದಿಗೆ ವ್ಯವಸಾಯ ಮಾಡುತ್ತಾನೆ. ಮಗಳನ್ನು ಸೈನಿಕನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಅಳಿಯ ಕೂಡ ಈಗ ನಿವೃತ್ತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.