ಕಬೀರ್ ಶೂಟೌಟ್ ತನಿಖೆ ದಿಕ್ಕುತಪ್ಪಿಸಲು ಸರ್ಕಾರ ಯತ್ನ
ಬೆಂಗಳೂರು: ತನಿಕೋಡಿನಲ್ಲಿ ನಡೆದ ಕಬೀರ್ ಶೂಟೌಟ್ ಪ್ರಕರಣದ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮುನಿರಾಜು ಗೌಡ ಆರೋಪಿಸಿದ್ದಾರೆ.
ಗುಲ್ಬರ್ಗದಲ್ಲಿ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಹತ್ಯೆಯಾದಾಗ ರಾಜ್ಯ ಸರ್ಕಾರ ಪ್ರಕರಣವನ್ನು ನಿಭಾಯಿಸಿದ ರೀತಿ ಹಾಗೂ ಈಗ ಕಬೀರ್ ಪ್ರಕರಣದ ತನಿಖೆ ಸಾಗುತ್ತಿರುವ ರೀತಿ ಬಗ್ಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಕಾನೂನುಬಾಹಿರ ಚಟುವಟಿಕೆಯಲ್ಲಿ ಕಬೀರ್ ಭಾಗಿಯಾಗಿದ್ದಾರೆ ಹಾಗೂ ಗೋ ಕಳ್ಳ ಸಾಗಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರೇ ಮಾಹಿತಿ ನೀಡಿದ್ದಾರೆ. ಆದರೆ ಪ್ರಕರಣದ ದಾರಿ ತಪ್ಪಿಸಿ ಪೊಲೀಸರ ನೈತಿಕ ಸ್ಥೈರ್ಯ ಹಾಳುಮಾಡುವ ಕೆಲಸ ನಡೆದಿದೆ. ಅನಾವಶ್ಯವಾಗಿ ಪ್ರಕರಣಕ್ಕೆ ಮೃತ ವ್ಯಕ್ತಿಯ ಕೋಮಿನ ಬಣ್ಣ ನೀಡಲಾಗುತ್ತಿದೆ ಎಂದು ಮುನಿರಾಜುಗೌಡ ಅಸಮಧಾನ ವ್ಯಕ್ತಪಡಿಸಿದರು.
ಪ್ರಾಮಾಣಿಕ ಅಧಿಕಾರಿಯ ಸಾವಿನ ಬಗೆಗಿನ ತನಿಖೆಗೆ ಆಸಕ್ತಿ ತೋರದ ಸರ್ಕಾರ ಈಗ ವಿಶೇಷ ಕಾಳಜಿ ತೋರುತ್ತಿದೆ. ನಕ್ಸಲ್ ನಿಗ್ರಹ ಪಡೆಯ ಪೊಲೀಸರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಗೆಲುವಿನ ವಿಶ್ವಾಸ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಾವು ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿರುವ ಮುನಿರಾಜುಗೌಡ, ಆನೇಕಲ್, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅತಿ ಹೆಚ್ಚು ಮತ ಬಂದಿವೆ ಎಂದು ಹೇಳಿದರು.
ರಾಜ್ಯಾದ್ಯಂತ ಶೇ.9ರಷ್ಟು ಅಧಿಕ ಮತದನಾವಾಗಿದೆ. ಮತದಾನದಲ್ಲಿ ಉತ್ಸಾಹ ತೋರುವ ಮೂಲಕ ಸರ್ಕಾರ ಬದಲಾವಣೆಗೆ ಜನರು ತಮ್ಮ ಆಸಕ್ತಿ ತೋರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯು ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಕಬೀರ್ ಹತ್ಯೆ: ಕೊಲೆ ಪ್ರಕರಣ ದಾಖಲು
ಚಿಕ್ಕಮಗಳೂರು: ತನಿಕೋಡು ಚೆಕ್ಪೋಸ್ಟ್ ಬಳಿ ಕಬೀರ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಎಎನ್ಎಫ್ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಉಮರ್ ಫಾರುಕ್ ಅವರು ನೀಡಿರುವ ದೂರಿನನ್ವಯ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಕಬೀರ್ ಎಂಬುವವರನ್ನು ಎಎನ್ಎಫ್ ಸಿಬ್ಬಂದಿ ಕೊಲೆ ಮಾಡಿರುವ ಜತೆಗೆ ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಉಮರ್ ಫಾರುಕ್ ನೀಡಿರುವ ದೂರಿನನ್ವಯ ನವೀನ್ ನಾಯಕ್ ವಿರುದ್ಧ 302 ಕಲಂ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
'ಕಬೀರ್ ಕುಟುಂಬಕ್ಕೆ ಸಹಾಯಾರ್ಥ ನಿಧಿ'
ಮಂಗಳೂರು: ತನಿಕೋಡು ಎಎನ್ಎಫ್ ಶೂಟೌಟ್ನಲ್ಲಿ ಮೃತಪಟ್ಟ ಕಬೀರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ದನ ಕಳವು ಮಾಡುವವರಿಗೂ ಶಿಕ್ಷೆ ಆಗಬೇಕು ಎಂದು ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ. ಮೃತದೇಹ ನೋಡಲು ಹೋದವರ ಮೇಲೆ ಹಲ್ಲೆ ನಡೆಸಿದ ಐದು ಮಂದಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಗುಂಡಿಕ್ಕಿದ ಎಎನ್ಎಫ್ ಸಿಬ್ಬಂದಿ ನವೀನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗೆ ಶಿಕ್ಷೆಯಾಗಬೇಕು. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ ನ್ಯಾಯ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

