ಶ್ರೀಮಠದ ಹಿರಿಯರ ವರ್ತನೆಗೆ ಬೇಸತ್ತು ಆಪ್ತ ಕಾರ್ಯದರ್ಶಿ ಹೊರಕ್ಕೆ?

ಕನ್ನಡಪ್ರಭ ವಾರ್ತೆ , ರಾಯಚೂರು , ಏ.26
ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಅವರು ಅಸಮಾಧಾನಗೊಂಡಿದ್ದಾರೆಯೇ?, ಅವರು ಮಠದ ಆಡಳಿತದಿಂದ ಹೊರಬಂದಿದ್ದಾರೆಯೇ?, ಹೌದು ಎನ್ನುತ್ತವೆ ಮೂಲಗಳು.
ಆಡಳಿತ ನಿರ್ವಹಣೆಯಲ್ಲಿ ತಮ್ಮನ್ನು ಶ್ರೀಮಠದ ಹಿರಿಯರು ಕಡೆಗಣಿಸಿದ್ದರಿಂದ ಬೇಸತ್ತ ಅವರು, ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀಮಠಕ್ಕೆ ಶ್ರೀಸುಯತೀಂದ್ರತೀರ್ಥರು ಪೀಠಾಧಿಪತಿ ಆದಾಗಿನಿಂದಲೂ ಹೆಚ್ಚುವರಿ ಆಪ್ತ ಕಾರ್ಯದರ್ಶಿಯಾಗಿ ಸುಯಮೀಂದ್ರಾಚಾರ್ಯ ಕಾರ್ಯನಿರ್ವಹಿಸುತ್ತಿದ್ದರು. 2009ರ ಪ್ರವಾಹೋತ್ತರದಲ್ಲಿ ಮಂತ್ರಾಲಯವನ್ನು ಪುನಃ ನಿರ್ಮಾಣ ಮಾಡುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆದರೆ ಅವರನ್ನು ಸದ್ಯ ಎಲ್ಲ ರೀತಿಯಿಂದ ಕಡೆಗಣಿಸಲಾಗಿದೆ ಎಂಬ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಶ್ರೀಮಠದ ಒಟ್ಟಾರೆ ಕಾರ್ಯ ನಿರ್ವಹಣೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಕುತೂಹಲ: ಮಾರ್ಚ್ 21ರಂದು ರಾತ್ರಿ ಆಗಿನ ಪೀಠಾಧಿಪತಿ ಶ್ರೀಸುಯತೀಂದ್ರತೀರ್ಥರು ಹರಿಪಾದೈಕ್ಯರಾದ ನಂತರದಲ್ಲಿ ಮುಂದಿನ ಪೀಠಾಧಿಪತಿಗಳ ಆಪ್ತಕಾರ್ಯದರ್ಶಿ ಯಾರಾಗುವರೆಂಬ ಬಗ್ಗೆ ಭಕ್ತರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ ಹಾಲಿ ಪೀಠಾಧಿಪತಿಯಾದ ಶ್ರೀಸುಬುಧೇಂದ್ರತೀರ್ಥರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಸುಯಮೀಂದ್ರಾಚಾರ್ಯರನ್ನೇ ಮುಂದುವರೆಸಿ ನೇಮಕಾತಿ ಆದೇಶ ಹಸ್ತಾಂತರಿಸಿದ್ದರು.
ಆ ಮೂಲಕ ಅನುಮಾನಗಳಿಗೆ ತೆರೆ ಎಳೆಯಲಾಗಿತ್ತು. ಶ್ರೀಮಠದ ಆಡಳಿತ ನಿರ್ವಹಣೆ ವೇಳೆ ಸುಯಮೀಂದ್ರಾಚಾರ್ಯರಿಗೆ ಪ್ರಾಧಾನ್ಯತೆ ದೊರೆತಿಲ್ಲ ಎಂದೇ ಹೇಳಲಾಗಿದೆ.
ಇನ್ನೋವಾ ವಾಪಸ್
ಹಾಲಿ ಪೀಠಾಧಿಪತಿಗಳು ಸುಯಮೀಂದ್ರಾಚಾರ್ಯರನ್ನು ಆಪ್ತಕಾರ್ಯದರ್ಶಿಯಾಗಿ ನೇಮಿಸಿದ್ದರೂ, ಶ್ರೀಮಠದ ಕೆಲವು ಹಿರಿಯರು ಆಪ್ತ ಕಾರ್ಯದರ್ಶಿ ಗಮನಕ್ಕೆ ಬಾರದಂತೆಯೇ ಸಿಬ್ಬಂದಿ ವರ್ಗಾವಣೆ ಸೇರಿದಂತೆ ವಿವಿಧ ಹಂತದ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಈ ಕಾರಣಕ್ಕೆ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಶ್ರೀಮಠವು ಒದಗಿಸಿದ್ದ ಇನ್ನೋವಾ ಕಾರನ್ನು ಸುಯಮೀಂದ್ರಾಚಾರ್ಯರು ಮರಳಿಸಿದ್ದಾರೆ. ಸುಯಮೀಂದ್ರಾಚಾರ್ಯರಿಗೆ ಆಪ್ತರಾಗಿದ್ದವರನ್ನು ಮಂತ್ರಾಲಯದಿಂದ ಹೊರಗಿನ ಪ್ರದೇಶಕ್ಕೆ ವರ್ಗಾಯಿಸಿರುವುದೇ ಒಟ್ಟಾರೆ ವಿವಾದದ ಹಿಂದಿನ ತಿರುಳು ಎನ್ನಲಾಗುತ್ತಿದೆ.
ಮೇ ನಲ್ಲಿ ಭೇಟಿ
ಮೇ ತಿಂಗಳಿನಲ್ಲಿ ನಡೆಯಲಿರುವ ಈ ಹಿಂದಿನ ಪೀಠಾಧಿಪತಿ ಶ್ರೀಸುಯತೀಂದ್ರತೀರ್ಥರ ಬೃಂದಾವನ ನಿರ್ಮಾಣ ಸಂಬಂಧಿ ಕಳಾಕರ್ಷಣ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲು ಮಾತ್ರ ಮಂತ್ರಾಲಯಕ್ಕೆ ಭೇಟಿ ನೀಡುವುದಾಗಿ ಮಠದ ಹಿರಿಯರಿಗೆ ತಿಳಿಸಿ, ವಾಹನ ಮರಳಿಸಿದ್ದಾರೆಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


