ಪ್ರಧಾನ ಸುದ್ದಿ

ಬೆಂಗಳೂರನ್ನು ನಿಜಾರ್ಥದಲ್ಲಿ ಗ್ಲೋಬಲ್ ಸಿಟಿಯಾಗಿ ಪ್ರಚುರಪಡಿಸಿ: ಹ್ಯಾರೀಸ್

ಬೆಂಗಳೂರನ್ನು ನಿಜಾರ್ಥದಲ್ಲಿ ಗ್ಲೋಬಲ್ ಸಿಟಿಯಾಗಿ ಪ್ರಚುರಪಡಿಸಿ: ಹ್ಯಾರೀಸ್
Published On :

-ನಗರವನ್ನು ಪ್ರವಾಸಿ, ಉದ್ಯಮ ತಾಣವಾಗಿ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ
-ಘನತ್ಯಾಜ್ಯ ವಿಲೇವಾರಿ, ಸಂಚಾರ ಸಮಸ್ಯೆಗೆ ಉತ್ತರ ಹುಡುಕಿ
-ಜಾಗತಿಕ ನಗರದಲ್ಲಿ ನೈಟ್‌ಲೈಫ್ ವಿಸ್ತರಣೆ ಅನಿವಾರ್ಯ

ಬೆಂಗಳೂರು: ಬೆಂಗಳೂರನ್ನು ನಿಜಾರ್ಥದಲ್ಲಿ ಗ್ಲೋಬಲ್ ಸಿಟಿಯಾಗಿ ಪ್ರಚುರಪಡಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಬೇಕು ಎಂದು ಶಾಂತಿನಗರ ಶಾಸಕ ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ 'ಪಕ್ಷಾತೀತ ಯುವ ಶಾಸಕರ ವೇದಿಕೆ' ಅಧ್ಯಕ್ಷ ಎನ್.ಎ.ಹ್ಯಾರೀಸ್ ಅಭಿಪ್ರಾಯಪಟ್ಟಿದ್ದಾರೆ.
'ಕನ್ನಡಪ್ರಭ'ದ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಜಗತ್ತಿನ ಯಾವುದೇ ನಗರಕ್ಕೆ ಸರಿಸಮವಾಗಿ ನಿಲ್ಲಬಲ್ಲ ಎಲ್ಲ ಅರ್ಹತೆ ಬೆಂಗಳೂರಿಗೆ ಇದೆ. ಆದರೆ ಬೆಂಗಳೂರನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಜತೆಗೆ ಶ್ರೇಷ್ಠ ಉದ್ಯಮ ತಾಣವಾಗಿ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ ಎಂದು ಹೇಳಿದ್ದಾರೆ.
ಆದರೆ ಬೆಂಗಳೂರು ವಿಶ್ವದ ನಗರವಾಗಿ ರೂಪುಗೊಳ್ಳುವುದಕ್ಕೆ ಮೊದಲು ಕೆಲ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಕಸದ ಸಮಸ್ಯೆ ವಿಪರೀತವಾಗಿದೆ. ಘನತ್ಯಾಜ್ಯ ವಿಲೇವಾರಿ ಮತ್ತು ನಗರದ ಸಂಚಾರ ಸಮಸ್ಯೆಗೆ ಉತ್ತರ ಹುಡುಕಬೇಕಿದೆ. ಅದರ ಜತೆಗೆ ಜಾಗತಿಕ ನಗರದಲ್ಲಿ ನೈಟ್‌ಲೈಫ್ ವಿಸ್ತರಣೆಯೂ ಅನಿವಾರ್ಯ ಎಂದರು.
ವಾರಾಂತ್ಯದ ಎರಡು ದಿನ ಮಾತ್ರ ಬಾರ್‌ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿರುವುದಕ್ಕೆ ನನ್ನ ಆಕ್ಷೇಪವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಕೆಲವೊಂದು ನಿರ್ಬಂಧ ಹಾಗೂ ಕಾನೂನು- ಸುವ್ಯವಸ್ಥೆಯ ಸಮಸ್ಯೆ ಇರುತ್ತದೆ. ಆದರೆ ಹೊಟೇಲ್, ಕಾಫಿ ಶಾಪ್, ಸೂಪರ್ ಮಾರ್ಕೆಟ್, ಮಾಲ್‌ಗಳು, ಸಿನಿಮಾ ಮಂದಿರಗಳು ರಾತ್ರಿ ಪೂರ್ತಿ ತೆರೆದಿರಬೇಕು. ಸಿಂಗಾಪುರದಂಥ ನಗರದಲ್ಲಿ ಇಂಥ ಸೌಲಭ್ಯವಿದೆ. ಬೆಂಗಳೂರನ್ನು ಆ ಮಟ್ಟದಲ್ಲಿ ಬೆಳೆಸಬೇಕಿದ್ದರೆ ಇಂಥ ಅವಕಾಶಗಳಿರಬೇಕು. ಪೊಲೀಸ್ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ ಎಂಬುದು ಇದಕ್ಕೆ ಉತ್ತರವಲ್ಲ. ಇದು ವಿಜ್ಞಾನ ಯುಗ. ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಿ ಅದನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡುವ ಮೂಲಕ ಇದಕ್ಕೆ ಪರಿಹಾರ ಹುಡುಕಬಹುದು ಎಂದು ಸಲಹೆ ನೀಡಿದರು.
ಇನ್ನು ಬೆಂಗಳೂರು ನಗರ ಎದುರಿಸುತ್ತಿರುವ ಕಸದ ಸಮಸ್ಯೆ ಬಗ್ಗೆ ನಾನು ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇನೆ. ಘನತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ವಾರ್ಷಿಕ ರು. 700 ಕೋಟಿ ಖರ್ಚು ಮಾಡುತ್ತಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಸರ್ಕಾರ ಇದಕ್ಕೆ ಖಾಸಗಿಯವರ ಮೂಲಕ ಪರಿಹಾರ ಹುಡುಕಬೇಕಿದೆ. ನಗರದ ಐದಾರು ಕಡೆ ಬೃಹತ್ ಸಂಸ್ಥೆಗಳಿಗೆ ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಬೇಕು. ಇದಕ್ಕೆ ಅಗತ್ಯವಾದ ಭೂಮಿ ಕೆಐಎಡಿಬಿಯ ಬಳಿ ಇದೆ. ಘಟಕ ನಿರ್ಮಿಸಲು ಮುಂದೆ ಬರುವವರಿಗೆ ಪರವಾನಗಿ ವಿಚಾರದಲ್ಲಿ ಅನಗತ್ಯ ಕಿರುಕುಳ ನೀಡಬಾರದು. ಜತೆಗೆ ಇಂಥ ಸಂಸ್ಥೆಗಳು ನಾಗರಿಕರಿಂದ ಕಸವನ್ನು ದುಡ್ಡುಕೊಟ್ಟು ಖರೀದಿ ಮಾಡಬೇಕು. ಒಂದು ಕೆಜಿ ಕಸಕ್ಕೆ ಇಂತಿಷ್ಟು ಹಣ ನಿಗದಿ ಮಾಡಿದರೆ ನಾಗರಿಕರು ಸಂಗ್ರಹಿಸಿಟ್ಟುಕೊಡುತ್ತಾರೆ. ಆಗ ಕಸ ಎಲ್ಲೆಂದರಲ್ಲಿ ಚೆಲ್ಲುವುದು ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಬಿಬಿಎಂಪಿ ವಿಭಜಿಸಿ: ನನ್ನ ಪ್ರಕಾರ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕನಿಷ್ಠ ನಾಲ್ಕು ಭಾಗವಾಗಿ ವಿಭಜಿಸಬೇಕು. ಆಗ ಆಡಳಿತಕ್ಕೆ ಅನುಕೂಲವಾಗುತ್ತದೆ. ಅಷ್ಟಕ್ಕೂ ಬಿಬಿಎಂಪಿಯನ್ನು ಆಡಳಿತಾನುಕೂಲಕ್ಕೆ ನಿರ್ಮಿಸಿರುವುದು. ಒಬ್ಬ ಮೇಯರ್ ಹಾಗೂ ಒಬ್ಬ ಆಯುಕ್ತರಿಂದ ಇಷ್ಟು ವಿಸ್ತೀರ್ಣದ ನಗರ ನಿರ್ವಹಣೆ ಕಷ್ಟ ಎಂದು ಹೇಳಿದರು.
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮೊದಲಿನಿಂದಲೂ ಪಕ್ಷಕ್ಕೆ ನಿಷ್ಟನಾಗಿದ್ದೇನೆ. ಖಾಸಗಿ ಸಂಸ್ಥೆ ನಡೆಸಿದ ಸರ್ವೆ ಸಂದರ್ಭದಲ್ಲಿ ನಾನು ಉತ್ತಮಶಾಸಕರ ಪೈಕಿ ಎರಡನೇ ಸ್ಥಾನದಲ್ಲಿದ್ದೆ. ಸಚಿವನಾಗಬೇಕೆಂಬ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ. ನನಗೂ ಇದೆ. ಆದರೆ ಈ ವಿಚಾರದಲ್ಲಿ ನಾನು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.