ಮುಸ್ಲಿಮರ ಸಮಸ್ಯೆಗಳಿಗೂ ಸ್ಪಂದಿಸುವೆ: ಮೋದಿ ಭರವಸೆ

ನವದೆಹಲಿ/ಪಟನಾ/ಮುಂಬೈ: ದೇಶದ ಇತರ ಪ್ರಜೆಗಳ ಸಮಸ್ಯೆಗೆ ಸ್ಪಂದಿಸುವಂತೆ ಮುಸ್ಲಿಮರ ಸಮಸ್ಯೆಗಳಿಗೂ ಸ್ಪಂದಿಸುವ ಭರವಸೆಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇಜವಾಬ್ದಾರಿ ಬೇಡ
ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೆಗೆ ಮೋದಿ ಅತೃಪ್ತರಾಗಿದ್ದಾರೆ. 'ಯಾರೂ ಕ್ಷುಲ್ಲಕ, ಬೇಜವಾಬ್ದಾರಿ ಹೇಳಿಕೆ ನೀಡುವ ಅಗತ್ಯವಿಲ್ಲ. ಅದನ್ನು ನಾನು ಒಪ್ಪುವುದಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಂಥ ಹೇಳಿಕೆ ನೀಡುವುದನ್ನು ನಾಯಕರು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ಶೀಘ್ರ ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಅಭಿವೃದ್ಧಿ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಆ ನಡುವೆ ಇಂಥ ವಿಚಾರ ಅನಗತ್ಯ ಎಂದಿದ್ದಾರೆ. ಬಿಜೆಪಿ ನಾಯಕ ಅರುಣ್ ಜೇಟ್ಲಿ ಕೂಡ ಇದೇ ರೀತಿಯ ಮನವಿ ಮಾಡಿದ್ದಾರೆ.
ಗಿರಿರಾಜ್ ಸಿಂಗ್ಗೆ ನಿಷೇಧ
ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ತೆರಳಲಿ ಎಂದು ಹೇಳಿಕೆ ನೀಡಿರುವ ಗಿರಿರಾಜ್ ಸಿಂಗ್ಗೆ ಬಿಹಾರ ಮತ್ತು ಜಾರ್ಖಂಡ್ನಲ್ಲಿ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.
ಆಯೋಗ ಪರಿಶೀಲನೆ
ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ಬಿಹಾರ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮಾಡಿರುವ ಪ್ರಚೋದನಾಕಾರಿ ಭಾಷಣಗಳ ದೃಶ್ಯಾವಳಿಯನ್ನು ಕೇಂದ್ರ ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆಯೋಗದ ಅಧಿಕಾರಿಯೊಬ್ಬರ ಪ್ರಕಾರ ಇಬ್ಬರು ನಾಯಕರು ಮೇಲ್ನೋಟಕ್ಕೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇದೇ ವೇಳೆ ತೊಗಾಡಿಯಾ ವಿರುದ್ಧ ಭಾವಾನಗರದಲ್ಲಿ ಎಫ್ಐಆರ್ ದಾಖಲಾಗಿದೆ.
ಮೋದಿ ಹೇಳಿದ್ದು
ರಾಮಜನ್ಮಭೂಮಿ, ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ಎದ್ದಿರುವ ಸಂಶಯಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಪರಿಹರಿಸುತ್ತೇನೆ.
ದೇಶದವರೆಲ್ಲ ಭಾರತೀಯರು. ಅದೇ ನನ್ನ ಆದ್ಯತೆ.
ಮುಖ್ಯಮಂತ್ರಿಯಾಗಿ 6 ಕೋಟಿ ಗುಜರಾತಿಗಳನ್ನು ಬೆಸೆಯಲು ಪ್ರಯತ್ನಿಸಿದ್ದೇನೆ. ಇದೀಗ ರಾಷ್ಟ್ರದ 125 ಕೋಟಿ ಜನರ ಬೆಸೆಯುವ ಹೊಣೆ
ಇತರರಂತೆ ಮುಸ್ಲಿಮರ ಸಮಸ್ಯೆಗಳನ್ನೂ ಆಲಿಸುವೆ. ಎಲ್ಲರ ಸಹಕಾರದಿಂದ ಅಭಿವೃದ್ದಿಯೇ ನನ್ನ ಆದ್ಯತೆ.
ಪ್ರಧಾನಿಯಾಗುವ ಉದ್ದೇಶದಿಂದ ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಬೆಂಬಲ ಕೋರಿ ಯಾವ ದೂತನನ್ನೂ ಕಳುಹಿಸಿಲ್ಲ. ಈ ಸುದ್ದಿ ಯಿಂದ ನನಗೆ ಅಚ್ಚರಿಯಾಗಿದೆ.
ನಮ್ಮನ್ನು ಯಾರೂ ಹೆದರಿಸದ ರೀತಿಯಲ್ಲಿ ಸರ್ಕಾರ ನಡೆಸಬೇಕು ಎನ್ನುವುದು ನನ್ನ ಆಸೆ.
ಯಾವುದೇ ಬೇಜವಾಬ್ದಾರಿ ಹೇಳಿಕೆಗಳಿಗೆ ನನ್ನ ಬೆಂಬಲ ಇಲ್ಲ.
ಪ್ರಚೋದನಾಕಾರಿ ಸಿ.ಡಿ. ಬಿಡುಗಡೆ
ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಸಿ.ಡಿ.ಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಅದರಲ್ಲಿ ಶಿವಸೇನೆ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಆಪಾದಿಸಲಾಗಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಮಾತನಾಡಿ, ಈ ನಾಯಕರನ್ನು ತಕ್ಷಣ ಬಂಧಿಸಬೇಕು. ಅವರು 'ರಾಜಕೀಯದಲ್ಲಿ ಕೋಮು ವಿಷ ಬಿತ್ತುತ್ತಿದ್ದಾರೆ. ಹೀಗಾಗಿ ಅವರು ಕ್ಷಮೆ ಯಾಚಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ. ನರೇಂದ್ರ ಮೋದಿ ಆಪ್ತ ಅಮಿತ್ ಶಾ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ವಿಎಚ್ಪಿ ಅಧ್ಯಕ್ಷ ಡಾ.ಪ್ರವೀಣ್ ತೊಗಾಡಿಯಾ, ಶಿವಸೇನೆ ಶಾಸಕ ರಾಮದಾಸ್ ಕದಂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಡಳಿತ ವಿರೋಧಿ ಅಲೆ ನಿಜ
ನರೇಂದ್ರ ಮೋದಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಯುಪಿಎ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಹತ್ತು ವರ್ಷಗಳ ಆಡಳಿತದಲ್ಲಿ ಯುಪಿಎ ಕೆಲ ತಪ್ಪುಗಳನ್ನು ಮಾಡಿದೆ ಎಂದಿದ್ದಾರೆ.
ರಾಹುಲ್ ಹೇಳಿದ್ದು
* ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಆಡಳಿತ ನಡೆಸಿದೆ. ಇದರಲ್ಲಿ ಕೆಲ ತಪ್ಪುಗಳಾಗಿವೆ. ಆದರೆ ಅದರ ಜತೆಗೆ ಕೆಲವೊಂದು ಅತ್ಯುತ್ತಮ ಯೋಜನೆಗಳನ್ನು ಜಾರಿ ಮಾಡಿದ್ದೇವೆ.
* ನಮ್ಮ ವಿರುದ್ಧ ಕೊಂಚ ಆಡಳಿತ ವಿರೋಧಿ ಅಲೆ ಇದೆ ಎಂಬ ವಿಚಾರವನ್ನು ನಾನು ಒಪ್ಪುತ್ತೇನೆ. ಏಕೆಂದರೆ ಹತ್ತು ವರ್ಷಗಳೆಂದರೆ ಬಹಳ ದೀರ್ಘ ಅವಧಿಯಾಗಿದೆ.
* ಉತ್ತಮ ಕೆಲಸಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಗಳ ಅನುಷ್ಠಾನ.
* ಈ ಚುನಾವಣೆಯಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಪ್ರತಿಪಕ್ಷಗಳು ದೇಶವನ್ನು ವಿಭಜಿಸುವ ರಾಜಕೀಯದಲ್ಲಿ ತೊಡಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


