ರೋಗಗ್ರಸ್ಥ ಕೆಪಿಎಸ್ಸಿಗೆ ಆಪರೇಷನ್ ಅನಿವಾರ್ಯವಾಗಿತ್ತು: ಅಡ್ವೊಕೇಟ್ ಜನರಲ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಪ್ರಕಟಿಸಿದ್ದ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರ ತಿರಸ್ಕರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಕ್ರಮವನ್ನು ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಸಂದರ್ಶನ ನೀಡಿರುವ ರವಿವರ್ಮ ಕುಮಾರ್ ಅವರು, ಒಂದು ಅಭ್ಯರ್ಥಿ ಅಥವಾ ಹಲವು ಅಭ್ಯರ್ಥಿಗಳು ತಪ್ಪು ಮಾಡಿದ್ದರೆ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಆದರೆ ಈ ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗವೇ ದೊಡ್ಡ ತಪ್ಪು ಮಾಡಿದೆ. ಸ್ವತಃ ಕೆಪಿಎಸ್ಸಿ ಸದಸ್ಯರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ನೇಮಕಾತಿ ಮಾಡುವ ಸಂಸ್ಥೆಯೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದು ಕಂಡು ಬಂದಾಗ, ಆ ಸಂಸ್ಥೆ ಆಯ್ಕೆ ಮಾಡಿದ ಪಟ್ಟಿಯನ್ನು ಒಪ್ಪಿಕೊಳ್ಳಲು ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಎಸ್ಸಿಗೆ ಸರ್ಕಾರ ಒಂದು ಅವಕಾಶವನ್ನು ನೀಡಿತ್ತು. ಮರು ಸಂದರ್ಶನ ಮತ್ತು ಮರು ಮೌಲ್ಯಮಾಪನ ಮಾಡುವಂತೆ ಸರ್ಕಾರ ಸಲಹೆ ನೀಡಿತ್ತು. ಈ ಸಂಬಂಧ ಕೆಪಿಎಸ್ಸಿ ಅಧ್ಯಕ್ಷರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಆದರೆ ಕೆಪಿಎಸ್ಸಿ ಸರ್ಕಾರದ ಸಲಹೆಯನ್ನು ತಿರಸ್ಕರಿಸಿತು. ಹೀಗಾಗಿ ಸರ್ಕಾರ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಮತ್ತು ಸಾಮಾನ್ಯ ಚಿಕಿತ್ಸೆಯ ಮೂಲಕ ರೋಗ ವಾಸಿ ಮಾಡಲು ಸರ್ಕಾರ ಪ್ರಯತ್ನಿಸಿತು. ಆದರೆ ಅದು ಸಂಪೂರ್ಣ ಕೊಳೆತು ಹೋಗಿದ್ದರಿಂದ ಆಪರೇಷನ್ ಅನಿವಾರ್ಯವಾಯಿತು ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ. ಅಲ್ಲದೆ ಕೆಪಿಎಸ್ಸಿ ಆಯ್ಕೆ ಪಟ್ಟಿಯನ್ನು ತಿರಸ್ಕರಿಸುವಂತೆ ಸರ್ಕಾರಕ್ಕೆ ತಾವೇ ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.
ಕೆಲವು ಭ್ರಷ್ಟ ಅಭ್ಯರ್ಥಿಗಳು ಮಾಡಿದ ತಪ್ಪಿಗಾಗಿ ಹಲವು ಪ್ರಮಾಣಿಕ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ರವಿವರ್ಮ ಕುಮಾರ್ ಅವರು, ಏನೂ ತಪ್ಪು ಮಾಡದ ಹಲವು ಮುಗ್ಧರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದಲೇ ಸರ್ಕಾರ ಮರು ಸಂದರ್ಶನ ಮತ್ತು ಮರು ಮೌಲ್ಯಮಾಪನಕ್ಕೆ ಮನವಿ ಮಾಡಿತ್ತು. ಆದರೆ ದುರದೃಷ್ಟಕ್ಕೆ ಸರ್ಕಾರದ ಮನವಿಯನ್ನು ಕೆಪಿಎಸ್ಸಿ ತಿರಸ್ಕಿರಿಸಿತು. ಇದರಿಂದ ಕೆಪಿಎಸ್ಸಿ ಅನ್ಯಾಯವನ್ನು ಸರಿಪಡಿಸುವ ಅವಕಾಶ ಕಳೆದುಕೊಂಡಿತು.
ಕೆಪಿಎಸ್ಸಿ ಅಧಿಸೂಚನೆಯನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮ ಕಾನೂನಿನ ರೀತಿಯಲ್ಲಿ ಸರಿಯಾಗಿಯೇ ಇದೆ. ಭ್ರಷ್ಟಾಚಾರ ಮುಕ್ತ ಮತ್ತು ಸ್ವಚ್ಛ ಆಡಳಿತ ನೀಡುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


