ಲೋಕದಲ್ಲಿ ಕೋಮು ಸಂಘರ್ಷ ಕಾಂಗ್ರೆಸ್-ಬಿಜೆಪಿ ವಾಕ್ಸಮರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ ವಿಚಾರ ಲೋಕಸಭೆಯಲ್ಲಿ ಬುಧವಾರ ತೀವ್ರ ಗದ್ದಲಕ್ಕೆ ಸಾಕ್ಷಿಯಾಯಿತು. ಅಧಿಕಾರಕ್ಕಾಗಿ ಬಿಜೆಪಿ ಸಮಾಜನವನ್ನು ವಿಭಜಿಸುವ ಕಾರ್ಯ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸಿಗರು ಪಾಕಿಸ್ತಾನದ ಅಜೆಂಡಾದಂತೆ ದೇಶ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿತು.
ಕೋಮುಗಲಭೆಗೆ ಕಡಿವಾಣ ಹಾಕಲು ಪರಿಣಾಮಕಾರಿ ವ್ಯವಸ್ಥೆಯ ಅಗತ್ಯವಿದೆ ಎಂದು ಒತ್ತಾಯಿಸುತ್ತಾ ಚರ್ಚೆ ಆರಂಭಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೋಮು ಹಿಂಸಾಚಾರವನ್ನು ಸರ್ಕಾರ ಹಗುರವಾಗಿ ಪರಿಗಣಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 600ಕ್ಕೂ ಹೆಚ್ಚು ಕೋಮು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಇದರ ಹಿಂದಿರುವ ವ್ಯಕ್ತಿಗಳು ಯಾರು?
ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳು ಸಮಾಜವನ್ನು ವಿಭಜಿಸುವ ಕೆಲಸಕ್ಕೆ ಕೈ ಹಾಕಿವೆ. ಇದಕ್ಕೆ ತಕ್ಷಣ ನಿಯಂತ್ರಣ ಹಾಕದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡೆಬೇಕಾದೀತು ಎಂದು ಎಚ್ಚರಿಸಿದರು. ಈ ವೇಳೆ, ವಿಎಚ್ಪಿ, ಬಜರಂಗದಳ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆಲ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮು ಸಂಘಟನೆಗಳು ಒಂದಾಗಿವೆ.
ತಮಗೆ ರಾಜಕೀಯ ಅಧಿಕಾರ ಇದೆ ಮತ್ತು ರಕ್ಷಣೆ ಇದೆ ಎಂಬ ಭಾವನೆಯಲ್ಲಿವೆ. ಈ ದೇಶ ಎಲ್ಲ ಧರ್ಮ, ಜಾತಿ, ವರ್ಗದವರಿಗೂ ಸೇರಿದ್ದು, ನಿಮ್ಮ(ಬಿಜೆಪಿ) ಕೈಯಲ್ಲಿ ಅಧಿಕಾರವಿದೆ ಎಂದ ಮಾತ್ರಕ್ಕೆ ನೀವು ಉಳಿದವರನ್ನು ಧಮನಿಸಬಹುದು ಎಂದು ತಿಳಿಯಬೇಡಿ ಎಂದು ಕಿಡಿಕಾರಿದರು. ಜತೆಗೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕೇಂದ್ರ ಸರ್ಕಾರ ಕೋಮುಗಲಭೆಯನ್ನು ಹಗುರವಾಗಿ ಪರಿಗಣಿಸುತ್ತಿದೆ ಎಂದು ಆರೋಪಿಸಿದರು.
ಖರ್ಗೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಮುಂಬೈನ ಆಜಾದ್ ಮೈದಾನದಲ್ಲಿ ಪೊಲೀಸರ ಮೇಲಿನ ಹಲ್ಲೆ ನಡೆದಾಗ, ಕಾಶ್ಮೀರಿ ಪಂಡಿತರನ್ನು ಮನೆ ಬಿಟ್ಟು ಓಡಿಸಿದಾಗ, ಅಸ್ಸಾಂ ಹಾಗೂ 1984ರ ಸಿಖ್ ವಿರೋಧಿ ದಂಗೆ ವೇಳೆ ಸುಮ್ಮನಿದ್ದ ಕಾಂಗ್ರೆಸ್ ಈಗ ಚರ್ಚೆಗೆ ಆಗ್ರಹಿಸುತ್ತಿದೆ. ಯುಪಿಎ ಅವಧಿಯಲ್ಲೂ ಸಾವಿರಾರು ಕೋಮುಗಲಭೆ ಪ್ರಕರಣಗಳು ನಡೆದಿವೆ. ಎಲ್ಲ ಕೋಮುಗಲಭೆಗೆ ಸಂಬಂಧಿಸಿ ಎಸ್ಐಟಿ ತನಿಖೆ ನಡೆಯಲಿ. ಆಗ ಈ ಗಲಭೆಗಳ ಹಿಂದೆ ಯಾರಿದ್ದಾರೆ ಎನ್ನುವ ಸತ್ಯ ಹೊರಬರಲಿದೆ. ಬದುಕಿ ಬದುಕಲು ಬಿಡಿ ಎನ್ನುವುದು ಹಿಂದೂ ಸಿದ್ಧಾಂತ. ಇತ್ತೀಚಿನ ದಿನಗಳಲ್ಲಿ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ದೇಶದಲ್ಲಿ 12 ಲಕ್ಷ ಸಾಧು, ಸಂತರಿದ್ದಾರೆ. ಆದರೆ ಇಮಾಂಗಳಿಗಷ್ಟೇ ಭತ್ಯೆ ನೀಡಲಾಗುತ್ತಿದೆ. ಇದೇನು ಜಾತ್ಯತೀತತೆಯೇ?
ಹಿಂದುತ್ವ ಅನ್ನುವುದು ದೇಶದ ರಾಷ್ಟ್ರೀಯತೆಯ ಗುರುತು. ಹಿಂದೂ ಧರ್ಮ ಯಾವುದೇ ಒಂದು ಧರ್ಮ ಪರಮೋಚ್ಛ ಎಂದು ಹೇಳುವುದಿಲ್ಲ. ಹಜ್ಗೆ ಹೋಗುವ ಭಾರತೀಯ ಮುಸ್ಲಿಮರು ಕೂಡ ಹಿಂದೂಗಳೇ. 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲಾಯಿತು. ಅದೇ ರೀತಿ ಈಗ ದೇಶವನ್ನು ಪಾಕಿಸ್ತಾನದ ಅಜೆಂಡಾದ ಮೇಲೆ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ ಆದಿತ್ಯನಾಥ್ ಆರೋಪಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


