ಪ್ರಧಾನ ಸುದ್ದಿ

ನಕಲಿ ದಾಖಲೆ ಮೇಲೆ ಸಾಲ?: ಬಿಡಿಎ ಸೈಟ್ ಹರಾಜಿಗೆ ಮುಂದಾದ ಬ್ಯಾಂಕ್

ನಕಲಿ ದಾಖಲೆ ಮೇಲೆ ಸಾಲ?: ಬಿಡಿಎ ಸೈಟ್ ಹರಾಜಿಗೆ ಮುಂದಾದ ಬ್ಯಾಂಕ್
Published On :

ಬೆಂಗಳೂರು: ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ವಿವಾದಿತ ನಿವೇಶನದ ಮೇಲೆ ಲಕ್ಷಾಂತರ ರುಪಾಯಿ ಸಾಲ ನೀಡಿದ್ದ ನಗರದ ಐಸಿಐಸಿ ಬ್ಯಾಂಕ್, ಈಗ ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆ ನಿವೇಶನವನ್ನು ಹರಾಜು ಮಾಡಲು ಮುಂದಾಗಿದೆ. ಆದರೆ ಅದು ಖಾಸಗಿ ಸ್ವತ್ತಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸೇರಿದ ಬಿಡಿಎ ಸ್ವತ್ತು ಎಂದು ಬಿಡಿಎ ಪ್ರತಿಪಾದಿಸಿದೆ.

ಈ ಸಂಬಂಧ ಐಸಿಐಸಿಐ ಬ್ಯಾಂಕ್ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದು, ಇಂದಿರಾನಗರದ ಎರಡನೇ ಹಂತದಲ್ಲಿರುವ ಇಎಸ್‌ಐ ಆಸ್ಪತ್ಪೆ ಸಮೀಪ ಇರುವ 2000 ಚ.ಅಡಿ ವಿಸ್ತಿರ್ಣದ 118/ಎ ನಿವೇಶನ ಹರಾಜಿಗಿದೆ ಎಂದು ಹೇಳಿದೆ. ಆದರೆ ಬಿಡಿಎ ಮಾತ್ರ ಅದು ಯಾವುದೇ ವ್ಯಕ್ತಿಗೆ ಸೇರಿದ ಸ್ವತ್ತಲ್ಲ. ಹೀಗಾಗಿ ಅದನ್ನು ಹರಾಜು ಹಾಕಲು ಬರುವುದಿಲ್ಲ ಎಂದು ಹೇಳಿದೆ.

ಈ ನಿವೇಶನಕ್ಕೆ ಬ್ಯಾಂಕ್ 1 ಕೋಟಿ 62 ಲಕ್ಷ ರುಪಾಯಿ ದರ ನಿಗದಿಪಡಿಸಿದ್ದು, ಸೋಮವಾರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಈ ನಿವೇಶನದ ಮೇಲೆ ಪಿ.ಶಿವರಾಜು ಮತ್ತು ಆರ್.ಎ.ಕವಿತಾ ಎಂಬುವವರು ನಮ್ಮ ಬ್ಯಾಂಕ್‌ನಿಂದ 75 ಲಕ್ಷ 97 ಸಾವಿರ ರು. ಸಾಲ ಪಡೆದಿದ್ದು, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನಿವೇಶನವನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿತ್ತು ಎಂದು ಬ್ಯಾಂಕ್ ತಿಳಿಸಿದೆ. ನಿವೇಶನದ ಸದ್ಯದ ಮಾರುಕಟ್ಟೆ ಬೆಲೆ 3ರಿಂದ 4 ಕೋಟಿ ರುಪಾಯಿ ಎನ್ನಲಾಗುತ್ತಿದೆ.

ಈ ಮಧ್ಯೆ, ಐಸಿಐಸಿಐ ಬ್ಯಾಂಕ್ ಹೇಳಿರುವ ಆ ಇಬ್ಬರ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಈ ಮುಂಚೆ ಆ ನಿವೇಶನವನ್ನು ಕೃಷ್ಣ ಸಿಂಗ್ ಎಂಬುವವರಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಲಾಗಿತ್ತು ಎಂದು ಬಿಡಿಎ ಸ್ಪಷ್ಟಪಡಿಸಿದೆ. ಅಲ್ಲದೆ ಬ್ಯಾಂಕ್ ಬಿಡಿಎ ನಿವೇಶನವನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಬಿಡಿಎ, ಭೂಮಿ ಹಂಚಿಕೆ ಉಪ ಕಾರ್ಯದರ್ಶಿ ಶಿವಸ್ವಾಮಿ ಅವರು ಹೇಳಿದ್ದಾರೆ.

ಆದರೆ ನಿವೇಶನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಕಾನೂನು ಪ್ರಕಾರ ಸರಿಯಾಗಿವೆ ಎಂದು ಬ್ಯಾಂಕ್ ವಾದಿಸುತ್ತಿದೆ. ಆದರೆ ಯಾರೋ ದುಷ್ಕರ್ಮಿಗಳು ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ವಂಚನೆ ಮಾಡಿರುವ ಸಾಧ್ಯತೆ ಇದೆ. ಏಕೆಂದರೆ ಬಿಡಿಎ ದಾಖಲೆಗಳ ಪ್ರಕಾರ ಈ ನಿವೇಶನ ಯಾರಿಗೂ ಹಂಚಿಕೆಯಾಗಿಲ್ಲ ಮತ್ತು ಸದ್ಯ ಅದು ಬಿಡಿಎ ವಶದಲ್ಲೇ ಇದೆ.

ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಸಾಲಿ ನೀಡಿರುವುದರಿಂದ ಈ ಪ್ರಕರಣದಲ್ಲಿ ಬ್ಯಾಂಕ್‌ನ ನಿರ್ಲಕ್ಷ್ಯ  ಸ್ಪಷ್ಟವಾಗಿ ಎದ್ದು ಕಾಣಿತ್ತಿದೆ. ಅಲ್ಲದೆ ಬ್ಯಾಂಕ್ ತನ್ನ ನಷ್ಟವನ್ನು ಸರಿಪಡಿಸಿಕೊಳ್ಳಲು ಸದ್ಯ ವಿವಾದದಲ್ಲಿರುವ ನಿವೇಶನವನ್ನು ಹರಾಜು ಹಾಕಲು ಮುಂದಾಗಿದೆ ಮತ್ತು ಇದರಿಂದ ನಿವೇಶನ ಕೊಳ್ಳುವವರು ಮೋಸ ಹೋಗುವ ಸಾಧ್ಯತೆ ಇದೆ.

ಸಾರ್ವಜನಿಕವಾಗಿ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ತನ್ನ ಆಸ್ತಿಯನ್ನು ಹರಾಜು ಮಾಡುತ್ತಿದ್ದರು ಬಿಡಿಎ ಮಾತ್ರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಇದೇ ನಿವೇಶನಕ್ಕೆ ಸಂಬಂಧಿಸಿದಂತೆ ಬೇರೆ ಕೆಲವು ದುಷ್ಕರ್ಮಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಈ ಸಂಬಂಧ ಜಯನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟೇಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಹ ಬಿಡಿಎ ಮಾತ್ರ ತನ್ನ ಆಸ್ತಿ ರಕ್ಷಣೆಗೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.