ಪ್ರಧಾನ ಸುದ್ದಿ

ಮಹಿಳೆಯರ ದೂರವಾಣಿ ಕದ್ದಾಲಿಸುವ ನಾಯಕರನ್ನು ಕಿತ್ತೊಗೆಯಿರಿ: ಪ್ರಿಯಾಂಕಾ

ಮಹಿಳೆಯರ ದೂರವಾಣಿ ಕದ್ದಾಲಿಸುವ  ನಾಯಕರನ್ನು ಕಿತ್ತೊಗೆಯಿರಿ: ಪ್ರಿಯಾಂಕಾ
Published On :

ರಾಯ್‌ಬರೇಲಿ: ನೀವು ಮಹಿಳೆಯರ ಸಬಲೀಕರಣ ಮಾಡುವುದಾಗಿ ಹೇಳುತ್ತೀರಾ? ಅವರ ಸಬಲೀಕರಣ ಹೇಗೆ ಮಾಡುತ್ತೀರಾ? ಬೇಹುಗಾರಿಕೆ ಮಾಡಿಕೊಂಡೇ? ನಾಲ್ಕು ಗೋಡೆಯ ನಡುವೆ ಕೂತು ದೂರವಾಣಿ ಕದ್ದಾಲಿಸಿಕೊಂಡೇ...?
ತಮ್ಮ ಪತಿ ರಾಬರ್ಟ್‌ವಾದ್ರಾರನ್ನು ಗುರಿಯಾಗಿರಿಸಿಕೊಂಡು ಮೋದಿ ಪದೇ ಪದೆ ಮಾಡುತ್ತಿದ್ದ ಟೀಕೆಗಳಿಗೆ ಪತ್ನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ನೀಡಿದ ತಿರುಗೇಟು ಇದು.
ರಾಯ್‌ಬರೇಲಿಯಲ್ಲಿ ತಮ್ಮ ತಾಯಿ ಪರ ನಡೆಸಿದ ಪ್ರಚಾರ ವೇಳೆ ಮೋದಿ ಹೆಸರೆತ್ತದೇ ಪ್ರಿಯಾಂಕಾ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ. ಅಧಿಕಾರ ಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟಿರುವ ರಾಜಕಾರಣಿಗಳನ್ನು ತಿರಸ್ಕರಿಸಿ. ಮಹಿಳೆಯರ ದೂರವಾಣಿ ಕದ್ದಾಲಿಸುವ ರಾಜಕಾರಣಿಗಳನ್ನು ಕಿತ್ತೊಗೆಯಿರಿ ಎಂದು ಮೋದಿ ಗುರಿ ಮಾಡಿ ಟೀಕಿಸಿದ್ದಾರೆ.
ಮಂಗಳವಾರವಷ್ಟೇ ಪ್ರಿಯಾಂಕಾ ರಾಬರ್ಟ್‌ವಾದ್ರಾ ವಿರುದ್ಧದ ಆರೋಪಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವೈಯಕ್ತಿಕ ಟೀಕೆಗಳಿಂದ ನೋವಾಗಿದೆ ಎಂದಿದ್ದರು.

ಎಲ್ಲಾ ಅಧಿಕಾರವನ್ನು ಒಬ್ಬರ ಕೈಗೆ ಕೊಡುವುದು ಎಷ್ಟು ಸೂಕ್ತ? ಅಧಿಕಾರ ಜನರ ಕೈಯಲ್ಲಿರಬೇಕಲ್ಲವೇ ವೈಯಕ್ತಿಕ ವಿಚಾರಗಳ ಬಗ್ಗೆ ಟೀಕಾಪ್ರಹಾರ ಮಾಡುವ ಬದಲು ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಜನರನ್ನು ದಿಕ್ಕು ತಪ್ಪಿಸುವುದು ರಾಜಕೀಯವಲ್ಲ.

ಪ್ರಿಯಾಂಕಾ ಹೇಳಿದ್ದು
-  ಮಹಿಳಾ ಸಬಲೀಕರಣದ ಕುರಿತು ಮಾತನಾಡುವ ಮೊದಲು ಅವರ ಶಕ್ತಿಯನ್ನು ಅರಿತುಕೊಳ್ಳಬೇಕು. ಇದನ್ನು ಮಹಿಳೆಯರ ಮುಂದೆ ದೊಡ್ಡಸ್ತಿಕೆ ತೋರಿಸಿಕೊಳ್ಳದೆ ಮಾಡಬೇಕು.
-  ತಾಯಿ, ಮಗಳು, ಪತ್ನಿ, ಸಹೋದರಿಯಾಗಿದ್ದರೂ ಮಹಿಳೆಗೆ ತನ್ನದೇ ಆದ ವೈಯಕ್ತಿಕ ಗುರುತು ಇದೆ. ಇದನ್ನು ನಾವು ಗೌರವಿಸಬೇಕಿದೆ.
- ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇರುವವರು ಮೊದಲು ಅವರಿಗೆ ಮೀಸಲು ನೀಡುವ ಮೂಲಕ ಸಬಲೀಕರಣ ಮಾಡಬೇಕು.
-  ನೀವು ನಮಗೆ ಏನು ಮಾಡುತ್ತಿದ್ದೀರಿ ಎನ್ನುವುದು ಈ ಚುನಾವಣೆಯಲ್ಲಿ ಮತದಾರರ ಮುಂದೆ ಇರುವ ಅತಿ ದೊಡ್ಡ ಪ್ರಶ್ನೆ. ನೀವು ಮಾಡುತ್ತಿರುವ ರಾಜಕೀಯ ಯಾವ ರೀತಿಯದು? ದೇಶ ಕಟ್ಟುವ ನಿಟ್ಟಿನಲ್ಲಿ ನೀವು ಮಾಡುತ್ತಿರುವುದು ರಚನಾತ್ಮಕ ರಾಜಕೀಯವೇ?
-  ಒಂದು ವೇಳೆ ಎಲ್ಲ ಅಧಿಕಾರವು ಒಬ್ಬನೇ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿದ್ದರೆ ಉತ್ತಮವೇ ಅಥವಾ ಜನರ ಕೈಯಲ್ಲಿ ಅಧಿಕಾರ ಇದ್ದರೆ ಒಳಿತೇ?
-  ಇತ್ತೀಚಿನ ದಿನಗಳಲ್ಲಿ ನೀವು ಅನೇಕ ವಿಚಾರಗಳ ಕುರಿತು ಟೀವಿಯಲ್ಲಿ ಚರ್ಚೆ ನಡೆಯುವುದನ್ನು ನೋಡುತ್ತಿದ್ದೀರಿ. ವೈಯಕ್ತಿಕ ದಾಳಿಗಳನ್ನು ನಡೆಸಲಾಗುತ್ತದೆ. ಆದರೆ, ಇದು ರಾಜಕೀಯವಲ್ಲ. ಇದು ಜನರನ್ನು ಹಾದಿ ತಪ್ಪಿಸುವ ಕೆಲಸ. ಚರ್ಚೆಗಳನ್ನು ನೈಜ ವಿಚಾರದ ಕುರಿತಾಗಿ ಮಾಡಬೇಕು. ಜನರ ಸಮಸ್ಯೆಗಳೇನು ಎನ್ನುವ ಕುರಿತು ಚರ್ಚೆಗಳಾಗಬೇಕು.
-  ಪ್ರತಿಪಕ್ಷಗಳು ಭ್ರಷ್ಟಾಚಾರವನ್ನು ಕೊನೆಗಾಣಿಸುವುದಾಗಿ ಹೇಳುತ್ತವೆ. ಆದರೆ, ಹೇಗೆಂದು ವಿವರಿಸುವುದಿಲ್ಲ. ಕಾಂಗ್ರೆಸ್ ಮಾತ್ರ ಆರ್‌ಟಿಐ ಅನ್ನು ಅನುಷ್ಠಾನಗೊಳಿಸುವ ಮೂಲಕ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಪ್ರಯತ್ನಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.