ಪ್ರಧಾನ ಸುದ್ದಿ

ಅಲ್ಪಸಂಖ್ಯಾತ ಕಾಲೇಜುಗಳ ಮಾನ್ಯತೆ

ಅಲ್ಪಸಂಖ್ಯಾತ ಕಾಲೇಜುಗಳ ಮಾನ್ಯತೆ
Published On :

ಬೆಂಗಳೂರು: ವೈದ್ಯಕೀಯ ಅಲ್ಪಸಂಖ್ಯಾತ ಕಾಲೇಜುಗಳ ಮಾನ್ಯತೆ ಗೊಂದಲ ಮತ್ತಷ್ಟು ಜಟಿಲವಾಗುತ್ತ ಸಾಗಿದೆ.
ಮಾನ್ಯತೆ ರದ್ದು ಮಾಡಲು ರಾಜ್ಯ ಸರ್ಕಾರ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸುವ ಬದಲು ಹೈಕೋರ್ಟ್ ಮೊರೆ ಹೋಗಿರುವ ಅಲ್ಪಸಂಖ್ಯಾತ ಕಾಲೇಜುಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಹೈಕೋರ್ಟ್ ತಡೆಯಾಜ್ಞೆ ನೆಪದಿಂದ ಈ ಬಾರಿಯೂ ಅಲ್ಪಸಂಖ್ಯಾತ ಕಾಲೇಜುಗಳ ಮಾನ್ಯತೆ ಹಾಗೆಯೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
ನೋಟಿಸ್ ನೀಡಿದ ಬಳಿಕ ಸುಮಾರು 2 ತಿಂಗಳುಗಳ ಕಾಲ ಅವಕಾಶ ನೀಡಿದ ಸರ್ಕಾರ ಅಂತಿಮವಾಗಿ ಕೋರ್ಟ್‌ನಿಂದ ತಡೆಯಾಜ್ಞೆ ಬರುವವರೆಗೂ ಯಾವುದೆ ಕ್ರಮ ಜರುಗಿಸಲಿಲ್ಲ. ಮತ್ತೊಂದೆಡೆ ಸರ್ಕಾರದಿಂದ ನೇಮಕವಾಗಿದ್ದ ಸಮಿತಿ ಕೂಡ ಯಾವುದೇ ವರದಿ ರೂಪಿಸಲಿಲ್ಲ. ಇದರ ಪರಿಣಾಮವಾಗಿ ಮಾನ್ಯತೆ ರದ್ದು ಅಥವಾ ಪರಿಷ್ಕರಣೆ ಕುರಿತಂತೆ ಈಗ ಕೋರ್ಟ್ ತೀರ್ಪಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಸುಮಾರು 478 ಸರ್ಕಾರಿ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಂದ ದೂರವಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಾದ್ಯಂತ ಸುಮಾರು 15 ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರಿ ಸೀಟುಗಳನ್ನು ನೀಡುವಂತೆ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ರದ್ದು ಕುರಿತಂತೆ ವೈದ್ಯ ಶಿಕ್ಷಣ ಇಲಾಖೆ ಫೆ.12ರಂದು ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೆ ಮುಖ್ಯ ಕಾರ್ಯದರ್ಶಿಯವರ ಸೂಚನೆ ಮೇರೆಗೆ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಅವರು ಕೂಡ ದೀರ್ಘ ರಜೆ ಮೇಲೆ ತೆರಳಿದ್ದರು. ಈ ಮಧ್ಯದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣೆಯಲ್ಲಿ ನಿರತರಾದರೆ ಇದರ ಲಾಭವನ್ನು ಖಾಸಗಿ ಕಾಲೇಜುಗಳ ಪಡೆದುಕೊಂಡವು.
ವಾರದಲ್ಲಿ ಪ್ರತ್ಯುತ್ತರ: ಇಲಾಖೆಯ ನೋಟಿಸ್‌ಗೆ ಒಂದು ವಾರದಲ್ಲಿ ಪ್ರತ್ಯುತ್ತರ ನೀಡಬೇಕು ಎಂಬ ಷರತ್ತು ವಿಧಿಸಿದ್ದರು ಕಾಲೇಜುಗಳು ಕ್ಯಾರೇ ಎನ್ನಲಿಲ್ಲ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಕೂಡ ಯಾವುದೆ ಕ್ರಮಕೈಗೊಳ್ಳಲಿಲ್ಲ. ಎಲ್ಲ ವಿಳಂಬದ ಲಾಭ ಪಡೆದ ಖಾಸಗಿ ಕಾಲೇಜುಗಳು ಅಂತಿಮವಾಗಿ ಸರ್ಕಾರದ ನೋಟಿಸ್‌ಗೆ ತಡೆಯಾಜ್ಞೆ ಪಡೆದುಕೊಂಡಿವೆ. ಇದರ ನಿರೀಕ್ಷೆ ಮಾಡಿದ್ದ ರಾಜ್ಯ ಸರ್ಕಾರ ಕೂಡ ಕೇವಿಯಟ್ ಹಾಕುವ ಪ್ರಯತ್ನ ಮಾಡಲಿಲ್ಲ.
ವೈದ್ಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಇಲಾಖೆ ಕಾರ್ಯದರ್ಶಿಯ ಪ್ರಯತ್ನಗಳು ಸರ್ಕಾರಕ್ಕೆ ಇಷ್ಟವಾಗಿರಲಿಲ್ಲ. ಆದ್ದರಿಂದ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಸಚಿವರೇ ಕಷ್ಟಪಡುತ್ತಿದ್ದಾರೆ. ಕೋರ್ಟ್‌ನಲ್ಲಿ ಪ್ರಕರಣವಿದೆ, ತೀರ್ಪಿನ ಬಳಿಕ ಸರ್ಕಾರ ಕ್ರಮ ಜರುಗಿಸಲಿದೆ ಎಂಬ ಸಿದ್ದ ಉತ್ತರವನ್ನು ಪಾಟೀಲ್ ನೀಡುತ್ತಿದ್ದಾರೆ.
ಅಕ್ರಮಗಳ ಗೂಡಾಗಿರುವ ಇಲಾಖೆ: ಅಷ್ಟಕ್ಕೂ ಅಲ್ಪಸಂಖ್ಯಾತ ಕಾಲೇಜುಗಳ ಅಕ್ರಮಗಳು ಸರ್ಕಾರಕ್ಕೆ ತಿಳಿದಿರುವುದು ಹೊಸ ವಿಚಾರವಲ್ಲ. ಆದರೆ ವೈದ್ಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿರುವುದರಿಂದ ಪ್ರೊ. ವೆಂಕಟರಾಮಯ್ಯ ವರದಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ವರದಿ ನೀಡಿ 2 ವರ್ಷ ಕಳೆದರೂ ಈ ಬಗ್ಗೆ ಯಾವುದೇ ನೋಟಿಸ್ ಕೂಡ ನೀಡಿರಲಿಲ್ಲ. ಅಕ್ರಮಗಳನ್ನು ಮುಚ್ಚಿಕೊಳ್ಳಲು ಅವಕಾಶ ನೀಡಿ ಮತ್ತೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಸರ್ಕಾರದಲ್ಲಿ ಕೆಲವರಿಗೆ ಇದನ್ನು ಬಗೆಹರಿಸುವ ಇರಾದೆಯಿದ್ದರೂ ವೈದ್ಯಕೀಯ ಕಾಲೇಜುಗಳ ಲಾಬಿ ಇದಕ್ಕೆ ಅವಕಾಶ ನೀಡುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಂದಹಾಗೆ ಈ 15 ಕಾಲೇಜುಗಳು ನುಂಗುತ್ತಿರುವ ಸರ್ಕಾರಿ ಸೀಟುಗಳ ಪ್ರಮಾಣವು ಸರ್ಕಾರದ ಪಾಲಿನ ಒಟ್ಟು ಸೀಟಿನ ಶೇ.25ರಷ್ಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.