ಪ್ರಧಾನ ಸುದ್ದಿ

ನಿಮ್ಮ ಜಿಗರಿ ದೋಸ್ತ್ ಅಂತ ಸುಮ್ಮನಿದ್ದೀರಾ ಸಿದ್ದರಾಮಣ್ಣ?

Published On :

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ,
ನಿಮ್ಮ ಸಂಪುಟದ ಸಚಿವರೊಬ್ಬರು ಮನೆ ನವೀಕರಣಕ್ಕೆ 2ಕೋಟಿ ಖರ್ಚು ಮಾಡಿದರೂ ನೀವು ಸುಮ್ಮನಿರುವುದೇಕೆ? ಸಚಿವರೊಬ್ಬರು ಸಾರ್ವಜನಿಕರ ಹಣವನ್ನು ಈ ಪರಿಯಲ್ಲಿ ದುಂದು ಮಾಡಿದರೂ ನೀವು ಕೇಳುವುದಿಲ್ಲವೇ?
ವಿರೋಧ ಪಕ್ಷದ ನಾಯಕರಾಗಿದ್ದಾಗ ಬೇರೆ ಸಚಿವರ ಮನೆ ನವೀಕರಣ ಸಂದರ್ಭದಲ್ಲಿ ನೀವು ಮಾಡಿದ ಭಾಷಣ, ಸಾರ್ವಜನಿಕರ ದುಡ್ಡಿನ ಬಗ್ಗೆ ತೋರಿದ ಕಾಳಜಿ, ಅಧಿಕಾರಕ್ಕೆ ಬರುತ್ತಿದ್ದಂತೆ ಮರೆತು ಹೋಯಿತಾ?  ಆಗ ನಿಮ್ಮ ಬಗ್ಗೆ ಭಾರೀ ನಿರೀಕ್ಷೆ ಬೆಳೆಸಿಕೊಂಡಿದ್ದೆ. ಆದರೆ ಎಚ್‌ಸಿ ಮಹದೇವಪ್ಪ ಮನೆ ನವೀಕರಣಕ್ಕೆ ಅವಕಾಶ ನೀಡಿರುವುದು ನೋಡಿದರೆ ನಿರೀಕ್ಷೆಗಳು ಹುಸಿಯಾಗುವ ಲಕ್ಷಣ ಗೋಚರಿಸುತ್ತಿವೆ.
ಮುಖ್ಯಮಂತ್ರಿ ಮತ್ತು ಮಹದೇವಪ್ಪ ಜಿಗರಿ ದೋಸ್ತ್‌ಗಳು. ಅವರೇನು ಮಾಡಿದರೂ ನಡೆಯುತ್ತೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ನಿಮ್ಮ ಆಪ್ತರು ಎಂಬ ಕಾರಣಕ್ಕೆ ಅವರೇನು ಮಾಡಿದರೂ ಮಾಫಿನೇ?
ಸಿದ್ದರಾಮಯ್ಯನವರೇ, ಈಗ ಮಹಾದೇವಪ್ಪ ನವೀಕರಿಸಿದ ಮನೆಯಲ್ಲಿ ಮೊದಲು ನೀವೇ ಇದ್ದಿರಲ್ಲವೇ? ಮುಖ್ಯಮಂತ್ರಿ ಆದ ನಂತರವೂ 3,4 ತಿಂಗಳು ಅದೇ ಮನೆಯಲ್ಲಿದ್ರಿ. ತಕ್ಕಮಟ್ಟಿಗೆ ಸರಿ ಮಾಡಿಸಿ, ಚೆನ್ನಾಗೇ ಇಟ್ಟುಕೊಂಡಿದ್ರಿ. ಹೀಗಿರುವಾಗ ಮಹಾದೇವಪ್ಪಗೆ ಆ ಮನೆಯನ್ನು ರು. 2 ಕೋಟಿಯಲ್ಲಿ ನವೀಕರಿಸಬೇಕಾದ ಅನಿವಾರ್ಯವೇನಿತ್ತು? ರಾಜ್ಯದಲ್ಲಿ ಜನ ಎಂತಹ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲವೇ? ಅವರಿಗಿಂತ ಒಳ್ಳೆಯ ಮನೆ ಇತ್ತು ತಾನೇ? ಅವರೇನು ಕಾಯಂ ಅಲ್ಲೇ ವಾಸ ಮಾಡಬೇಕು ಎಂದು ನಿರ್ಧರಿಸಿದ್ದಾರಾ? ಪತ್ರಿಕೆಗಳಲ್ಲಿ ಓದಿದ ಪ್ರಕಾರ ಮೊಮ್ಮಕ್ಕಳಿಗಾಗಿ ಮನೆಯ ಗೋಡೆಗಳ ಮೇಲೆ ಚಿತ್ರಗಳನ್ನೂ ಬಿಡಿಸಲಾಗಿದೆಯಂತೆ! ಎಂತಹ ಸಚಿವರನ್ನೂ ಇರಿಸಿಕೊಂಡಿದ್ದೀರಿ ಮುಖ್ಯಮಂತ್ರಿಗಳೇ? ರಾಜ್ಯದ 130 ತಾಲ್ಲೂಕುಗಳಲ್ಲಿ ಬರವಿದೆ. ಆ ಕಾರಣಕ್ಕೆ ಶಾಸಕರ ವಿದೇಶ ಪ್ರವಾಸಕ್ಕೆ ಜನ ವಿರೋಧಿಸುತ್ತಿದ್ದಾರೆ. ಹೀಗಿರುವಾಗ ನಿಮ್ಮ ಸಚಿವರು ಮನೆ ನವೀಕರಣಕ್ಕೆ, ಅದೂ ಎಲ್ಲವೂ ಸರಿಯಿದ್ದರೆ 5 ವರ್ಷ ಇರಬಹುದಾದ ಮನೆಗೆ 2 ಕೋಟಿ ವೆಚ್ಚ ಮಾಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವೇ?                

ನಿಮ್ಮನ್ನು ನೀವೇ ಕೇಳಿಕೊಳ್ಳಿ. ಬೇರೆ ಪಕ್ಷದ ಸಚಿವರು ಮನೆ ನವೀಕರಣ ಕಾಮಗಾರಿಗಳನ್ನು ನಡೆಸಿದಾಗ ನೀವು ಏನೇನು ಮಾತನಾಡಿದ್ದೀರಿ? ಏನೆಲ್ಲ ಆರೋಪ ಮಾಡಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಿ. ನಿಮ್ಮ ಸಚಿವರ ಕೆಲಸ ಅದಕ್ಕೆ ತದ್ವಿರುದ್ಧವಾಗಿದೆ ಎಂಬುದು ನಿಮಗೇ ಅರಿವಾಗುತ್ತದೆ. ಜನರ ಹಣವನ್ನು ನಿಕೃಷ್ಟವಾಗಿ ಕಾಣುವ ಸಚಿವರಿಂದ ನಾವು ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ? ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತಿದೆ. ಆದ್ದರಿಂದ ಈ ಬಗ್ಗೆ ಮುಗುಮ್ಮಾಗಿ ಇರುವ ಮೊದಲು ವಿಚಾರ ಮಾಡಿ ಸಿದ್ದರಾಮಯ್ಯನವರೇ. ಯಾಕೆಂದರೆ ನಿಮ್ಮ ಸಚಿವರ ಮನೆ ನವೀಕರಣದ ಖರ್ಚಿನಲ್ಲಿ ಎರಡು ಗ್ರಾಮ ಸಂಪೂರ್ಣ ಉದ್ಧಾರವಾಗುತ್ತಿತ್ತು.
- ರುದ್ರೇಶ್ ಹಡಪದ, ಬನಶಂಕರಿ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.