ಬೇಸಿಗೆ ಶಿಬಿರದ ಕಿರುಕುಳ!

ಗದಗ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೆಕಿದ್ದ ಬೇಸಿಗೆ ಶಿಬಿರವೇ ಚಿಣ್ಣ ಮುಗ್ಧ ಮನಸ್ಸನ್ನು ಮುರುಟಿಸಿದೆ. 'ಕಿರಿ'ಕುಳಶ್ರೀ(ರ್ಯಾಗಿಂಗ್)ದ ಪೆಡಂಭೂತ ಮಕ್ಕಳ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿದೆ. ಮಕ್ಕಳ ಚಿಲಿಪಿಲಿ, ಕಲರವ, ಆಟ, ಜಿಗಿದಾಟ, ಕೇಕೇ-ಹೇಶಾರವಗಳಿರಬೇಕಿದ್ದ ಜಾಗದಲ್ಲಿ ಭಯದ ಬರೆ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ವಸತಿ ಶಾಲೆಯಲ್ಲಿ ಏ. 10ರಿಂದ 30ರವರೆಗೆ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಶಿಬಿರಕ್ಕೆ ವಸತಿ ಶಾಲೆಯ ಜತೆಗೆ ಬೇರೆ ಶಾಲೆಗಳ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿತ್ತು. ಅಂತೆಯೆ ಕೊಪ್ಪಳ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಐವರು ಮಕ್ಕಳು ಪಾಲ್ಗೊಂಡಿದ್ದರು. ಈ ಮಕ್ಕಳ ಮೇಲೆ ಪಿಯುಸಿ ಹಾಗೂ ಅದಕ್ಕಿಂತ ಕೆಳ ತರಗತಿಯವರು ಅಮಾನವೀಯ 'ಕಿರಿ'ಕುಳ ಎಸಗಿದ್ದಾರೆ.
ಅಣ್ಣಿಗೇರಿಯ ಎಂಟು ವರ್ಷದ ಪುಟಾಣಿಯನ್ನು ಈಗ ನೋಡಿದರೆ ಕರುಳು ಚುರ್ ಎನ್ನುತ್ತದೆ. ಆತನ ಮೈಮೇಲೆ ಬಾಸುಂಡೆಗಳೆದ್ದಿವೆ. ರಾತ್ರಿಯೆಲ್ಲ ಆತನಿಗೆ ಹಿರಿಯ ವಿದ್ಯಾರ್ಥಿಗಳು ನಿದ್ದೆ ಮಾಡಲೂ ಬಿಡಲಿಲ್ಲವಂತೆ. 'ಕಿರಿ'ಕುಳ ನೀಡಿದ ಎಲ್ಲರೂ ಶರಾವತಿ ಎನ್ನುವ ಕೊಠಡಿಯಲ್ಲಿದ್ದರು ಎಂದು ಈ ಬಾಲಕ ಅಳುತ್ತಾ 'ಕನ್ನಡಪ್ರಭ'ಕ್ಕೆ ವಿವರಿಸಿದ್ದಾನೆ.
ಮುದುಡಿತು ಮನಸ್ಸು: ಇದು ಒಬ್ಬ ವಿದ್ಯಾರ್ಥಿಯ ನೋವಲ್ಲ. ಈ 'ಕಿರಿ'ಕುಳದಿಂದ ಹಲವು ಎಳೆಯ ಮನಸ್ಸುಗಳು ನೊಂದಿವೆ. ಈಗ ಯಾರನ್ನೂ ನೋಡಿದರೂ ಅವರ ಕಣ್ಣುಗಳಲ್ಲಿ ಭಯ ಇಣುಕುತ್ತದೆ. ಇದನ್ನು ಪಾಲಕರಿಗೆ ತಿಳಿಸದಂತೆ ಬೆದರಿಸಲಾಗಿದೆ. ಹೀಗಾಗಿ, ಸುಮಾರು 20 ದಿನ ಎಳೆಯ ಮಕ್ಕಳು ಹಿಂಸೆ ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ಸೋಮವಾರ ಈ ವಿದ್ಯಾರ್ಥಿಯ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ 'ಕಿರಿ'ಕುಳ ಬಹಿರಂಗವಾಗಿದೆ.
ವಾರ್ಡನ್ ಇಲ್ಲವೆ?
ಎಳೆಯ ಮಕ್ಕಳ ಕೋಣೆ ಪಕ್ಕದಲ್ಲೇ ಇರುತ್ತಿದ್ದ ವಾರ್ಡನ್ ಸಂತೋಷ್ಗೆ ಹಿರಿಯ ವಿದ್ಯಾರ್ಥಿಗಳ ವಿಕೃತಿ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಪಾಲಕರು ಹೋದಾಗೆಲ್ಲ ಮಕ್ಕಳ ಕಾಳಜಿ ಬಗ್ಗೆ ಉದ್ದುದ್ದ ಮಾತನಾಡುತ್ತಿದ್ದ ಸಂತೋಷ್, ತಮ್ಮ ಪಕ್ಕದ ಕೋಣೆಯಲ್ಲೆ ಇಂಥ ಅಮಾನವೀಯ ಘಟನೆ ನಿರಂತರ 20 ದಿನ ನಡೆದರೂ ಏಕೆ ಸುಮ್ಮನಿದ್ದರು ಎಂದು ಪಾಲಕರು ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ.
ನೋಟಿಸ್ ಜಾರಿ
ಬೇಸಿಗೆ ರಜಾ ಶಿಬಿರದ ವೇಳೆ ಶಿಬಿರಾರ್ಥಿಗಳ ನಡುವೆ ರ್ಯಾಗಿಂಗ್ನಂತಹ ಪ್ರಕರಣ ನಡೆದಿಲ್ಲ. ಮಕ್ಕಳ ನಡುವೆ ಚೇಷ್ಟೆ, ತಮಾಷೆ ನಡೆದಿದ್ದು ನಿಜ. ಪೋಷಕರೊಬ್ಬರು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ, ತಮ್ಮ ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಎಲ್ಲ ಶಿಬಿರಾರ್ಥಿಗಳನ್ನು ಕರೆದು ವಿಚಾರಣೆ ಮಾಡಲಾಗಿದೆ. ಅಲ್ಲದೇ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಉಸ್ತುವಾರಿ ಅಧಿಕಾರಿ ಮತ್ತು ಮುಖ್ಯ ಗಾರ್ಡ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
- ಎ.ಎನ್. ಮೋದಗಿ, ಪ್ರಾಂಶುಪಾಲ, ಕ್ರೀಡಾ ಪದವಿಪೂರ್ಣ ಮಹಾವಿದ್ಯಾಲಯ
ನಾವ್ ಏನ್ ಮಾಡಿದ್ರೂ ಹೊಡಿತಿದ್ರು... ಬೈತಿದ್ರು... ಕೆಟ್ಟ ಕೆಟ್ಟ ಶಬ್ದಾ ಕಲ್ಕೋರಿಲೇ ಮಕ್ಳಾ ಅಂತಿದ್ರು.... ನಾವು ಒಲ್ಲ್ಯಾ ಅಂದ್ವಿ ಅಂದ್ರ ಬಡಿತಿದ್ರು.. ನನ್ಗ ಎಲ್ಲ ಕಡೆ ಒದ್ದಾರೆ... ಕೈ ಮ್ಯಾಲೆ ನೋಡಿ ಹ್ಯಾಂಗ್ ರಕ್ತಾ ಮಂಜ್ ಗಟ್ಟೈತಿ.
- ನೊಂದ ಮಗು
ಏನೇನು ಕಿರುಕಳ
- ಕಮೋಡ್ನಲ್ಲಿ ಅದ್ದಿದ ವಸ್ತ್ರ ಮೈ ಮೇಲೆ ಹಾಕುವುದು.
- ಮಕ್ಕಳ ಮೇಲೆ ರಾತ್ರಿ ಮೂತ್ರ ವಿಸರ್ಜನೆ ಮಾಡುವುದು
- ಜೇನು ನೊಣ ಅರ್ಧ ಸಾಯಿಸಿ ಬಾಯಿಗಿಡುವುದು
- ಟಾಯ್ಲೆಟ್ ದೀಪ ಆರಿಸಿ, ರಾತ್ರಿ ಕೂಡಿ ಹಾಕೋದು
- ಎಲ್ಲರೆದುರು ಬೆತ್ತಲೆಗೊಳಿಸಿ ಅಪಹಾಸ್ಯ ಮಾಡೋದು
- ಚಡ್ಡಿಯೊಳಗೆ ಇರುವೆ ಬಿಟ್ಟು ತಮಾಷೆ ನೋಡೋದು
ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಮಕ್ಕಳಿಗೆ ಆಘಾತವಾಗಿದೆ. ಬೇರಾವ ಮಗುವಿಗೂ ತೊಂದರೆಯಾಗಬಾರದು. ಕೂಡಲೇ ಆಡಳಿತ ಮಂಡಳಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
-ಪಾಲಕರು
ರ್ಯಾಂಗಿಗ್: ಈ ಪದಕ್ಕೆ ಕನ್ನಡ ಪರ್ಯಾಯ ಪದವಾಗಿ ಕನ್ನಡಪ್ರಭದಲ್ಲಿ ಇಂದಿನಿಂದ 'ಕಿರಿ'ಕುಳ ಎಂಬ ಪದಬಳಸುತ್ತಿದ್ದೇವೆ. ಕಿರಿಯರಿಗೆ ನೀಡುವ ಕಿರುಕುಳವಾದ್ದರಿಂದ 'ಕಿರಿ'ಕುಳ ಪ್ರಯೋಗ ಸೂಕ್ತವಾಗಬಹುದು.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


