ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಕ್ಕಿ ದಿಗಿಲು ಬೀಳಿಸುವ ಯಂತ್ರ
ಹುಬ್ಬಳ್ಳಿ: ವಿಮಾನ ಇಳಿಯುವಾಗ ಹಾಗೂ ಟೇಕಾಫ್ ವೇಳೆ ರನ್ ವೇನಲ್ಲಿ ಹಕ್ಕಿಗಳಿಂದಾಗುತ್ತಿರುವ ತೊಂದರೆಗಳನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಕ್ಕಿಗಳನ್ನು ದಿಗಿಲು ಬೀಳಿಸುವ ಯಂತ್ರವನ್ನು ನಿಲ್ದಾಣದಲ್ಲಿ ಜೋಡಿಸಲು ನಿರ್ಧರಿಸಿದೆ.
ಹತ್ತು ದಿನಗಳ ಹಿಂದೆ ಮುಂಬೈ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಿಳಿಯುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಹಕ್ಕಿಯೊಂದು ತಗುಲಿ ವಿಮಾನದ ಮುಂಭಾಗಕ್ಕೆ ಧಕ್ಕೆಯಾಗಿತ್ತು. ಪೈಲಟ್ ಜಾಗರೂಕತೆ ವಹಿಸಿದ್ದರಿಂದ, 77 ಪ್ರಯಾಣಿಕರೂ ಸುರಕ್ಷಿತವಾಗಿ ಇಳಿಯುವಂತಾಯಿತು. ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನ ನಿಲ್ದಾಣಾಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಕ್ಕಿಗಳನ್ನು ದಿಗಿಲು ಬೀಳಿಸುವ ಯಂತ್ರವನ್ನು ನಿಲ್ದಾಣದಲ್ಲಿ ಕಾಯಂ ಆಗಿ ಜೋಡಿಸಬೇಕೆಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ. ಬಸವರಾಜ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ಯಂತ್ರ ಜೋಡಿಸಲು ಪ್ರಾಧಿಕಾರ ಅನುಮತಿ ನೀಡಿದೆ. ಇದೀಗ ಯಂತ್ರಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ.
ತಾತ್ಕಾಲಿಕ ಪರಿಹಾರ
ಯಂತ್ರ ಜೋಡಣೆಗೆ ಇನ್ನೂ ಕಾಲಾವಕಾಶವಿದೆ. ಅಲ್ಲಿಯ ವರೆಗೂ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ನಿಲ್ದಾಣದ ಅಧಿಕಾರಿ ವರ್ಗ ಮುಂದಾಗಿದೆ. ಹಕ್ಕಿಗಳನ್ನು ಓಡಿಸಲು ಆರು ಜನರ ತಂಡ ರಚಿಸಲಾಗಿದೆ. ವಿಮಾನ ಇಳಿಯುವಾಗ ಹಾಗೂ ಹಾರುವಾಗ ಈ ತಂಡ ಹಕ್ಕಿಗಳು ಕಂಡಲ್ಲಿ ವಿಶೇಷ ವಿನ್ಯಾಸದ ಬಂದೂಕಿನಿಂದ ಗುಂಡು ಹಾರಿಸುತ್ತದೆ. ಇದು ಹೆಚ್ಚು ಬೆಳಕು ಸೃಷ್ಟಿಸುವುದರಿಂದ ಹಕ್ಕಿಗಳು ಹೆದರಿ, ಚದುರುತ್ತವೆ. ಹಕ್ಕಿಗಳಿಂದ ಸ್ಪೈಸ್ ಜೆಟ್ ವಿಮಾನಕ್ಕಾದ ತೊಂದರೆಯಿಂದಾದರೂ ಹುಬ್ಬಳ್ಳಿ ವಿಮಾನ ನಿಲ್ದಾಣ ಎಚ್ಚೆತ್ತುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗೆ ದಾರಿ ಕಲ್ಪಿಸಿಕೊಟ್ಟಿದೆ ಎಂದೇ ಹೇಳಬಹುದು.
ಯಂತ್ರ ಹೇಗೆ ಕೆಲಸ ಮಾಡುತ್ತೆ...?
ಹಕ್ಕಿಗಳಿಗೆ ಪ್ರಾಣ ಹಾನಿ ಮಾಡದೆ, ಈ ಯಂತ್ರ ಅವುಗಳನ್ನು ದಿಗಿಲು ಬೀಳಿಸುತ್ತದೆ. ವಿಮಾನ ಇಳಿಯುವ ಹಾಗೂ ಟೇಕಾಫ್ಗೂ ಒಂದು ತಾಸು ಮುಂಚೆ ಯಂತ್ರ ಚಾಲೂ ಮಾಡಬೇಕಾಗುತ್ತದೆ. ಯಂತ್ರ ವಿದ್ಯುಚ್ಛಕ್ತಿಯ ಸಹಾಯದಿಂದ ಶಬ್ದ ಮಾಡುತ್ತದೆ. ಇದರಿಂದ ಹೊರಡುವ ತರಂಗಗಳು ಹಕ್ಕಿಗಳನ್ನು ಬೆಚ್ಚಿ ಬೀಳಿಸುತ್ತದೆ. ಪರಿಣಾಮ ಹಕ್ಕಿಗಳು ಚದುರಿ ಹೋಗುತ್ತವೆ. ಈಗ ಅಳವಡಿಸಲು ಯೋಜಿಸಿರುವ ಯಂತ್ರ ರನ್ ವೇಯ ಸುಮಾರು 7 ಸಾವಿರ ಮೀ. ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವಷ್ಟು ಕ್ಷಮತೆ ಹೊಂದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ 5400 ಮೀ. ರನ್ ವೇ ಹೊಂದಿದೆ. ಆದರೆ, ಭವಿಷ್ಯದಲ್ಲಿ ರನ್ ವೇಯನ್ನು 8200 ಮೀ.ಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ, ಹೆಚ್ಚು ಸಾಮರ್ಥ್ಯದ ಯಂತ್ರವನ್ನೇ ಅಳವಡಿಸಲು ನಿರ್ಧರಿಸಲಾಗಿದೆ.
ಹಕ್ಕಿಗಳನ್ನು ದಿಗಿಲು ಬೀಳಿಸುವ ಯಂತ್ರ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇಷ್ಟರಲ್ಲಿಯೇ ಪ್ರಕ್ರಿಯೆ ಮುಗಿಯಲಿದೆ. ಯಂತ್ರ ಜೋಡಿಸಿದ ಬಳಿಕ ಹಕ್ಕಿಗಳಿಂದ ತೊಂದರೆಯಾಗದು. ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಬಹುದು.
- ಕೆ. ಎಂ. ಬಸವರಾಜ
ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

