ಪ್ರಧಾನ ಸುದ್ದಿ

12 ಮತಗಟ್ಟೆಗಳಲ್ಲಿ ಮರು ಮತದಾನ

12 ಮತಗಟ್ಟೆಗಳಲ್ಲಿ ಮರು ಮತದಾನ
Published On :

ಕ.ಪ್ರ.ವಾರ್ತೆ ,  ಬೆಂಗಳೂರು ,  ಏ. 26
ತಾಂತ್ರಿಕ ಕಾರಣ ಹಿನ್ನೆಲೆಯಲ್ಲಿ ರಾಜ್ಯದ 9 ಲೋಕಸಭಾ ಕ್ಷೇತ್ರಗಳ 12 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
ಹಾವೇರಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಶಿವಮೊಗ್ಗ, ಹಾಸನ, ತುಮಕೂರು ಲೋಕಸಭಾ ಕ್ಷೇತ್ರದ 12 ಮತಗಟ್ಟೆಗಳಲ್ಲಿ  ಏಪ್ರಿಲ್ 29ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ7 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಮತದಾನ ನಡೆಯುತ್ತದೋ ಆ ಜಿಲ್ಲೆಯಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 57, ಬಾಗಲಕೋಟೆಯ ಜಮಖಂಡಿಯ ಮತಗಟ್ಟೆ ಸಂಖ್ಯೆ 27, ಬಾಗಲಕೋಟೆಯ ಮತಗಟ್ಟೆ ಸಂಖ್ಯೆ 7, ಬಿಜಾಪುರದ ಸಿಂಧಗಿಯ ಮತಗಟ್ಟೆ ಸಂಖ್ಯೆ 216, ಗುಲ್ಬರ್ಗದ ಸೇಡಂನ ಮತಗಟ್ಟೆ ಸಂಖ್ಯೆ 165, ರಾಯಚೂರಿನ ಶಹಾಪುರದ ಮತಗಟ್ಟೆ ಸಂಖ್ಯೆ 35, ಯಾದಗಿರಿಯ ಮತಗಟ್ಟೆ ಸಂಖ್ಯೆ 112, ಬೀದರ್ ಲೋಕಸಭಾ ಕ್ಷೇತ್ರದ ಬೀದರ್ ವಿಧಾನಸಭಾ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 20, 201, ಶಿವಮೊಗ್ಗದ ಬೈಂದೂರಿನ ಮತಗಟ್ಟೆ ಸಂಖ್ಯೆ 174, ಹಾಸನದ ಅರಸಿಕೆರೆಯ ಮತಗಟ್ಟೆ ಸಂಖ್ಯೆ 72, ತುಮಕೂರಿನ ತುರುವೆಕೆರೆಯ ಮತಗಟ್ಟೆ ಸಂಖ್ಯೆ 8ರಲ್ಲಿ ಮರುಮತದಾನ ನಡೆಯಲಿದೆ.
ಈ ಪೈಕಿ 11 ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮರು ಮತದಾನ ನಡೆಸುವಂತೆ ಆಯೋಗ ಸೂಚನೆ ನೀಡಿದೆ. ಆದರೆ ತುರುವೆಕೆರೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತಯಂತ್ರವನ್ನು ಕಾನೂನು ಬಾಹಿರವಾಗಿ ನಿರ್ವಹಣೆ ಮಾಡಿದ್ದರು. ಹೀಗಾಗಿ ಅಲ್ಲಿನ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಿ ಮರುಮತದಾನ ನಡೆಸಲಾಗುತ್ತದೆ ಎಂದರು.
ಹಿರಿಯ ಅಧಿಕಾರಿಯಿಂದ ತನಿಖೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆಯೋಗ ನಿಷ್ಪಕ್ಷಪಾತ ತನಿಖೆ ನಡೆಸಲಿದೆ. ಈ ಸಂಬಂಧ ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಹಕ್ಕು ಚಲಾಯಿಸಿದವರು ಹೆಚ್ಚು
ಬೆಂಗಳೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಗಿಂತ ಸರಾಸರಿ ಮತದಾನ ಕಡಿಮೆಯಾದರೂ ಮತದಾನದ ಹಕ್ಕು ಚಲಾಯಿಸಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮತಚಲಾಯಿಸದೇ ಕರ್ತವ್ಯ ಬಾಹಿರರಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದ ಬೆಂಗಳೂರಿಗರ ನೆರವಿಗೆ ಈಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಬಂದಿದ್ದು, ನಗರದಲ್ಲಿ ಸರಾಸರಿ ಮತದಾನ ಪ್ರಮಾಣ ಇಳಿಕೆಯಾದರೂ ಮತಚಲಾಯಿಸಿದವರ ಸಂಖ್ಯೆ ಹೆಚ್ಚಿದೆ ಎಂಬ ಅಂಕಿ-ಸಂಖ್ಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.57.64ರಷ್ಟು ಮತದಾನವಾಗಿತ್ತು. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶೇ.55.99ರಷ್ಟಾಗಿದೆ. ಆದರೆ ಚಲಾವಣೆಯಾದ ಮತಗಳ ಸಂಖ್ಯೆ ಹೆಚ್ಚಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರವ್ಯಾಪ್ತಿಯ 24 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 32,77,772 ರಷ್ಟು ಮಂದಿ ಹಕ್ಕು ಚಲಾಯಿಸಿದ್ದರು. ಆದರೆ ಈ ಬಾರಿ 35,43,791 ಮಂದಿ ಹಕ್ಕು ಚಲಾಯಿಸಿದ್ದಾರೆ. 2,66,019 ರಷ್ಟು ಮಂದಿ ಹೆಚ್ಚುವರಿಯಾಗಿ ಮತ ಚಲಾಯಿಸಿದ್ದಾರೆ ಎಂದರು.
ಮೃತಪಟ್ಟಿದ್ದರೂ ಕೃಷ್ಣಪ್ಪ ಅವರಿಗೆ ಮತ್ತೆ ಮತ
ಹೃದಯಾಘಾತದಿಂದ ಮೃತಪಟ್ಟಿದ್ದರೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಅವರ ಪರ ಮತ್ತೊಮ್ಮೆ ಮತ ಚಲಾವಣೆಯಾಗಲಿದೆ. ನಿಯಮ ಪ್ರಕಾರ ಒಮ್ಮೆ ಮತದಾನ ಆರಂಭಗೊಂಡ ನಂತರ ಮತಎಣಿಕೆ ಮುಗಿಯುವವರೆಗೂ ಅವರೇ ಅಭ್ಯರ್ಥಿಯಾಗಿರುತ್ತಾರೆ. ಮತದಾನ ಆರಂಭವಾಗಿ ಅರ್ಧಗಂಟೆ ಕಳೆದ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿ ಮೃತಪಟ್ಟರೂ ಚುನಾವಣೆ ರದ್ದುಗೊಳಿಸಲು ಸಾಧ್ಯವಿಲ್ಲ. ಅವರನ್ನೇ ಅಭ್ಯರ್ಥಿ ಎಂದು ಪರಿಗಣಿಸಬೇಕಾಗುತ್ತದೆ. ಈ ನಿಯಮದ ಆಧಾರದ ಮೇಲೆ ತುರುವೆಕೆರೆಯಲ್ಲಿ ಮರುಮತದಾನ ನಡೆದರೂ ಕೃಷ್ಣಪ್ಪನವರೇ ಜೆಡಿಎಸ್ ಅಭ್ಯರ್ಥಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.