ತಗ್ಗದ ಮಳೆ: ಮತ್ತಿಬ್ಬರು ಬಲಿ
ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಕಾಲಿಕ ಮಳೆ ಅಬ್ಬರ ಮುಂದುವರಿದಿದ್ದು, ಉಪ್ಪಿನಂಗಡಿ ಬಳಿ ಸಿಡಿಲಿಗೆ ವ್ಯಕ್ತಿ ಹಾಗೂ ಹಿರಿಯೂರಿನ ಪಿಲಾಜನಹಳ್ಳಿಯಲ್ಲಿ ಗುಡಿಸಲು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಭಾರಿ ಗಾಳಿ, ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೆಲವೆಡೆ ಸಂಚಾರಕ್ಕೆ ವ್ಯತ್ಯಯವಾಗಿದೆ.
ಉಪ್ಪಿನಂಗಡಿ ವ್ಯಾಪ್ತಿಯ ಆಲಂಕಾರು ಸಮೀಪದ ಪೆರಾಬೆ ಗ್ರಾಮದ ಕೋಚಟ್ಟೆ ದಿ. ಹುಕ್ರ ಮುಗೇರರ ಪುತ್ರ ಗುರುವ (43) ಶನಿವಾರ ತಡರಾತ್ರಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಹಿರಿಯೂರು ತಾಲೂಕು ಪಿಲಾಜನಹಳ್ಳಿಯಲ್ಲಿ ಗುಡಿಸಲಿಗೆ ನೀರು ನುಗ್ಗಿದ್ದರಿಂದ ಕುಸಿದು ಬಿದ್ದು ಲಕ್ಷ್ಮಿದೇವಿ (45) ಅಸುನೀಗಿದ್ದಾರೆ.
ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿಯಡ್ಕ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಸಾಂತಪ್ಪ (55) ಹಾಗೂ ಪುತ್ರರಾದ ವಿಶ್ವನಾಥ (25), ಮೋಹನ್ (23) ಗಾಯಗೊಂಡಿದ್ದಾರೆ. ಕೊಕ್ಕಡ ಗ್ರಾಮದ ಮಡೆಂಜೋಡಿ ಎಂಬಲ್ಲಿ ಬೀಸಿದ ಭಾರಿ ಗಾಳಿಗೆ ಮತ್ತಡಿ ಎಂಬವರ ಕೊಟ್ಟಿಗೆಯ ನೂರಾರು ಹೆಂಚುಗಳು ಹಾರಿ ಹೋಗಿದೆ. ಸಿಡಿಲಿನ ಅಬ್ಬರಕ್ಕೆ ಮನೆಯ ವಿದ್ಯುತ್ ಲೈನ್ನ ಮೀಟರ್ ಬೋರ್ಡ್ ಸಮೇತ ಕಿತ್ತು ಪುಡಿಯಾಗಿದೆ. ಗೋಳಿತೊಟ್ಟು ಗ್ರಾಮದ ಕೊಣಾಲು ಎಂಬಲ್ಲಿಯೂ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಲಿಂಗಸ್ಗೂರು ತಾಲೂಕಿನ ಅಡವಿಬಾವಿ-ರಾಂಪುರ ಬಳಿ ಸಿಡಿಲಿಗೆ 8 ಕುರಿಗಳು ಮೃತಪಟ್ಟಿವೆ. ತರೀಕೆರೆ ತಾಲೂಕಿನ ಹೊಸಮನೆ ಗೇಟ್, ವಡ್ಡರದಿಬ್ಬ, ಬಸವನಹಳ್ಳಿ ಸೇರಿದಂತೆ ವಿವಿಧೆಡೆ ಭಾರಿ ಮಳೆ, ಗಾಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಅಡಕೆ, ತೆಂಗು ಬೆಳೆ ನೆಲಕಚ್ಚಿದೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಸಾಗರ ಮತ್ತು ಶಿವಮೊಗ್ಗ ತಾಲೂಕಿನಾದ್ಯಂತ ಕೂಡ ಭಾರಿ ಮಳೆಯಾಗಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯ ಲ್ಯಾವಿಗೆರೆ ಗ್ರಾಮದವನಜಾಕ್ಷಮ್ಮ ಹಾಗೂ ಪುತ್ರಿ ದಿವ್ಯಾ ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಯಚೂರು, ಲಿಂಗಸ್ಗೂರು, ಹಾಸನ, ಅರಸೀಕೆರೆ, ಸಕಲೇಶಪುರ, ಗುಂಡ್ಲುಪೇಟೆ, ಸುಳ್ಯ, ಪುತ್ತೂರು ಸುತ್ತಮುತ್ತಲಿನ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. ಹಲವೆಡೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

