ನಮ್ಮ ತರಕಾರಿ, ಮಾವಿನ ಹಣ್ಣಿಗೆ ಹುಳ ಬಿಟ್ಟ ಐರೋಪ್ಯರು

ಲಂಡನ್: ಭಾರತದಿಂದ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿದ್ದ 'ಆಲ್ಫೋನ್ಸೋ' ಮಾವಿಗೆ ಒಕ್ಕೂಟ ನಿಷೇಧ ಹೇರಿದೆ. ಹಣ್ಣುಗಳ ರಾಜ ಹಾಗೂ 4 ಬಗೆಯ ತರಕಾರಿಗಳ ಆಮದಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದ್ದು, ಮೇ 1ರಿಂದಲೇ ನಿಷೇಧ ಅನ್ವಯ. ಹುಳು, ಕೀಟನಾಶಕದ ಅಂಶ ಪತ್ತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಐರೋಪ್ಯ ಒಕ್ಕೂಟ ತಿಳಿಸಿದೆ. ಇದು ಭಾರತಕ್ಕಲ್ಲದೇ, ಬ್ರಿಟನ್ನ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಲಿದೆ. ಐರೋಪ್ಯ ಒಕ್ಕೂಟದ ನಿಷೇಧ ನಿರ್ಧಾರವನ್ನು ಅಲ್ಲಿರುವ ಭಾರತೀಯ ಸಮುದಾಯ, ಸಚಿವರು ಹಾಗೂ ವ್ಯಾಪಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಭಾರತದಿಂದ ಆಮದು ಮಾಡಿಕೊಳ್ಳಲಾದ 207 ಸರಕುಗಳಲ್ಲಿ ಹುಳ, ಕೀಟನಾಶಕ ಅಂಶ ಪತ್ತೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಸಿ ಆರೋಗ್ಯಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿ ಆಲ್ಫೋನ್ಸೋ ಮತ್ತು ಗುಳ್ಳ ಬದನೆ, ಕೆಸುವಿನ ಗೆಡ್ಡೆ, ಹಾಗಲಕಾಯಿ ಹಾಗೂ ಪಡುವಲಕಾಯಿಗಳಿಗೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿದೆ. ಮೇ 1ರಿಂದಲೇ ನಿಷೇಧ ಜಾರಿಯಾಗಲಿದ್ದು 2015ರ ಡಿ.31ರವರೆಗೆ ಮುಂದುವರಿಯಲಿದೆ. ಆದರೆ, ಈ ಅವಧಿಯೊಳಗೆ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವ ಸಾಧ್ಯತೆಯೂ ಇದೆ ಎಂದು ಒಕ್ಕೂಟ ತಿಳಿಸಿದೆ.
ದುಷ್ಪರಿಣಾಮ: ನಿಷೇಧಿಸಲ್ಪಟ್ಟ ಹಣ್ಣು, ತರಕಾರಿಗಳು ಭಾರತದಿಂದ ಆಮದಾಗುವ ಒಟ್ಟು ಹಣ್ಣು, ತರಕಾರಿಗಳ ಪ್ರಮಾಣಕ್ಕೆ ಹೋಲಿಸಿದರೆ ಶೇ.5ಕ್ಕಿಂತ ಕಡಿಮೆ. ಆದರೂ ಈ ಉತ್ಪನ್ನಗಳಿಂದ ಬರುವ ಹುಳಗಳು ಐರೋಪ್ಯ ಒಕ್ಕೂಟದ ನೆಲವನ್ನು ಸೇರಿ ಅಲ್ಲಿನ ಕೃಷಿ ಹಾಗೂ ಉತ್ಪಾದನೆಯ ಮೇಲೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ. ಹಾಗಾಗಿ ಇವುಗಳಿಗೆ ನಿಷೇಧ ಹೇರುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಸ್ಥಾಯಿ ಸಮಿತಿ ಬಂದಿದೆ.
ಮೂರ್ಖತನದ ಪರಮಾವಧಿ. ಶತಮಾನಗಳಿಂದ ಮಾವು ತಿನ್ನುತ್ತಿದ್ದೇವೆ. ಆರೋಗ್ಯಕ್ಕೆ ಯಾವ ಹಾನಿಯೂ ಆಗಿಲ್ಲ. ನಿಷೇಧವನ್ನು ಖಂಡಿಸುತ್ತೇವೆ.
- ಕೇತ್ ವಾಜ್,
ಭಾರತ ಮೂಲದ ಬ್ರಿಟನ್ ಸಂಸದ
ಭಾರತ ಮತ್ತು ಯುರೋಪ್ ಪರಿಸರ ಸಚಿವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ವ್ಯಾಪಾರ ಪುನಾರಂಭಿಸುತ್ತೇವೆ.
- ಲಾರ್ಡ್ ಡೆ ಮೌಲೇ,
ಬ್ರಿಟನ್ ಪರಿಸರ ಸಚಿವ
ಯಾವುದಕ್ಕೆ ನಿಷೇಧ?
ಆಲ್ಫೋನ್ಸೋ ಮಾವು, ಗುಳ್ಳ ಬದನೆ, ಕೆಸುವಿನ ಗೆಡ್ಡೆ, ಹಾಗಲಕಾಯಿ ಮತ್ತು ಪಡುವಲಕಾಯಿ
ಮೇ 1ರಿಂದ ನಿಷೇಧ?
2015 ಡಿ.1ರೊಳಗೆ ನಿಷೇಧ
ಪುನರ್ಪರಿಶೀಲನೆ
ನಿಷೇಧವೇಕೆ?
ಭಾರತದಿಂದ ರಫ್ತಾದ
207 ಸರಕುಗಳಲ್ಲಿದ್ದ ಮಾವು , ತರಕಾರಿಗಳಲ್ಲಿ ಹಾನಿಕಾರಕ ಕೀಟ, ಹುಳಗಳು, ಕೀಟನಾಶಕದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ
1.60 ಕೋಟಿ
ಬ್ರಿಟನ್ಗೆ ರಫ್ತಾಗುವ ಮಾವುಗಳ ಸಂಖ್ಯೆ
ಪ್ರತಿ ಮಾವಿನ ತೂಕ 150-300 ಗ್ರಾಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


