ಸಿಡಿಲಬ್ಬರಕ್ಕೆ ಕಂಗಾಲು; ಅಧಿಕಾರಿ ವರ್ಗಕ್ಕೆ 'ನೀತಿ' ನೆರಳು
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನೆತ್ತಿ ಸುಡುವ ಬಿಸಿಲು, ನೀರಿಗಾಗಿ ಬೊಬ್ಬಿಡುತ್ತಿದೆ ಜೀವ ಸಂಕುಲದ ಒಡಲು, ಇನ್ನೊಂದೆಡೆ ಬದುಕನ್ನೇ ಕರಕಲಾಗಿಸುತ್ತಿದೆ ಸಿಡಿಲು..!
ಮೂರು ದಿಕ್ಕುಗಳಿಂದಲೂ ಕರುನಾಡಿನ ಮೇಲೆ ಪ್ರಕೃತಿ ಮುನಿದು ಕುಳಿತಿದೆ. ಕಳೆದ ಹತ್ತು ದಿನದ ಅವಧಿಯಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ 31 ಮಂದಿ ಅಸು ನೀಗಿದ್ದಾರೆ. ಇದರ ಜತೆಗೆ ಜೀವ ಜಲ ಬತ್ತಿ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೇಸಿಗೆ ಮಳೆಯ ಸಿಡಿಲ ಹೊಡೆತಕ್ಕೆ ಜನ- ಜಾನುವಾರು ಬಲಿಯಾದ ಅತಿ ಹೆಚ್ಚಿನ ಪ್ರಮಾಣ ಇದಾಗಿದೆ.
ಆದರೆ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಮೃತ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಮಾತ್ರವಲ್ಲ ಅಗತ್ಯ ನಾಗರಿಕ ಸಮಸ್ಯೆ ಸ್ಪಂದನೆಗೆ ಸಚಿವರು ಹಾಗೂ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಲಭಿಸದೇ ಜನರು ಕಂಗಾಲಾಗಿದ್ದಾರೆ.
208547 ಹೆಕ್ಟೇರ್ ಬೆಳೆ ನಾಶ: ಇದೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ 2014ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ 208547.6 ಹೆಕ್ಟೇರ್ನಷ್ಟು ಫಸಲು ನಾಶವಾಗಿದೆ. ಬೇಸಿಗೆ ಮಳೆಯಿಂದ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ರೈತರು ತೊಂದರೆಗೀಡಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ಪರಿಹಾರ ಮತ್ತು ನೆರವನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸಿದೆ. ಇದು ರೈತ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟಾರೆಯಾಗಿ ಈ ವರ್ಷ 56 ಮಂದಿ ಮೃತಪಟ್ಟಿದ್ದಾರೆ. 803 ಜಾನುವಾರುಗಳು ಸಾವನಪ್ಪಿವೆ. 1268 ಮನೆಗಳಿಗೆ ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೆ ತೆರೆದಿರುವುದು ಕೇವಲ 2 ಪರಿಹಾರ ಕೇಂದ್ರಗಳನ್ನು ಮಾತ್ರ ತೆರೆದಿದೆ. ಲೋಕಸಭಾ ಚುನಾವಣೆಯಲ್ಲಿ ಸಚಿವರು ಹಾಗೂ ರಾಜಕಾರಣಿಗಳು ಮುಳುಗಿ ಹೋಗಿದ್ದರಿಂದ ಅಧಿಕಾರಿಗಳು ನಿತ್ಯ ಕಾಡುವ ಪ್ರಕೃತಿ ವಿಕೋಪ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಯೇ ಇಲ್ಲ.
ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ತೀವ್ರ ಮೇವು ಹಾಗೂ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದ್ದರೂ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪರಿಹಾರ ಕೇಂದ್ರ, ಗೋಶಾಲೆ, ಮೇವು ಬ್ಯಾಂಕ್ಗಳನ್ನು ಸ್ಥಾಪಿಸಿತ್ತು. ಆದರೆ ಈ ವರ್ಷ ಬಿಸಿಲು ನೆತ್ತಿ ಸುಡುತ್ತಿದೆ. ಅಂತರ್ಜಲ ಬತ್ತಿ ಹೋಗುತ್ತಿದೆ. ಜನ ನೆರವಿಗೆ ಬೊಬ್ಬೆ ಹೊಡೆಯುತ್ತಿದ್ದರೂ ಅಧಿಕಾರಶಾಹಿಗಳು ನೀತಿ ಸಂಹಿತೆಯ ನೆರಳಲ್ಲಿ ತಂಪಾಗಿದ್ದಾರೆ. ಸರ್ಕಾರ ಚುನಾವಣಾ ಫಲಿತಾಂಶದ ತಲೆಬಿಸಿಯಲ್ಲಿ ಮುಳುಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮೂರು ದಿನದಲ್ಲಿ 16 ಸಾವು: ರಾಜ್ಯದಲ್ಲಿ ಏ.17ರಂದು ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದಾಗಿ ವಾರ ಕಳೆಯುವಷ್ಟರಲ್ಲಿ ಕೇಂದ್ರ ಚುನಾವಣಾ ಆಯೋಗ ಕೆಲ ವಿಚಾರಗಳಲ್ಲಿ ನೀತಿ ಸಂಹಿತೆ ಸಡಿಲಿಸಿದೆ. ಆದರೆ ಕಳೆದ ಮೂರು ದಿನದ ಅವಧಿಯಲ್ಲಿ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಸಿಡಿಲಿನ ಹೊಡೆತಕ್ಕೆ 16 ಮಂದಿ ಅಸು ನೀಗಿದ್ದಾರೆ. 52 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. 52 ಮನೆಗಳು ಹಾನಿಗೊಂಡಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಈ ಬಗ್ಗೆ ಇನ್ನೂ ನಿಗಾ ವಹಿಸಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ಬೆಳೆ ಹಾನಿಗೆ ಪರಿಹಾರ ನೀಡುವ ವಿಚಾರದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಆಲಿಕಲ್ಲು ಮಳೆಯಿಂದ ಹಾನಿಗೊಂಡ ತೋಟಗಾರಿಕಾ ಬೆಳೆಗಳಿಗೆ ಅತಿ ಹೆಚ್ಚು ನೆರವು ನೀಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರು ನೆರವಿನ 'ಜಲ' ಹರಿಸುವ ಪ್ರಯತ್ನ ನಡೆಸಿದರೆ, ದಕ್ಷಿಣ ಕರ್ನಾಟಕ ಭಾಗದ ಸಚಿವರೊಬ್ಬರು ಎರಡು ಭಾಗಕ್ಕೆ ಸಮಾನ ಪರಿಹಾರದ 'ಕೃಷಿ'ಗೆ ಮುಂದಾಗಿದ್ದಾರೆ. ಹೀಗಾಗಿ ಪರಿಹಾರ ನೀಡುವ ವಿಚಾರದಲ್ಲೂ ಸರ್ಕಾರ ಉತ್ತರ - ದಕ್ಷಿಣ ಎಂದು ಯೋಚಿಸುವಂತಾಗಿದೆ.
ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

