ಮನೆಯಾಯ್ತು; ಈಗ ಪರಿಷತ್ ನವೀಕರಣ
ಕ.ಪ್ರ. ವಾರ್ತೆ | ಬೆಂಗಳೂರು | ಏ. 30
ಲೋಕೋಪಯೋಗಿ ಸಚಿವರು ರು. 2.5 ಕೋಟಿ ವೆಚ್ಚದಲ್ಲಿ ಮನೆ ನವೀಕರಣ ಮಾಡಿಸಿದ ಬೆನ್ನಲ್ಲೇ, ಇನ್ನೊಂದು ಬಹುಕೋಟಿ ಮೌಲ್ಯದ ನವೀಕರಣ ಪ್ರಕರಣ ಬೆಳಕಿಗೆ ಬಂದಿದೆ.
ಸದಸ್ಯರ ಬೇಡಿಕೆ ಹೆಸರಿನಲ್ಲಿ ವಿಧಾನ ಪರಿಷತ್ ನವೀಕರಣಕ್ಕೆ ಈಗ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ ರು. 7 ಕೋಟಿ ವೆಚ್ಚ ಮಾಡುವುದಕ್ಕೆ ಟೆಂಡರ್ ನೀಡಲಾಗಿದ್ದು, ಹಿರಿಯರ ಮನೆಯಲ್ಲಿ ಈಗ ನಿಜಾರ್ಥದಲ್ಲಿ 'ಸಪ್ಪಳ' ಜೋರಾಗಿದೆ.
ಕುತೂಹಲಕಾರಿ ಸಂಗತಿ ಎಂದರೆ ಇದೇ ಸದನದಲ್ಲಿ ಸರ್ಕಾರಿ ಕಟ್ಟಡಗಳ ನವೀಕರಣ ಹಾಗೂ ಪೂಜೆ-ಪುನಸ್ಕಾರ ನಿಯಂತ್ರಣ ಸಂಬಂಧ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಅವರು ಖಾಸಗಿ ವಿಧೇಯಕವನ್ನು ಮಂಡಿಸಿದ್ದರು. ಹಲವು ವರ್ಷಗಳ ನಂತರ ಕಳೆದ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಮಾತ್ರವಲ್ಲ ಈ ವಿಧೇಯಕವನ್ನು ಜಾರಿಗೆ ತರಲು ಸರ್ಕಾರ ಒಪ್ಪಿಗೆ ನೀಡಿತ್ತು.
ಆದರೆ ಅದೇ ಸದನದ ನವೀಕರಣಕ್ಕೆ ಈಗ ಸರ್ಕಾರ 7 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಪರಿಷತ್ನ ಸಭಾಂಗಣ, ಸದಸ್ಯರ ಆಸನ, ನೆಲ ಹಾಸು, ಮೈಕ್, ಮೊಗಸಾಲೆಯನ್ನು ಸುಂದರಗೊಳಿಸಲಾಗುತ್ತಿದೆ.
ಕುತೂಹಲಕಾರಿ ಸಂಗತಿ ಎಂದರೆ ಕೆಲ ವರ್ಷಗಳ ಹಿಂದಷ್ಟೇ ಪರಿಷತ್ನ ಕೆಲ ಭಾಗಗಳ ನವೀಕರಣ ನಡೆದಿತ್ತು.
ಏಕೆ ನವೀಕರಣ?
ಪರಿಷತ್ ಮೂಲಗಳ ಪ್ರಕಾರ, ಬೆಳಗಾವಿಯ ಸುವರ್ಣಸೌಧದಲ್ಲಿ ಅಳವಡಿಸಿರುವ ಅತ್ಯಾಧುನಿಕ ಪರಿಕರಗಳನ್ನು ನೋಡಿದ ನಂತರ ಸದಸ್ಯರು ನವೀಕರಣ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ವರ್ಷದಲ್ಲಿ ಒಮ್ಮೆ ಮಾತ್ರ ಅಧಿವೇಶನ ಸೇರುವ ಬೆಳಗಾವಿಯಲ್ಲಿ ಮೈಕ್ಗಳು, ಖುರ್ಚಿಗಳು, ನೆಲ ಹಾಸುಗಳು ಸುಂದರವಾಗಿದೆ. ಹೀಗಾಗಿ ವಿಧಾನಸೌಧದಲ್ಲೂ ಇದೇ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರಂತೆ!ಆಸನಗಳ ಬದಲಾವಣೆ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ವಿಧಾನ ಮಂಡಲದ ಮಳೆಗಾಲದ ಅಧಿವೇಶನದೊಳಗಾಗಿ ಸಂಪೂರ್ಣವಾಗಿ ನವೀಕರಣ ಮುಕ್ತಾಯಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

