ಮುಸ್ಲಿಮರಿಗೆ ಆಸ್ತಿ ಖರೀದಿಯ ಅವಕಾಶ ಬೇಡ: ವಿವಾದಾಸ್ಪದ ತೊಗಾಡಿಯಾ ವಿರುದ್ಧ ಪ್ರಕರಣ

ನವದೆಹಲಿ: ಹಿಂದೂಗಳಿರುವ ಪ್ರದೇಶದಲ್ಲಿ ಮುಸ್ಲಿಮರು ಆಸ್ತಿ ಖರೀದಿಸದಂತೆ ನೋಡಿಕೊಳ್ಳಬೇಕು ಎನ್ನುವ ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅದಕ್ಕೆ ಪೂರಕವಾಗಿ ತೊಗಾಡಿಯಾ ವಿರುದ್ಧ ಎಫ್ಐಆರ್ ದಾಖಿಲಿಸುವಂತೆ ಆಯೋಗ ಗುಜರಾತ್ ಪೊಲೀಸರಿಗೆ ಆದೇಶಿಸಿದೆ.
ಆಡ್ವಾಣಿ ವೆಬ್ಸೈಟ್ಗೇ ಕನ್ನ
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ಅಧಿಕೃತ ವೆಬ್ಸೈಟ್ ಅನ್ನು ಪಾಕಿಸ್ತಾನದ ಸೈಬರ್ ಖದೀಮನೊಬ್ಬ ಸೋಮವಾರ ಹ್ಯಾಕ್ ಮಾಡಿದ್ದಾನೆ. ತನ್ನನ್ನು ತಾನು ಮುಹಮ್ಮದ್ ಬಿಲಾಲ್ ಎಂದು ಕರೆದುಕೊಂಡಿರುವ ಹ್ಯಾಕರ್ 'ಪಾಕಿಸ್ತಾನ ಜಿಂದಾಬಾದ್' ಎಂದು ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ್ದಾನೆ. ಜತೆಗೆ, ಕಾಶ್ಮೀರದಿಂದ ಸೇನೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ.
ಕ್ರಿಮಿನಲ್ ಪ್ರಕರಣ ವಿಚಾರಣೆ
ಹರ್ದೋಯಿ: ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಪಕ್ಷಭೇದವಿಲ್ಲದೆ ಸಂಸದರ ಕ್ರಿಮಿನಲ್ ಪ್ರಕರಣಗಳ ಕುರಿತು ವಿಚಾರಣೆ ನಡೆಸುತ್ತೇವೆ. ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇವೆ. ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶಪಥ ಮಾಡಿದ್ದಾರೆ. ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ತುರ್ತು ಅಗತ್ಯವಿದೆ ಎಂದ ಅವರು, ನೂತನ ಸಂಸದರ ಬಾಕಿ ಉಳಿದಿರುವ ಅಪರಾಧ ಪ್ರಕರಣಗಳ ಕುರಿತು ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ನ ಅನುಮತಿ ಪಡೆಯಲಾಗುವುದು ಎಂದು ಉತ್ತರಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ತೊಗಾಡಿಯಾ ಹೇಳಿದ್ದೇನು?
ಹಿಂದೂಗಳಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಸಲು ಅವಕಾಶ ನೀಡಬಾರದು. ಈ ಸಂಬಂಧ ಸೂಕ್ತ ಕಾನೂನು ರಚಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ. ಮುಸ್ಲಿಮರು ಜಾಗ ಖರೀದಿಸಿದರೂ ಆ ಆಸ್ತಿಯನ್ನು ಅತಿಕ್ರಮಣ ಮಾಡಿಕೊಳ್ಳಿ. ಬಜರಂಗದಳದ ಬೋರ್ಡ್ ಹಾಕಿ. ಮುಂದಿನ ವಿಚಾರವನ್ನು ಕೋರ್ಟ್ನಲ್ಲಿ ನೋಡಿಕೊಳ್ಳೋಣ. ಇಷ್ಟು ವರ್ಷವಾದರೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೇ ಶಿಕ್ಷೆಯಾಗಿಲ್ಲ. ಈ ಆಸ್ತಿ ವಿವಾದ ಕೂಡ ಶೀಘ್ರ ಇತ್ಯರ್ಥವಾಗಲ್ಲ ಎಂದು ಗುಜರಾತ್ನ ಭಾವನಗರದಲ್ಲಿ ಶನಿವಾರ ತೊಗಾಡಿಯಾ ಹೇಳಿದ್ದರು.
ಆ ರೀತಿ ಹೇಳಿಯೇ ಇಲ್ಲ
ತಮ್ಮ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ತೊಗಾಡಿಯಾ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕೆಯೊಂದು ಪ್ರಕಟಿಸಿರುವುದು ಕಪೋಲಕಲ್ಪಿತ ವರದಿ. ಆ ಪತ್ರಿಕೆಗೆ ನೋಟಿಸ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮೋದಿ ಹೆಸರು ಸೂಚಿಸಲ್ಲ ಬಿಸ್ಮಿಲ್ಲಾ ಖಾನ್ ಪುತ್ರ
ವಾರಾಣಸಿ: ವಾರಾಣಸಿಯಿಂದ ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರು ಸೂಚಿಸಲು ಖ್ಯಾತ ಶೆಹನಾಯ್ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುತ್ರ ಜಮಿನ್ ಹುಸೇನ್ ನಿರಾಕರಿಸಿದ್ದಾರೆ. ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಜಮಿನ್ ಹೇಳಿದ್ದಾರೆ. ಈ ನಡುವೆ, ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ, ನಿವೃತ್ತ ನ್ಯಾಯಮೂರ್ತಿ ಗಿರಿಧರ್ ಮಾಳವೀಯ ಮೋದಿ ಹೆಸರು ಸೂಚಿಸಲು ಒಪ್ಪಿದ್ದಾರೆ. ಮೋದಿ ಅವರು ಏ.24ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಮೋದಿ ವಿರುದ್ಧವೂ ಸಿಬಿಐ ತನಿಖೆಯಾಗಲಿ
ನವದೆಹಲಿ: ತುಳಸಿರಾಂ ಪ್ರಜಾಪತಿ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿ ಅವರೂ ಒಬ್ಬ ಆರೋಪಿ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಗುಜರಾತ್ ಸಿಎಂ ಕಚೇರಿಗೂ ನೇರ ಸಂಬಂಧ ಇದೆ ಎನ್ನುವುದಕ್ಕೆ ಸಾಕ್ಷ್ಯಗಳಿವೆ. ಇಷ್ಟಾದರೂ ಸಿಬಿಐ ಈವರೆಗೆ ತನಿಖೆ ನಡೆಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಮೋದಿ ಅವರೂ ವಿಚಾರಣೆಗೆ ಒಳಗಾಗಬೇಕು ಎಂದು ಸಿಬಲ್ ಆಗ್ರಹಿಸಿದ್ದಾರೆ. ಇದೇ ವೇಳೆ, ಮೋದಿ ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದಾಗಿ ಶಪಥ ಮಾಡುತ್ತಾರೆ ಮೊದಲು ಅನೇಕ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ತಮ್ಮ ಪರಮಾಪ್ತ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


