ಪ್ರಧಾನ ಸುದ್ದಿ

1971ರ ಬಳಿಕ ಇದೇ ಮೊದಲ ಬಾರಿ ಅತಿದೊಡ್ಡ ಕದನ ವಿರಾಮ ಉಲ್ಲಂಘನೆ

1971ರ ಬಳಿಕ ಇದೇ ಮೊದಲ ಬಾರಿ ಅತಿದೊಡ್ಡ ಕದನ ವಿರಾಮ ಉಲ್ಲಂಘನೆ
Published On :

ಜಮ್ಮು: 1971ರ ಯುದ್ಧದ ಬಳಿಕ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದ್ದು ಇದೇ ಮೊದಲು!

ಇಬ್ಬರು ಗ್ರಾಮಸ್ಥರನ್ನು ಬಲಿಪಡೆದ ಶುಕ್ರವಾರ ರಾತ್ರಿಯೀಂದೀಚೆಗಿನ ಪಾಕ್ ಪಡೆಗಳ ಅಪ್ರಚೋದಿತ ಗುಂಡು, ಶೆಲ್ ದಾಳಿಯನ್ನು ಬಿಎಸ್ಎಫ್ ಮುಖ್ಯಸ್ಥ ಡಿ.ಕೆ ಪಾಠಕ್ ಬಣ್ಣಿಸಿದ್ದು ಹೀಗೆ. ಸತತ45 ದಿನಗಳ ಕಾಲ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ನಮ್ಮ ಸೈನಿಕರು ಪಾಕ್ನ ಈ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ. ಈವೇಳೆ ಪಾಕ್ ಕಡೆಯ ಗಡಿಯಂಚಿನ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದು ಪಾಠಕ್ ಹೇಳಿದ್ದಾರೆ.

ಗಡಿಯಾಚೆ 25ರಿಂದ 30 ಪ್ರದೇಶಗಳಲ್ಲಿ ಉಗ್ರರು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಶಾಲೆ, ಕಮ್ಯುನಿಟಿ ಹಾಲ್ಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಉಗ್ರರು ಸಿದ್ಧವಾಗಿ ಕೂತಿದ್ದಾರೆ ಎಂದೂ ಪಾಠಕ್ ಮಾಹಿತಿ ನೀಡಿದ್ದಾರೆ.

ಆರ್.ಎಸ್.ಪುರ ಭಾಗದಲ್ಲಿ ಗಡಿಯುದ್ದಕ್ಕೂ ನಡೆಯುತ್ತಿರುವ ಈ ಗುಂಡಿನ ದಾಳಿಯಿಂದಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, 3000 ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಇದೇ ವೇಳೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಎನ್ಕೌಂಟರ್ನಲ್ಲಿ ಸೇನಾಪಡೆಗಳು ಉಗ್ರನೊಬ್ಬನನ್ನು ಹೊಡೆದುರುಳಿಸಿವೆ. ಈ ಮೂಲಕ 3 ದಿನಗಳ ಕಾರ್ಯಾಚರಣೆಯಲ್ಲಿ ಐವರು ಉಗ್ರರ ಹತ್ಯೆಗೈದಂತಾಗಿದೆ.

ಗುಂಡಿನ ಮೊರೆತ ಇಲ್ಲ
16 ದಿನಗಳಿಂದ ಗುಂಡಿನ ಮೊರೆತಕ್ಕೆ ಸಾಕ್ಷಿಯಾಗಿದ್ದ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಮಂಗಳವಾರ ಪರಿಸ್ಥಿತಿ ಶಾಂತವಾಗಿತ್ತು. ಗುಂಡಿನ ಮೊರೆತದಿಂದಾಗಿ ಗಡಿ ಸಮೀಪದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಪರಿಸ್ಥಿತಿ ಶಾಂತವಾಗುತ್ತಿದ್ದಂತೆ ಮನೆ ತೊರೆದಿದ್ದ ಗ್ರಾಮಸ್ಥರು ಸಂಜೆಯ ವೇಳೆ ಗ್ರಾಮಕ್ಕೆ ಮರಳಿದರು.

ಪ್ರತಿಭಟನೆ ಸಲ್ಲಿಸಿದ ಭಾರತ

ಕದನವಿರಾಮ ಉಲ್ಲಂಘನೆಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ಭಾರತ ತನ್ನ ಪ್ರತಿಭಟನೆ ಸಲ್ಲಿಸಿದೆ. ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಕ್ರಮದ ಕುರಿತು ದೂರವಾಣಿ ಮೂಲಕ ನಡೆದ ಡಿಜಿಎಂ ಮಟ್ಟದ ಮಾತುಕತೆಯಲ್ಲಿ ಮಂಗಳವಾರ ಭಾರತ ತನ್ನ ಆಕ್ರೋಶ  ವ್ಯಕ್ತಪಡಿಸಿದೆ. ಗಡಿಯಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ವಾತಾವರಣ ಶಮನಗೊಳಿಸಲು ಎರಡೂ ದೇಶಗಳು ಧ್ವಜ ಸಭೆ ನಡೆಸಲು ಒಪ್ಪಿಗೆ ಸೂಚಿಸಿವೆ. ಭಾರತ ಮತ್ತು ಪಾಕ್ ಪ್ರತಿ ಮಂಗಳವಾರ ದೂರವಾಣಿ ಮೂಲಕ ಧ್ವಜ ಸಭೆ ನಡೆಸುತ್ತವೆ. ಇದಕ್ಕೂ ಮೊದಲು ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿ ಜು.16ರಿಂದ ಇಲ್ಲಿವರೆಗೆ ಬಿಎಸ್ಎಫ್ 16 ಬಾರಿ ಪಾಕ್ ಜತೆಗೆ ಮಾತುಕತೆ ನಡೆಸಲು ಪ್ರಯತ್ನಿಸಿದೆ. ಆದರೆ, ಪಾಕ್ ಸೇನೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾತು ಬಿಡಿ, ಯುದ್ಧ ಮಾಡಿ: ಶಿವಸೇನೆ
ಪಾಕಿಸ್ತಾನದ ಜತೆಗೆ ಮಾತುಕತೆ ನಡೆಸಬೇಡಿ. ಅದರ ಬದಲು ನೇರವಾಗಿ ಯುದ್ಧ ಘೋಷಿಸಿ ಎಂದು ಶಿವಸೇನೆ ಹೇಳಿದೆ. ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಜತೆಗೆ ಯಾಕೆ ಮಾತುಕತೆ ನಡೆಸಬೇಕು. ಯುದ್ಧ ಘೋಷಿಸಿ ತಕ್ಕ ಪಾಠ ಕಲಿಸಿ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿಗೆ ಸಲಹೆ ನೀಡಿದ್ದಾರೆ.

ಸೇನಾ ಮುಖ್ಯಸ್ಥರ ಜತೆ ಷರೀಪ್ ಚರ್ಚೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಹಾಗೂ ಭಾರತ-ಪಾಕ್ ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಗೆ ಸಂಬಂಧಿಸಿ ಮಂಗಳವಾರ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಸೇನಾ ಮುಖ್ಯಸ್ಥ ಜ.ರಹೀಲ್ ಶರೀಫ್ ಜತೆ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.