ಬರಗೆಟ್ಟ ನಾಡಲ್ಲಿ ಬೆಳಕು ಕಂಡಿತು, ಕುಡಿವ ನೀರಿಗಾಗಿ 276 ಕೋಟಿ ಬಿಡುಗಡೆಗೆ ಸರ್ಕಾರ ಆದೇಶಿಸಿತು

ಕನ್ನಡಪ್ರಭ ವಾರ್ತೆ , ಬೆಂಗಳೂರು , ಏ. 26
ರಾಜ್ಯವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿಗೆ ತಕ್ಷಣ ಪ್ರತಿಕ್ರಿಯಿಸಿರುವ ಸರ್ಕಾರ, ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಿದೆ.
ರಾಜ್ಯದ 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕಾಣಿಸಿಕೊಂಡಿರುವ ಜಲಕ್ಷಾಮದ ಬಗ್ಗೆ 'ಕನ್ನಡಪ್ರಭ'ದಲ್ಲಿ ಶನಿವಾರ ಪ್ರಕಟವಾದ ವಿಶೇಷ ಲೇಖನಮಾಲೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಕ್ಷಣ ಸ್ಪಂದಿಸಿದ್ದು, ಸಮಸ್ಯೆ ನಿವಾರಣೆಗೆ ಜಿಲ್ಲಾವಾರು ಕಂಟ್ರೋಲ್ ರೂಂ ತೆರೆಯುವಂತೆ ಆದೇಶ ನೀಡಿದ್ದಾರೆ. ಜತೆಗೆ ಪ್ರತಿ ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ ನಿಯೋಜಿಸಿದ್ದಾರೆ.
ಅಷ್ಟು ಮಾತ್ರವಲ್ಲ, ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸರ್ಕಾರ 176 ಕೋಟಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯಿಂದ ಹೆಚ್ಚುವರಿ ರು. 100 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ 'ಕನ್ನಡಪ್ರಭ'ದ ಜತೆ ಮಾತನಾಡಿದ ಅವರು, 'ರಾಜ್ಯವನ್ನು ಕಾಡುತ್ತಿರುವ ಸಮಸ್ಯೆ ಬಗ್ಗೆ ಪತ್ರಿಕೆ ಪ್ರಕಟಿಸಿದ ಅಧ್ಯಯನ ವರದಿ ಸ್ತುತ್ಯರ್ಹ. ಬೆಳಗ್ಗೆ 6.45ಕ್ಕೆ ಕನ್ನಡಪ್ರಭ ಪತ್ರಿಕೆ ಓದುತ್ತಿದ್ದಂತೆ, ದೆಹಲಿಯಲ್ಲಿದ್ದರೂ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವುದಕ್ಕೆ ಆದೇಶ ನೀಡಿದ್ದೇನೆ' ಎಂದು ಹೇಳಿದರು.
ರಾಜ್ಯದ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಇದುವರೆಗೆ ಬಿಡುಗಡೆಯಾದ ಅಷ್ಟು ಹಣವೂ ಸದ್ಬಳಕೆಯಾಗಿದೆ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಸಮಸ್ಯೆ ಇನ್ನೂ ನಮ್ಮ ಕಣ್ಣ ಮುಂದೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಉತ್ತರದಾಯಿಗಳಾಗಿ ನಿಲ್ಲಿಸಲು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಪರಿಹಾರ ಕಾರ್ಯ ತ್ವರಿತಗೊಳಿಸಲು ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯುವಂತೆ ಆದೇಶ ನೀಡಿದ್ದೇನೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಕಂಡಲ್ಲಿ ತಕ್ಷಣ ಬೋರ್ವೆಲ್ ಹಾಕುವಂತೆ ಸೂಚನೆ ನೀಡಿದ್ದೇನೆ. ಅಂತರ್ಜಲ ಬತ್ತಿಹೋದ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ವಿವರಿಸಿದರು.
ಈಗಾಗಲೇ ಬಿಡುಗಡೆಯಾದ 176 ಕೋಟಿಯನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ. ಜತೆಗೆ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ ರು. 100 ಕೋಟಿ ಬಿಡುಗಡೆ ಮಾಡಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಖುದ್ದು ದೂರವಾಣಿ ಮೂಲಕ ಮಾತನಾಡಿದ್ದೇನೆ. ಜಲಸಮಸ್ಯೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಯಾವುದೇ ವರದಿಗೆ ತಕ್ಷಣ ಸ್ಪಂದಿಸುವಂತೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನೀರು ಸಮಸ್ಯೆ ಪರಿಹಾರಕ್ಕೆ ಸರ್ಕಾರ ವಿಶೇಷ ಆಸ್ತೆ ವಹಿಸಿರುವುದು ಮಾತ್ರವಲ್ಲ, ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಿದೆ. ಸರ್ಕಾರದ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದಿದ್ದಾರೆ.
ಬಿಡುಗಡೆಯಾದ ಹಣಬಾಗಲಕೋಟೆ 676.55
ಬೆಂ.ಗ್ರಾಮಾಂತರ 324.65
ಬೆಂಗಳೂರು ನಗರ 238.05
ಬೆಳಗಾವಿ 1574.18
ಬಳ್ಳಾರಿ 937.97
ಬೀದರ್ 690.70
ಬಿಜಾಪುರ 973.97
ಚಾಮರಾಜನಗರ 551.47
ಚಿಕ್ಕಬಳ್ಳಾಪುರ 316.75
ಚಿಕ್ಕಮಗಳೂರು 620.35
ಚಿತ್ರದುರ್ಗ 874. 46
ದಕ್ಷಿಣ ಕನ್ನಡ 260.59
ದಾವಣಗೆರೆ 711.71
ಧಾರವಾಡ 394.70
ಗದಗ 414.02
ಗುಲ್ಬರ್ಗ 1054.38
ಹಾಸನ 717.99
ಹಾವೇರಿ 578.13
ಕೊಡಗು 128.33
ಕೋಲಾರ 328.63
ಕೊಪ್ಪಳ 625.92
ಮಂಡ್ಯ 359.49
ಮೈಸೂರು 853.02
ರಾಯಚೂರು 912.12
ರಾಮನಗರ 393.02
ಶಿವಮೊಗ್ಗ 301.76
ತುಮಕೂರು 1131.05
ಉಡುಪಿ 190.48
ಉತ್ತರಕನ್ನಡ 226.42
ಯಾದಗಿರಿ 299.45
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


