ಶಕುಂತಲಾ ಬಂಗಾರಪ್ಪ ಇನ್ನಿಲ್ಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಸುಜಾತ, ಗೀತಾ ಶಿವರಾಜ್ಕುಮಾರ್, ಅನಿತಾ ಅವರ ಮಕ್ಕಳು.
ಶಕುಂತಲಾ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ. ಅದಕ್ಕೂ ಮುನ್ನ ಶಕುಂತಲಾ ಅವರ ಪಾರ್ಥಿವ ಶರೀರವನ್ನು ಸೊರಬ ತಾಲೂಕಿನ ಕುಬಟೂರಿಗೆ ಕೊಂಡೊಯ್ದು ಬೆಳಗ್ಗೆ 8ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ನಂತರ ಸೊರಬದ ಜೂನಿಯರ್ ಕಾಲೇಜು ಆವರಣದಲ್ಲಿ ದರ್ಶನಕ್ಕೆ ಇಡಲಾಗುವುದು. ಸಂಜೆ 4 ಗಂಟೆಗೆ ಬಂಗಾರಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಸಿದು ಬಿದ್ದರು: ಮೂರು ತಿಂಗಳಿನಿಂದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇತ್ತೀಚಿನ ಚುನಾವಣಾ ಪ್ರಚಾರದಿಂದ ಬಳಲಿದ್ದರು. ಮಂಗಳವಾರ ಬೆಳಗ್ಗೆಯಿಂದ ಬಳಲಿದಂತಾಗಿದ್ದರು. ಮಧ್ಯಾಹ್ನ 1ಗಂಟೆಯಲ್ಲಿ ತೀರಾ ಅಸ್ವಸ್ಥರಾಗಿ ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 2 ಗಂಟೆಯಲ್ಲಿ ಆಸ್ಪತ್ರೆಯಲ್ಲೇ ಅಸುನೀಗಿದರು.
ನಂತರ ಶಕುಂತಲಾ ಅವರ ಪಾರ್ಥಿವ ಶರೀರನ್ನು ಸದಾಶಿವನಗರದ ನಿವಾಸಕ್ಕೆ ತರಲಾಯಿತು. ಅಲ್ಲೇ ಸಾರ್ವಜನಿಕ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದ ಆಪ್ತರು, ಸಂಬಂಧಿಕರು ಹಾಗೂ ರಾಜಕೀಯ ನಿಕಟವರ್ತಿಗಳು ನಿವಾಸಕ್ಕೆ ಬಂದು ಕಂಬನಿ ಮಿಡಿದರು.
ಸಚಿವರಾದ ಅಂಬರೀಷ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಇ. ಕೃಷ್ಣಪ್ಪ, ಬಂಡೆಪ್ಪ ಕಾಶೆಂಪೂರ್, ಎಂ.ಸಿ. ನಾಣಯ್ಯ ಸೇರಿದಂತೆ ಹಲವಾರು ಗಣ್ಯರು, ರಾಜಕಾರಣಿಗಳು ಶಕುಂತಲಾ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಗಣ್ಯರ ಕಂಬನಿ
ಶಕುಂತಲಾ ಬಂಗಾರಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ವಿ. ದೇಶಪಾಂಡೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಂಗಾರಪ್ಪ ಬಲಗೈಆಗಿದ್ದರು
ಶಕುಂತಲಾ ಅವರು ರಾಜಕೀಯದಿಂದ ತುಂಬಾ ದೂರವಿದ್ದರಾದರೂ, ಪತಿ ಬಂಗಾರಪ್ಪ ಅವರ ರಾಜಕೀಯ ಹೋರಾಟ ಮತ್ತು ಪ್ರಯೋಗಗಳಿಗೆ ಪ್ರಮುಖ ಶಕ್ತಿಯಾಗಿದ್ದರು. ಒಂದು ರೀತಿಯಲ್ಲಿ ಬಂಗಾರಪ್ಪ ಅವರ ಬೆನ್ನೆಲುಬಾಗಿಯೂ ಇದ್ದರು. ಆದರೆ ಬಂಗಾರಪ್ಪ ಬದುಕಿವವರೆಗೂ ಬಹಿರಂಗ ರಾಜಕಾರಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಪತಿ ಬಂಗಾರಪ್ಪ ಮತ್ತು ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಪ್ರಚಾರಕ್ಕೂ ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷದಲ್ಲಿ ಅಂದರೆ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಿದ್ದಾಗ ಒಮ್ಮೆ ಪ್ರಚಾರಕ್ಕೆ ಹೋಗಿದ್ದರು. ಅದೇ ಪ್ರಥಮ. ಆನಂತರ ಅವರು ಎರಡನೇ ಬಾರಿ ಪ್ರಚಾರಕ್ಕೆ ತೆರಳಿದ್ದು ಪುತ್ರಿ ಗೀತಾ ಶಿವರಾಜ್ಕುಮಾರ್ ಈ ಬಾರಿಯ ಲೋಕಸಭಾ ಚುನಾವಣಾ ಕಣಕ್ಕಿಳಿದಾಗಲೇ. ಆದರೆ ಇತ್ತೀಚಿಗೆ ದಿನಗಳಲ್ಲಿ ಅವರು ಮಾನಸಿಕವಾಗಿ ನೊಂದಿದ್ದರು. ಅದರಲ್ಲೂ ಲೋಕಸಭಾ ಚುನಾವಣೆ ಆರಂಭದ ಸಮಯದಲ್ಲಿ ಕುಮಾರ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಜಗಳಕ್ಕಿಳಿದು, ಮಾಧ್ಯಮಗಳ ಮುಂದೆ ರಾದ್ಧಾಂತ ಮಾಡಿಕೊಂಡಿದ್ದು ಶಕುಂತಲಾ ಅವರನ್ನು ಮಾನಸಿಕವಾಗಿ ಕಂಗೆಡೆಸಿತ್ತು ಎನ್ನಲಾಗಿದೆ.
ಪ್ರಚಾರ ನಂತರ ಬಳಲಿದ್ದರು
ಮಧುಮೇಹ ಮತ್ತು ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 15 ದಿನಗಳ ಹಿಂದೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ ಪರವಾಗಿ ಪ್ರಚಾರಕ್ಕೂ ತೆರಳಿದ್ದರು. ಎರಡು ದಿನ ಅಲ್ಲೇ ಇದ್ದು ಪ್ರಚಾರವನ್ನೂ ನಡೆಸಿದ್ದರು. ಗೀತಾ ಶಿವರಾಜ್ಕುಮಾರ್ ಅವರಿಗೆ ಮತ ನೀಡಬೇಕು. ಗೀತಾ ನಿಮ್ಮ ಮಗಳು ಎಂದು ಭಾವಿಸಿ ಎಂದೂ ಶಕುಂತಲಾ ಅವರು ಮತದಾರರಲ್ಲಿ ಮನವಿ ಮಾಡಿದ್ದರು. ಆದರೆ ಚುನಾವಣಾ ಪ್ರಚಾರದ ವೇಳೆ ಅವರು ತೀರಾ ಬಳಲಿದ್ದರು. ಆನಂತರ ಇನ್ನೂ ಅಸ್ವಸ್ಥರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


