ಉಪ ಚುನಾವಣೆಯಲ್ಲಿ 'ಕೈ' ಮೇಲುಗೈ

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮತ್ತು ಪ್ರತಿಪಕ್ಷ ಬಿಜೆಪಿ ಒಂದು ಸ್ಥಾನದಲ್ಲಿ ಗೆಲವು ಸಾಧಿಸಿದೆ.
ಆಗಸ್ಟ್ 21ರಂದು ಬಳ್ಳಾರಿ ಗ್ರಾಮೀಣ, ಶಿಕಾರಿಪುರ ಹಾಗೂ ಚಿಕ್ಕೋಡಿ-ಸದಲಗಾ ವಿಧಾಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರ ಗಣಿಧಣಿಗಳ ಆಪ್ತ, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಪ್ರತಿನಿಧಿಸುವ ಕ್ಷೇತ್ರ. ಇಲ್ಲಿ ಕಾಂಗ್ರೆಸ್ಗೆ ಬಿಜೆಪಿ ಅನ್ನುವುದಕ್ಕಿಂತ ಶ್ರೀರಾಮುಲು ಅವರೇ ಪ್ರಮುಖ ಟಾರ್ಗೆಟ್ ಆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವ ಸಂಪುಟದ ಸಚಿವರು, ಹಾಗೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ ಕೈ ಅಭ್ಯರ್ಥಿ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದರು.
2004ರಿಂದ ಇಲ್ಲಿಯವರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಹಾಗೂ 2008ರಲ್ಲಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಕಾಂಗ್ರೆಸ್ಗೆ ಸಾಧ್ಯವಾಗಿರಲಿಲ್ಲ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಬಲದ ಮುಂದೆ ಕಾಂಗ್ರೆಸ್ ಬಲ ಕುಗ್ಗಿ ಹೋಗಿತ್ತು. ಆದರೆ ಈ ಬಾರಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಶಿವಕುಮಾರ್ ಅವರು ಕೇವಲ 15-20ದಿನಗಳಲ್ಲಿಯೇ ಹಲವು ತಂತ್ರಗಳನ್ನು ಉಪಯೋಗಿಸಿ, ಪಕ್ಷದಲ್ಲಿ ಒಗ್ಗಟ್ಟು ಮೂಡಿಸಿದ್ದರು. ಈ ಒಗ್ಗಟ್ಟಿನಿಂದಲೇ ಬಿಜೆಪಿ ಭದ್ರ ಕೋಟೆ ಛಿದ್ರವಾಗಿದ್ದು, ಡಿಕೆಶಿ ವರ್ಚಸ್ಸು ಮತ್ತಷ್ಟು ವೃದ್ಧಿಯಾಗಿದೆ.
ಇನ್ನು ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲೂ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದ್ದು, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಪುತ್ರ ಗಣೇಶ್ ಹುಕ್ಕೇರಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಿಕಾರಿಪುರ ಕ್ಷೇತ್ರವನ್ನು ಕಿತ್ತುಕೊಳ್ಳುವಲ್ಲಿ 'ಕೈ' ಮತ್ತೆ ವಿಫಲವಾಗಿದೆ. 1982ರಿಂದ ಇದುವರೆಗೆ ಒಮ್ಮೆ ಹೊರತುಪಡಿಸಿ ಏಳು ಬಾರಿ ಈ ಕ್ಷೇತ್ರವನ್ನು ಯಡಿಯೂರಪ್ಪ ಅವರೇ ಶಿಕಾರಿ ಮಾಡಿದ್ದರು. ಆದರೆ ಈ ಬಾರಿ ತಮ್ಮಿಂದ ತೆರವಾಗಿದ್ದ ಸ್ಥಾನಕ್ಕೆ ಮಗ ಬಿ.ವೈ.ರಾಘವೇಂದ್ರರನ್ನು ನಿಲ್ಲಿಸಿ, ಗೆಲುವಿನ ನಗೆ ಬೀರಿದ್ದಾರೆ.
ಫಲಿತಾಂಶಕ್ಕೆ ಪ್ರತಿಕ್ರಿಯೆ
ಬಳ್ಳಾರಿಯಲ್ಲಿ ನಾವು ನಿರೀಕ್ಷೆಗೂ ಮೀರಿ ಜಯಗಳಿಸಿದ್ದೇವೆ. ಈ ಫಲಿತಾಂಶ ಜನ ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.
- ಸಿಎಂ ಸಿದ್ದರಾಮಯ್ಯ
ಶಿಕಾರಿಪುರ ಉಪ ಚುನಾವಣೆ ಫಲಿತಾಂಶ ನನಗೆ ಸಮಾಧಾನ ತಂದಿಲ್ಲ. ಆದರೆ ಶಿಕಾರಿಪುರ ಕ್ಷೇತ್ರದ ಜನರು ಎಂದೂ ನಮ್ಮ ಕೈ ಬಿಟ್ಟಿಲ್ಲ. ಅವರ ನಂಬಿಕೆಯನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಗೆಲುವಿನ ಅಂತರ ನಿರೀಕ್ಷೆಗಿಂತ ಕಡಿಮೆ ಆಗಿದೆ.
-ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ಸೋಲಿನೆ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅಧಿಕಾರ ಮತ್ತು ಹಣಬಲದಿಂದ ಗೆದ್ದಿದೆ.
-ಮಾಜಿ ಸಚಿವ ಬಿ.ಶ್ರೀರಾಮುಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


