

ಜಮ್ಮು/ಶ್ರೀನಗರ: ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೆ ಮುಂದುವರೆದ ಅನಿಶ್ಚಿತತೆಯ ಮಧ್ಯೆ, ಸರ್ಕಾರ ರಚನೆಯ ಬಗ್ಗೆ ಮಾತುಕತೆ ನಡೆಸಲು ರಾಜ್ಯಪಾಲ ಎನ್ ಎನ್ ವೋಹ್ರಾ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಕ್ರಮವಾಗಿ ೨೮ ಮತ್ತು ೨೫ ಸ್ಥಾನಗಳನ್ನು ಗಳಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಗಳಿಗೆ ರಾಜ್ಯಪಾಲ ಪ್ರತ್ಯೇಕ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ತನಗೆ ೬-೭ ಸ್ವತಂತ್ರ ಶಾಸಕರ ಬೆಂಬಲ ಇದೆ ಎಂದು ಹೇಳಿರುವುದರಿಂದ ಬಿಜೆಪಿ ಪಕ್ಷವನ್ನು ಕೂಡ ರಾಜ್ಯಪಾಲರು ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯದ ವಿಧಾನಸಭೆ ಜನವರಿ ೧೬ಕ್ಕೆ ಅಂತ್ಯಗೊಳ್ಳಲಿದೆ.
ಪಿಡಿಪಿ ಸರ್ಕಾರಕ್ಕೆ ತಾನು ಬೆಂಬಲ ನೀಡುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಘೋಷಿಸಿದ್ದರೂ, ಕೂಡ ಬಿಜೆಪಿಯನ್ನು ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.
ನಾವು ಪಿಡಿಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದೇವೆ ಆದರೆ ಬರವಣಿಗೆಯಲ್ಲಿ ಯಾವುದೇ ಬದ್ಧತೆ ನೀಡಿಲ್ಲ ಎಂದಿರುವ ನ್ಯಾಷನಲ್ ಕಾನ್ಫರೆಸ್ ಅಧ್ಯಕ್ಷ ಒಮರ್ ಅಬ್ದುಲ್ಲ, "ನಾವು ಬೆಂಬಲ ನೀಡುವುದಾಗಿ ಬರೆಯದ ಪತ್ರವನ್ನು ಬಿಡುಗಡೆ ಮಾಡಿ ಪಿಡಿಪಿ ಪಕ್ಷ ಬಿಜೆಪಿ ಪಕ್ಷದ ಜೊತೆ ಆಟ ಆಡುತ್ತಿದೆ" ಎಂದು ಟ್ವೇಟ್ ಮಾಡಿರುವ ಅವರು, ನಾವು ಮಾತಿನಲ್ಲಿ ಮಾತ್ರ ಬೆಂಬಲ ಘೋಷಿಸಿದ್ದೇವೆ ಎಂದಿದ್ದಾರೆ.
ಇದಕ್ಕೂ ಮುಂಚೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಮಾತುಕತೆ ನಡೆಸಿದ್ದ ಬಿಜೆಪಿ ಪಕ್ಷ, ಮುಸ್ಲಿಮೇತರ ಮುಖ್ಯಮಂತ್ರಿಯ ಪಟ್ಟು ಹಿಡಿದಿದ್ದರಿಂದ ಮಾತುಕತೆ ಮುರಿದು ಬಿತ್ತು ಎನ್ನಲಾಗಿದೆ. ಹಾಗೆಯೇ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಬಿಜೆಪಿ ಶಾಸಕರಲ್ಲಿ ಒಡಕು ಮೂಡಿತ್ತು ಎಂದು ಕೂಡ ಮೂಲಗಳಿಂದ ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಂತ್ರಿ ಗುಲಾಬ್ ನಬಿ ಆಜಾದ್ ನವದೆಹಲಿಯಲ್ಲಿ ಮಾತನಾಡಿ, ಸರ್ಕಾರ ರಚಿಸುವ ಕ್ರಿಯೆಯಲ್ಲಿ ಜಮ್ಮು ಕಾಶ್ಮೀರದ ಜನತೆಯ ಸೂಕ್ಷ್ಮತೆಯನ್ನು ಬಿಜೆಪಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.