ಅತಂತ್ರ ಸ್ಥಿತಿಯಲ್ಲಿ ಕುದುರೆಮುಖ ಕೇಂದ್ರೀಯ ವಿದ್ಯಾಲಯ
ಚಿಕ್ಕಮಗಳೂರು: ಕುದುರೆಮುಖ ಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.
ಮುಚ್ಚಿರುವ ಶಾಲೆಯ ಪುನಾರಾರಂಭಕ್ಕೆ ಬೇಕಾದ ನೆರವು ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜಪ್ಪ, ಮೂಡಿಗೆರೆ ತಹಸೀಲ್ದಾರ್ ಶಾರದಾಂಬ ಹಾಗೂ ಇತರೆ ಅಧಿಕಾರಿಗಳ ತಂಡ ಶುಕ್ರವಾರ ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಶಾಲೆಯ ಪುನಾರಾರಂಭಕ್ಕೆ ಮುಂದೆ ಬಂದಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆ ಕೆಲವು ಷರತ್ತುಗಳನ್ನು ಸರ್ಕಾರಕ್ಕೆ ವಿಧಿಸಿದೆ. ಈ ಷರತ್ತುಗಳಿಗೆ ಒಪ್ಪಿಗೆ ಸೂಚಿಸುವುದು ಸುಲಭದ ಕೆಲಸವೇನಲ್ಲ.
ಆಗಿದ್ದೇನು? ಕುದುರೆಮಖ ಅದಿರು ಕಂಪನಿ ಗಣಿಗಾರಿಕೆ ಹಾಗೂ ಅದಿರು ಉತ್ಪಾದನೆ ಸೇರಿದಂತೆ ಇತರೆ ಉಪಯೋಗಕ್ಕಾಗಿ ರಾಜ್ಯ ಸರ್ಕಾರದಿಂದ 2332 ಎಕರೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಈ ಜಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ 1977ರಲ್ಲಿ ಬಿಟ್ಟುಕೊಂಟಿತ್ತು. ಶಾಲೆಯ ಕಟ್ಟಡವನ್ನು ಕಂಪನಿಯವರೇ ನಿರ್ಮಾಣ ಮಾಡಿದ್ದರು. ಅಲ್ಲಿನ ಶಿಕ್ಷಕರಿಗೆ ವೇತನವನ್ನು ಸಹ ನೀಡಿತ್ತು. ಈ ಎರಡು ಸವಲತ್ತುಗಳನ್ನು ನೀಡಿದ್ದರಿಂದ ಕೇಂದ್ರೀಯ ವಿದ್ಯಾಲಯ ಸಂಘಟನ್ ಈ ಶಾಲೆಯನ್ನು ನಡೆಸುತ್ತಿತ್ತು.
ಸುಪ್ರೀಂಕೋರ್ಟ್ನ ಆದೇಶದನ್ವಯ 2005ರ ಡಿಸೆಂಬರ್ 31 ರಂದು ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತು. ನಂತರ ಕಂಪನಿ ಬೇರೆಡೆಯಿಂದ ಕಚ್ಚಾ ಅದಿರು ತಂದು ಉತ್ಪಾದನೆ ಮಾಡುವ ಪ್ರಯತ್ನ ಮಾಡಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಸಕ್ತಿ ತೋರದೆ ಇರುವುದರಿಂದ ಕುದುರೆಮುಖ ಅದಿರು ಕಂಪನಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದ ಎಲ್ಲಾ ಭೂಮಿಯನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿತು.
ಆರ್ಥಿಕ ಮುಗ್ಗಟ್ಟು: ಆಗ ಕೇಂದ್ರೀಯ ವಿದ್ಯಾಲಯದ ಎರಡು ಎಕರೆ ಜಾಗವೂ ರಾಜ್ಯ ಸರ್ಕಾರದ ವಶಕ್ಕೆ ಹೋಯಿತು. ಹಾಗಿದ್ದರೂ ಕೂಡ ಕೆಲವು ವರ್ಷಗಳಿಂದ ಶಾಲೆಯನ್ನು ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ಶಾಲೆ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಕುದುರೆಮುಖ ಅದಿರು ಕಂಪನಿ ಹೇಳಿದ್ದರಿಂದ ಕೇಂದ್ರೀಯ ವಿದ್ಯಾಲಯ ಸಂಘಟನ್ ಈ ಶಾಲೆಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿತು.
ಇಲ್ಲಿನ ಶಾಲೆಯನ್ನು ಮುಚ್ಚಿವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಶಾಲೆಯನ್ನು ಮುಂದುವರೆಸಿಕೊಂಡು ಹೋಗಲು ಕ್ರಮ ವಹಿಸುವಂತೆ ಹೈಕೋರ್ಟ್ ಹೇಳಿದೆ. ಈ ನಡುವೆ ಇಲ್ಲಿನ ಶಿಕ್ಷಕರನ್ನು ಮಂಗಳೂರು ಹಾಗೂ ತುಮಕೂರಿನ ಕೇಂದ್ರೀಯ ವಿದ್ಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರ ಏ.22ರಂದು ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಪತ್ರವನ್ನು ಬರೆದು ಪ್ರಸಕ್ತ ಸಾಲಿನಲ್ಲಿ ಶಾಲೆಯನ್ನು ಮುಂದುವರಿಸಿಕೊಂಡು ಹೋಗಲು ಕೋರಿದೆ.
ಗೊಂದಲ: ರಾಜ್ಯ ಸರ್ಕಾರ ಏ.22ರಂದು ಕೇಂದ್ರೀಯ ವಿದ್ಯಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿರುವ ಪ್ರಕಾರ, ಈ ವಿದ್ಯಾಲಯ ಸಿಬಿಎಸ್ಇ ಪಠ್ಯಕ್ರಮವನ್ನು ಹೊಂದಿದೆ. ಕರ್ನಾಟಕ ರಾಜ್ಯ ಶಿಕ್ಷಣ ಕಾಯ್ದೆ ಪ್ರಕಾರ ಸಿಬಿಎಸ್ಇ ಪಠ್ಯಕ್ರಮದಲ್ಲಿ ಶಿಕ್ಷಣ ನೀಡಲು ಅವಕಾಶ ಇಲ್ಲ. ಕೇಂದ್ರೀಯ ವಿದ್ಯಾಲಯ ಸಂಘಟನ್ ಈ ಶಾಲೆಯನ್ನು ಪೌರವಲಯದ ಅಡಿಯಲ್ಲಿ ಮುಂದುವರೆಸಲು ಮುಂದೆ ಬಂದಿದ್ದು, ಶಾಲೆ ಇರುವ ಜಾಗ ಮತ್ತು ಕಟ್ಟಡವನ್ನು ಹಸ್ತಾಂತರ ಮಾಡುವಂತೆ ಕೇಳಿದೆ.
ಇಲ್ಲಿ ಸ್ಪಷ್ಟವಾದ ಅಂಶವೆಂದರೆ, ಈ ಶಾಲೆಯನ್ನು ರಾಜ್ಯ ಸರ್ಕಾರದಿಂದ ನಡೆಸಲು ಶಿಕ್ಷಣ ಕಾಯ್ದೆಯ ಪ್ರಕಾರ ಅವಕಾಶ ಇಲ್ಲ. ಇನ್ನು ಈ ಶಾಲೆಯ ಜಾಗ ರಾಜ್ಯ ಸರ್ಕಾರಕ್ಕೆ ಸೇರಿದ್ದು, ಇದು ಹಸ್ತಾಂತರ ಮಾಡುವುದು ತಕ್ಷಣಕ್ಕೆ ಆಗುವ ಕೆಲಸವೇನಲ್ಲ, ಕಾರಣ, ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ, ಅಧಿಸೂಚಿತ ಪ್ರದೇಶ. ಇದು ಹಸ್ತಾಂತರ ಮಾಡಲು ಅರಣ್ಯ ಕಾಯ್ದೆ ಅಡ್ಡಿಯಾಗಲಿದೆ. ಅಂದರೆ, ಶಾಲೆಯ ಜಾಗ ಮತ್ತು ಕಟ್ಟಡ ಹಸ್ತಾಂತರವಾಗದ ಹೊರತು ಕೇಂದ್ರೀಯ ವಿದ್ಯಾಲಯ ಸಂಘಟನ್ ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಮುಂದುವರೆಸಲು ಸಾಧ್ಯವಿಲ್ಲ. ಜಾಗ ಮತ್ತು ಕಟ್ಟಡ ಹಸ್ತಾಂತರ ಮುಂದಿನ ವರ್ಷಗಳಲ್ಲಿ ಶಾಲೆ ಮುಂದುವರೆಸಲು ಅಡ್ಡಿಯಾಗುವ ಸಾಧ್ಯತೆ ಇದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

