ಪ್ರಧಾನ ಸುದ್ದಿ

ಜಿಲ್ಲಾ ಹಿತರಕ್ಷಣಾ ಸಂಘದ ಪದಾಧಿಕಾರಿಗಳ ಕಿರುಕುಳ

Published On :

ವಿಶೇಷ ವರದಿ
ಧಾರವಾಡ:
ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆ ಮಾಡಬೇಕಾದ ಹಿತರಕ್ಷಣಾ ಸಂಘವೇ ಅವರಿಗೆ ಕಿರುಕುಳ ನೀಡುತ್ತಿದೆ!
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕಿಯರ ಫೆಡರೇಷನ್ ಧಾರವಾಡ ಜಿಲ್ಲಾ ಸಂಘದ ಕೆಲ ಪದಾಧಿಕಾರಿಗಳು ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ಕಾರಣಗಳಿಗಾಗಿ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಂಘದ ಕೆಲ ಪದಾಧಿಕಾರಿಗಳು ತಾವು ಹೇಳಿದಂತೆ ಕೇಳುವ ಕಾರ್ಯಕರ್ತೆಯರನ್ನು ಹೊರತುಪಡಿಸಿ ಉಳಿದವರನ್ನು ಸುಖಾಸುಮ್ಮನೆ ಕಾಡುತ್ತಿದ್ದಾರೆಂದು ನೊಂದ ಅಂಗನವಾಡಿ ಕಾರ್ಯಕರ್ತೆಯರು ಗೋಳು ತೋಡಿಕೊಂಡಿದ್ದಾರೆ.
ಏನೇನು ಕಿರಿಕಿರಿ?: ಪ್ರತಿ ವರ್ಷ ಜಿಲ್ಲಾ ಸಂಘದ ಬಲವರ್ಧನೆಗೆ ಪ್ರತಿಯೊಬ್ಬ ಕಾರ್ಯಕರ್ತೆಯರು ವಂತಿಗೆ ನೀಡಬೇಕು. ಆದರೆ ನಿಗದಿತ ವಂತಿಗೆಗಿಂತ ದುಪ್ಪಟ್ಟು ಹಣವನ್ನು ಕಾರ್ಯಕರ್ತೆಯರಿಂದ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಪಾವತಿ ಕೇಳಿದರೆ ಅಥವಾ ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಕೆಟ್ಟದಾಗಿ ಬೈಯುತ್ತಾರೆ. ಪ್ರತಿ ಬಾರಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿಯಾದಾಗ ಹೆಚ್ಚಳವಾದ ಸಂಬಳವನ್ನು ಸಂಘದ ಕೆಲ ಪದಾಧಿಕಾರಿಗಳಿಗೆ ನೀಡದಿದ್ದರೆ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಿಂದ ಒತ್ತಡ ಹೇರಿಸುತ್ತಾರೆ.
ಹೆಂಡತಿ ಮಕ್ಕಳನ್ನು ತೊರೆದು ನಾವು ಮುಂದೆ ನಿಂತು ಹೋರಾಟ ಮಾಡಿದ್ದೇವೆ. ಹೆಚ್ಚುವರಿ ಸಂಬಳವನ್ನು ನಮಗೆ ಕೊಡಿ ಎಂದು ಬಹಿರಂಗವಾಗಿಯೇ ಬೇಡಿಕೆ ಇಡುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಳ ಹಂತದ ಅಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಹೊಂದಿರುವ ಜಿಲ್ಲಾ ಸಂಘದ ಕೆಲ ಪದಾಧಿಕಾರಿಗಳು ಹಣ ಪಡೆದುಕೊಂಡು ತಮಗೆ ಬೇಕಾದವರಿಗೆ ತಿಂಗಳಾನುಗಟ್ಟಲೇ ರಜೆಯನ್ನೂ ಕೊಡಿಸುತ್ತಾರೆ. ಹಣ ನೀಡದವರಿಗೆ ಒಂದೂ ದಿನ ರಜೆ ಪಡೆದುಕೊಳ್ಳಲು ಆಗದಂತೆ ನೋಡಿಕೊಳ್ಳುತ್ತಾರೆ. ಪ್ರತಿ ವರ್ಷ ನೂರಾರು ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ 1500 ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆಂದು ಅಂಗನವಾಡಿ ಕಾರ್ಯಕರ್ತೆಯರೊಬ್ಬರು ತಮ್ಮ ಸಂಕಟವನ್ನು ಹೇಳಿಕೊಂಡರು. ಇದಕ್ಕಿಂತ ಬೇಸರದ ಸಂಗತಿ ಎಂದರೆ, ಸರ್ಕಾರದಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಒದಗಿಸುವ  ಆಹಾರ ಧಾನ್ಯಗಳು ಸಂಘದ ಕೆಲ ಪದಾಧಿಕಾರಿಗಳ ಕುತಂತ್ರದಿಂದ ನಿತ್ಯ ಅವರ ಮನೆ ಮುಟ್ಟುತ್ತಿದೆ. ಹೆಚ್ಚಾದ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಸಾಗಿಸುತ್ತಾರೆಂದು ಆರೋಪಿಸಿರುವ ಕಾರ್ಯಕರ್ತೆಯರು, ಇತ್ತೀಚೆಗೆ ಇದೇ ರೀತಿ ಆಹಾರ ಧಾನ್ಯವನ್ನು ಆಟೋ ರಿಕ್ಷಾ ಮೂಲಕ ಮಾರುಕಟ್ಟೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಆಟೋ ಮುಗುಚಿ ಬಿದ್ದ ಘಟನೆಯೂ ಧಾರವಾಡದಲ್ಲಿ ನಡೆದಿದ್ದು ಈ ಮಾತಿಗೆ ಪುಷ್ಟಿ ನೀಡುವಂತಿದೆ.
ತಮಗಾದ ಅನ್ಯಾಯವನ್ನು ಎಲ್ಲಿಯೋ ಹೇಳಿಕೊಳ್ಳದಂತೆ ಬೆದರಿಕೆ ಹಾಕಲಾಗಿದ್ದು, ಒಂದು ವೇಳೆ ಹೇಳಿದರೆ ಕೆಲಸ ಹೋಗುತ್ತದೆ ಎಂಬ ಭಯವೂ ಅನ್ಯಾಯಕ್ಕೆ ಒಳಗಾದ ಕಾರ್ಯಕರ್ತೆಯರಿಗೆ ಇದೆ. ಒಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯ ರಕ್ಷಣೆಗೋಸ್ಕರ ಕೆಲಸ ಮಾಡಬೇಕಿದ್ದ ಸಂಘವೇ ಈ ರೀತಿ ಅವರನ್ನು ಮುಕ್ಕಿ ತಿಂದರೆ ಅವರು ನೆಮ್ಮದಿಯಿಂದ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬೇಕು ಎಂಬ ಪ್ರಶ್ನೆ ಉದ್ಭವಗೊಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.
ಧಾರವಾಡದಲ್ಲಿ ಜಿಲ್ಲೆಯಲ್ಲಿ ಸುಮಾರು 7000 ಅಂಗನವಾಡಿ ಕಾರ್ಯಕರ್ತೆಯರಿದ್ದು, ಶೇ. 50ರಷ್ಟು ಜನ ಇನ್ನೂ ವಂತಿಗೆ ಹಣ ನೀಡಿಲ್ಲ. ಆದರೂ ಸಂಘ ಅವರಿಗೆ ವಂತಿಗೆ ಹಣ ನೀಡುವಂತೆ ಒತ್ತಾಯ ಮಾಡಿಲ್ಲ. ಹೋರಾಟ ಹಾಗೂ ಚಳವಳಿಯನ್ನು ಅವರ ಹಿತರಕ್ಷಣೆಗಾಗಿಯೇ ಮಾಡುತ್ತೇವೆ. ಅದಕ್ಕೆಲ್ಲ ಒಂದಿಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಕಾರ್ಯಕರ್ತರೂ ಅರಿಯಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಘದ ಪದಾಧಿಕಾರಿಗಳಿಂದ ಕಿರುಕುಳ ಉಂಟಾಗಿದ್ದರೆ, ತಮಗೆ ಪತ್ರ ಬರೆದು ತಿಳಿಸಿದ್ದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಟಿ ಎಚ್.ಕೆ. ರಾಮಾಂಜನಪ್ಪ
ಅಧ್ಯಕ್ಷರು, ರಾಜ್ಯ ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕಿಯರ ಫೆಡರೇಷನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.